ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಕ್ಲಬ್ ತೆಕ್ಕಟ್ಟೆಯ ಆಶ್ರಯದಲ್ಲಿ ತೆಕ್ಕಟ್ಟೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 2026–27ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ ಅನ್ನು ಮಂಗಳವಾರ ಉದ್ಘಾಟಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ರಾಜೀವ್ ಶೆಟ್ಟಿ ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಣಾಮ್ಯಾ ಅವರು 2026–27ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿ ಸ್ವಾಗತ ಭಾಷಣ ಮಾಡಿದರು.
ಸುರೇಶ್ ಬೆಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಜಿಲ್ಲಾ ಗವರ್ನರ್ ಟಿ. ಸುಧಾಕರ್ ಶೆಟ್ಟಿ ಹಾಗೂ ವಲಯ ಇಂಟರ್ಯಾಕ್ಟ್ ಅಧ್ಯಕ್ಷರು ವಿದ್ಯಾರ್ಥಿಗಳು ಇಂಟರ್ಯಾಕ್ಟ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಇಂಟರ್ಯಾಕ್ಟ್ ಅಧ್ಯಕ್ಷ ಗಣೇಶ್ ಶೆಟ್ಟಿ ಇಂಟರ್ಯಾಕ್ಟ್ ಕ್ಲಬ್‌ನ ಉದ್ದೇಶ, ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಸ್ನೇಹಭಾವ ಮತ್ತು ಸಮಾಜಸೇವೆಯ ಮನೋಭಾವ ಬೆಳೆಸುವಲ್ಲಿ ಅದರ ಪಾತ್ರವನ್ನು ವಿವರಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ರಾಜೀವ್ ಶೆಟ್ಟಿ ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದತೆ ಮೂಡಿಸಿ, ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಇಂಟರ್ಯಾಕ್ಟ್ ಕ್ಲಬ್ ಸಂಯೋಜಕ ಶ್ರೀ ಸಂತೋಷ್ ರೋಟರಿ ಹಾಗೂ ಇಂಟರ್ಯಾಕ್ಟ್ ನಡುವಿನ ದೀರ್ಘಕಾಲದ ಬಾಂಧವ್ಯದ ಕುರಿತು ಮಾತನಾಡಿದರು. ಸಿಂಟ್ಯಾ ಪೆರೆರಾ ಇಂಟರ್ಯಾಕ್ಟ್ ಕ್ಲಬ್ ಮೂಲಕ ವಿದ್ಯಾರ್ಥಿಗಳಿಗೆ ದೊರೆಯುವ ವಿವಿಧ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ರೋಟರಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ತೆಕ್ಕಟ್ಟೆಯ ಜಂಟಿ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.
















