ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಆನ್ಸ್ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಹಾಗೂ ಆಷಾಢ ಸಂಭ್ರಮ ಕಾರ್ಯಕ್ರಮವು ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಮುಖ್ಯ ಅತಿಥಿಯಾಗಿ ಪದ್ಮಾ ರಾಘವೇಂದ್ರ ಭಾಗವಹಿಸಿ ಮಹಿಳೆಯರ ಸೇವಾ ಮನೋಭಾವ, ಸಂಘಟನಾ ಶಕ್ತಿ ಹಾಗೂ ಸಮಾಜಮುಖಿ ಚಟುವಟಿಕೆಗಳ ಮಹತ್ವದ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷ ಪ್ರಕಾಶ್ ಪೂಜಾರಿ ವಹಿಸಿ ಅವರು ನೂತನ ಅಧ್ಯಕ್ಷೆಯಾಗಿ ಆನ್. ಸಂಧ್ಯಾ ಪ್ರಕಾಶ್ ಹಾಗೂ ಕಾರ್ಯದರ್ಶಿಯಾಗಿ ಆನ್. ಪ್ರಮೀಳಾ ಶಿವರಾಜ್ ಅವರಿಗೆ ಪದಪ್ರದಾನ ಮಾಡಿ ಅಧಿಕಾರ ಹಸ್ತಾಂತರಿಸಿದರು.
ಬಳಿಕ ನೂತನ ಅಧ್ಯಕ್ಷೆ ಆನ್. ಸಂಧ್ಯಾ ಪ್ರಕಾಶ್ ಸ್ವೀಕೃತಿ ಭಾಷಣ ಮಾಡಿ, ಸದಸ್ಯರ ಸಹಕಾರದೊಂದಿಗೆ ಸೇವಾ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಲಯ ಸೇನಾನಿ ದಯಾನಂದ ಆಚಾರ್, ಆನ್ಸ್ ಕ್ಲಬ್ ಚೇರ್ಮನ್ ಪ್ರಕಾಶ್ ಹಂದಟ್ಟು, ರೋಟರಿ ಕ್ಲಬ್ ಕೋಟ ಬ್ರಿಗೇಡ್ ಕಾರ್ಯದರ್ಶಿ ಶಿವರಾಜ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯ ಅತಿಥಿಗಳನ್ನು ಆನ್ಸ್ ಕ್ಲಬ್ ಅಡ್ವೈಸರ್ ಶಶಿಕಲಾ ಗಣೇಶ್ ಪರಿಚಯಿಸಿ ಗೌರವಿಸಿದರು.
ಲತಾ ಸುರೇಶ್ ಆಚಾರ್ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಳಿಕ ಎಲ್ಲ ಸದಸ್ಯರು ಹಾಗೂ ಅತಿಥಿಗಳು ಸಹಭೋಜನದಲ್ಲಿ ಭಾಗವಹಿಸಿ ಆಷಾಢ ಸಂಭ್ರಮವನ್ನು ಹರ್ಷದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಹಾಗೂ ಆನ್ಸ್ ಕ್ಲಬ್‌ನ ಸದಸ್ಯರು, ಗಣ್ಯರು ಮತ್ತು ಆಹ್ವಾನಿತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯನ್ನು ಜಯಲಕ್ಷ್ಮಿ ರಾಜೇಶ್ ನೆರವೇರಿಸಿದರು. ಅನಿತಾ ಪ್ರಕಾಶ್ ಸ್ವಾಗತಿಸಿದರು. ನೂತನ ಅಧ್ಯಕ್ಷೆ ಸಂಧ್ಯಾ ಪ್ರಕಾಶ್ ಅವರನ್ನು ರೇಖಾ ಅನಿಲ್ ಸುವರ್ಣ ಹಾಗೂ ನೂತನ ಕಾರ್ಯದರ್ಶಿ ಪ್ರಮೀಳಾ ಶಿವರಾಜ್ ಅವರನ್ನು ಆನ್. ರೇವತಿ ರಾಜು ಪರಿಚಯಿಸಿದರು. ಪ್ರಮೀಳಾ ಶಿವರಾಜ್ ವಂದನಾರ್ಪಣೆ ಸಲ್ಲಿಸಿದರು.
















