ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಸಭೆಯ ಹಿಂದಿನ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಕುಂದಾಪುರ ಪೇಟೆಯಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಪಾರ್ಕಿಂಗ್ ಶುಲ್ಕ ನಿಗದಿ ಮಾಡಿದ್ದನ್ನು ಈಗ ಆಡಳಿತ ಮಂಡಳಿಯ ಅಧಿಕಾರ ಮುಗಿದ ಮೇಲೆ ಹಿಂದಿನ ನಿರ್ಣಯವನ್ನು ಇಟ್ಟುಕೊಂಡು ಪುರಸಭಾ ಮುಖ್ಯಾಧಿಕಾರಿಗಳು ಪಾರ್ಕಿಂಗ್ ಶುಲ್ಕ ವಸೂಲಿಗೆ ಟೆಂಡರ್ ಕರೆದಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದರು. ಕುಂದಾಪುರ ಪುರಸಭೆ ಕಟ್ಟಡ ನಿರ್ಮಾಣದ ಪರವಾನಿಗೆ ನೀಡುವಾಗ ಪ್ರತಿಯೊಂದಕ್ಕೂ ತೆರಿಗೆ ಪಡೆದುಕೊಂಡು ಈಗ ಹೊಸದಾಗಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಹೊರಟಿರುವುದು ಕಾನೂನು ವಿರೋಧಿ ಕ್ರಮವಾಗಿದೆ. ಇದರಿಂದ ವ್ಯಾಪಾರಸ್ಥರು, ಶುಲ್ಕ ವಸೂಲಿ ಟೆಂಡರ್ ಪಡೆದವರು ಮತ್ತು ವಾಹನ ಮಾಲಕರುಗಳ ನಡುವೆ ಅನಗತ್ಯ ವಾಗ್ವಾದಕ್ಕೆ ಎಡೆಮಾಡಿಕೊಡುತ್ತದೆ. ಪುರಸಭೆ ಪುರಸಭೆ ವ್ಯಾಪ್ತಿಯಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಿ ಪಾರ್ಕಿಂಗ್ ಸಮಸ್ಯೆ ಪರಿಹಾರ ಮಾಡಬೇಕು ಹಾಗೂ ಈಗಾಗಲೇ ವಾಹನ ಪಾರ್ಕಿಂಗ್ ಶುಲ್ಕ ವಸೂಲಿಗೆ ಕರೆದಿರುವ ಟೆಂಡರ್ ಪ್ರಕ್ರಿಯೆಗಳನ್ನು ಕೂಡಲೇ ನಿಲ್ಲಿಸಬೇಕು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಇದೇ ಬರುವ ಮಾ.9ರ ಸೋಮವಾರ ಬೆಳಿಗ್ಗೆ 10.30ಕ್ಕೆ ಕೋಟದ ಪಂಚವರ್ಣ ಕಛೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಂಚವರ್ಣ ಮಹಿಳಾ ಸಾಧಕ ಪುರಸ್ಕಾರಕ್ಕೆ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತೆ ಸಾಸ್ತಾನ ಪಾಂಡೇಶ್ವರದ ಲೀಲಾವತಿ ಗಂಗಾಧರ್ ಆಯ್ಕೆಗೊಳಿಸಿದ್ದು ಗಣ್ಯರ ಸಮ್ಮುಖದಲ್ಲಿ ಈ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸ್ನೇಹಕೂಟದ ಭಾರತಿ ವಿ. ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅಂತರ್ ಕಾಲೇಜು ಫೆಸ್ಟ್ಗಳು ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಸಹಕಾರಿ. ಪಠ್ಯಪುಸ್ತಕದ ಜ್ಞಾನದ ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯಗಳನ್ನು ಉದ್ದೀಪನಗೊಳಿಸುತ್ತವೆ ಎಂದು ಬ್ಯಾಂಕ್ ಆಫ್ ಬರೋಡಾ ಮಂಗಳೂರು ಶಾಖೆಯ ಮುಖ್ಯ ವ್ಯವಸ್ಥಾಪಕ ಡಾ. ಪಿ. ಬಾಲಮುರಗನ್ ನುಡಿದರು. ಅವರು ಆಳ್ವಾಸ್ ಸ್ವಾಯತ್ತ ಪದವಿ ಕಾಲೇಜಿನ ಹಿಂದಿ ವಿಭಾಗ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಉಮಂಗ್ 2026’ ಅಂತರ್ ಕಾಲೇಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಸೋಲು-ಗೆಲುವುಗಳು ಸ್ಪರ್ಧೆಯ ಭಾಗ. ಗೆಲುವು ನಮ್ಮನ್ನು ಹುರಿದಂಬಿಸಿದರೆ, ಸೋಲು ನಮಗೆ ಪಾಠ ಕಲಿಸುತ್ತದೆ. ಎರಡನ್ನೂ ಸಮಭಾವದಿಂದ ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಹಾಭಾರತವನ್ನು ಉಲ್ಲೇಖಿಸಿದ ಅವರು, ಯುದ್ಧಭೂಮಿಯಲ್ಲಿ ಜಯ ಅರ್ಜುನನ ಪಾಲಾದರೂ, ಜನರ ಹೃದಯಗಳಲ್ಲಿ ಕರ್ಣನ ವ್ಯಕ್ತಿತ್ವವೇ ಅಜರಾಮರವಾಗಿ ಉಳಿಯಿತು. ವ್ಯಕ್ತಿಯ ಸದ್ಗುಣಗಳು ಮತ್ತು ಧರ್ಮನಿಷ್ಠೆಯೇ ಅವನಿಗೆ ಶಾಶ್ವತ ಕೀರ್ತಿಯನ್ನು ನೀಡಬಲ್ಲವು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಯಡಾಡಿ-ಮತ್ಯಾಡಿಯಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಜಾಗೃತಿ ಕಾರ್ಯಕ್ರಮ ಭಾಗವಾಗಿ ಎನ್.ಎಸ್.ಎಸ್. ಸ್ವಯಂಸೇವಕರು ಬಿದ್ಕಲ್ಕಟ್ಟೆ ಮತ್ತು ಸ್ಥಳೀಯ ಭಾಗದಲ್ಲಿ ಪರಿಸರ ಕಾಳಜಿಯ ಬೀದಿನಾಟಕ ಪ್ರದರ್ಶಿಸಿದರು. ಈ ಸಂದರ್ಭ ಎನ್.ಎಸ್.ಎಸ್. ಶಿಬಿರಾಧಿಕಾರಿಗಳು, ಸ್ವಯಂಸೇವಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ನ ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಬದಲಾವಣೆ ಇತ್ತೀಚಿಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಸುಜಾತಾ ವೆಂಕಟೇಶ್ ಪೂಜಾರಿ, ಕಾರ್ಯದರ್ಶಿಯಾಗಿ ಅಮಿಷ, ಕೋಶಾಧಿಕಾರಿ ಮಮತಾ, ಉಪಾಧ್ಯಕ್ಷರಾಗಿ ಲವೀನಾ, ಜೊತೆ ಕಾರ್ಯದರ್ಶಿಯಾಗಿ ರತ್ನ ಅವರು ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದನಾ, ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಎಂಬಿಕೆ, ಎಲ್ಸಿಆರ್ಪಿ ವಿವಿಧ ಘಟಕಗಳ ಸಖಿ, ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ ಸಭೆಯಲ್ಲಿ ಉಪಸ್ಥಿತರಿದ್ದರು. ಎಂಬಿಕೆ ಉಷಾ ಗಣೇಶ್ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಎಲ್ಸಿಆರ್ಪಿ ಸುಜಾತಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಡಾ. ಬಾಬು ಜಗ ಜೀವನ ರಾಂ ಅವರ 119 ನೇ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳು ತಮ್ಮ ಸ್ವ-ವಿವರವುಳ್ಳ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 10 ರ ಒಳಗಾಗಿ ಸದರಿ ಕಛೇರಿಗಳಿಗೆ ಅಥವಾ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾನ್ಮಾಗಿ ಯುವ ನಾಯಕ, ನ್ಯಾಯವಾದಿ ಕೆ. ವಿಕಾಸ್ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶಿಸಿದ್ದಾರೆ. ಈ ಮೊದಲು ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಆಚರಣೆಯ ಹಿನ್ನೆಲೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ, ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಮ ವ್ಯಾಪ್ತಿಯಲ್ಲಿ ಹಾಗೂ ಕುಂದಾಪುರ ನಗರ ಠಾಣೆಯ ಕಸಬಾ, ವಡೇರಹೋಬಳಿ ಹಾಗೂ ಹಂಗಳೂರು ಗ್ರಾಮ ವ್ಯಾಪ್ತಿಯಲ್ಲಿ ಮಾರ್ಚ್ 5 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳ ಮದ್ಯ ಮಾರಾಟವನ್ನು ನಿಷೇಧಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಮೇಲೆ ತಿಳಿಸಲಾದ ದಿನಾಂಕದಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಹಾಗೂ ಕುಂದಾಪುರ ನಗರ ಠಾಣೆಯ ಕಸಬಾ, ವಡೇರಹೋಬಳಿ ಮತ್ತು ಹಂಗಳೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ (Dry Day) ಎಂದು ಘೋಷಿಸಿ, ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅದೇಶಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳಕ್ಕೆ ಗಣಪತಿ ಬೆತ್ತದ ಪೆಟ್ಟಿಗೆಯನ್ನು ಅರುಂಧತಿ ಎಚ್. ಮಯ್ಯ ಮತ್ತು ಕುಟುಂಬದವರು ಹುಬ್ಬಳ್ಳಿ ಹಾಗೂ ಕೆ. ಶ್ರೀನಿವಾಸರಾವ್ ಮತ್ತು ಸಹೋದರು ಕೋಟತಟ್ಟು ಪಡುಕರೆ ಇವರ ಪರವಾಗಿ ಹಿರಿಯ ಕೃಷಿಕ ಕೆ. ಶಿವಮೂರ್ತಿ ಕೋಟತಟ್ಟು ಪಡುಕೆರೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರಿಗೆ ಹಸ್ತಾಂತರಿಸಿದರು. ಗಣಪತಿ ದೇವರು ಇಡುವ ಬೆತ್ತದ ಪೆಟ್ಟಿಗೆ ಸುಮಾರು 15,000 ರೂ ಮೌಲ್ಯ ಹೊಂದಿದ್ದು ಇತ್ತೀಚಿಗೆ ಶ್ರೀದೇಗುಲದಲ್ಲಿ ಇದನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇಗುಲದ ಸಮಿತಿಯ ಸದಸ್ಯರಾದ ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಸುರೇಶ್ ಬಂಗೇರ, ಯಕ್ಷಗಾನ ಸೇವಾಕರ್ತರಾದ ಸುಧೀರ್ ಕೊಯ್ಕೂರು ದಂಪತಿಗಳು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು 2025ರಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿಗೆ ಮೂರು ರ್ಯಾಂಕ್ಗಳು ದೊರಕಿವೆ. ಬಿ.ಬಿ.ಎ ಪದವಿ ವಿಭಾಗದಲ್ಲಿ ಕೋಟೇಶ್ವರದ ಸೂರ್ಯನಾರಾಯಣ ಅಡಿಗ ಅವರ ಪುತ್ರಿ ಶ್ರಾವ್ಯ ಎಸ್.ಅಡಿಗ ಅವರಿಗೆ ಆರನೇ ರ್ಯಾಂಕ್, ಬಿ.ಸಿ.ಎ. ವಿಭಾಗದಲ್ಲಿ ಮರವಂತೆಯ ಮೋಹನದಾಸ ಶೆಣೈ ಅವರ ಪುತ್ರಿ ಶ್ರಾವ್ಯ ಶೆಣೈ ಅವರಿಗೆ ಎಂಟನೇ ರ್ಯಾಂಕ್ ಮತ್ತು ತೆಕ್ಕಟ್ಟೆಯ ರಾಘು ಅವರು ಪುತ್ರಿ ರಕ್ಷಿತಾ ಅವರಿಗೆ ಒಂಬತ್ತನೇ ರ್ಯಾಂಕ್ ದೊರೆತಿದೆ. ಅವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
