ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಿಗೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುತ್ತಾ ವಿದ್ಯಾರ್ಥಿಗಳು ತಿಳಿದೋ ತಿಳಿಯದೆಯೋ ಅಸುರಕ್ಷತೆಯನ್ನು ಉಂಟುಮಾಡುವ ಯಾವುದೇ ರೀತಿಯ ದೈಹಿಕ ಸ್ಪರ್ಶಗಳನ್ನು ಮಾಡಬಾರದು. ಅಂತಹ ಸ್ಪರ್ಶಗಳು ಉಂಟಾದ ಸಮಯದಲ್ಲಿ ಗಟ್ಟಿಯಾದ ಸ್ವರದಲ್ಲಿ ನೇರದೃಷ್ಟಿಯ ಮೂಲಕ ವಿರೋಧ ವ್ಯಕ್ತಪಡಿಸುವುದು ಪ್ರಥಮ ಕಾರ್ಯವಾಗಿರುತ್ತದೆ. ನಂತರ ಸಹಪಾಠಿಗಳಲ್ಲಿ, ತಂದೆ ತಾಯಿಯರಲ್ಲಿ, ಅಧ್ಯಾಪಕರಲ್ಲಿ, ಪ್ರಾಂಶುಪಾಲರಲ್ಲಿ, ಪೋಷಕರಲ್ಲಿ, ಅಥವಾ ಮಕ್ಕಳ ಸಹಾಯವಾಣಿಯಲ್ಲಿ ತಮ್ಮ ತೊಂದರೆಗಳನ್ನು ಹೇಳಿಕೊಂಡು ರಕ್ಷಣೆ ಪಡೆಯುವುದು ಮಕ್ಕಳ ಹಕ್ಕಾಗಿರುತ್ತದೆ ಎಂದು ಗ್ರಾಮಾಂತರ ಪೋಲೀಸ್ ಠಾಣೆ ಕಂಡ್ಲೂರಿನ ಎಎಸ್ಐ ಆದ ಶಂಕರ್ ಹೇಳಿದರು.
ಅವರು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕಾನೂನುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವ ಸಲುವಾಗಿ ಆಗಮಿಸಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮಾತನಾಡಿದರು. ಇದಕ್ಕೆ 1098 ಅಥವಾ 112 ಸಂಖ್ಯೆಗೆ ಮಕ್ಕಳು ಕರೆ ಮಾಡಿ ದೂರು ನೀಡಿದಲ್ಲಿ 20 ನಿಮಿಷಗಳಲ್ಲಿ ಪೋಲೀಸ್ ಇಲಾಖೆ ಆ ಮಕ್ಕಳ ನೆರವಿಗೆ ಧಾವಿಸಿ ಬರುತ್ತದೆ. ಶಾಲೆಯಲ್ಲಿ ಇರುವ ದೂರು ಪೆಟ್ಟಿಗೆಯಲ್ಲಿ ತಮ್ಮ ವಿಚಾರ ಬರೆದು ತಿಳಿಸಿ, ಬಗೆಹರಿಸಿಕೊಳ್ಳಿ. ಯಾವುದೇ ಕಾರಣಕ್ಕೂ 18 ವರ್ಷಗಳ ಒಳಗಡೆ ವಾಹನ ಚಲಾವಣೆ ಮಾಡಬಾರದು. ಮನೆಯ ಹಿರಿಯರು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾವಣೆ ಮಾಡುವುದನ್ನು ಕಂಡಲ್ಲಿ ವಿನಂತಿಯ ಮೂಲಕ ಅವರಿಗೆ ತಿಳಿಹೇಳಿ. ಎನ್ನುತ್ತಾ ಮಕ್ಕಳ ಅಹವಾಲುಗಳಿಗೆ ಸೂಕ್ತ ಉತ್ತರಗಳನ್ನು ನೀಡಿ, ತಮ್ಮ ಜೀವನಾನುಭವದ ಘಟನೆಗಳ ಮೂಲಕ ಮಕ್ಕಳ ಮನಸ್ಸಿಗೆ ಸ್ಥೈರ್ಯವನ್ನು ನೀಡಿದರು.
ಗ್ರಾಮಾಂತರ ಪೋಲೀಸ್ ಠಾಣೆ ಕಂಡ್ಲೂರಿನ ಎಎಸ್ಐ ಆದ ಲಕ್ಷ್ಮಣ್ ಅವರು ಮಾತನಾಡಿ, ಪೋಲೀಸ್ ಇಲಾಖೆ ಇರುವುದು ಸರಿಯಾದ ಮಾರ್ಗದಲ್ಲಿರುವ ಜನರ ಸೇವೆಗಾಗಿಯೇ ವಿನಃ ಭಯ ಹುಟ್ಟಿಸುವುದಕ್ಕಲ್ಲ. ಪೋಲೀಸರು ಸರ್ಕಾರಿ ಕೆಲಸವೆಂದರೆ ಸಮಾಜದ ಸೇವೆ ಎಂದು ತಿಳಿದು ಕೆಲಸ ಮಾಡುವವರು. ಅನ್ಯಾಯದ ವಿರುದ್ಧ ಹೋರಾಡುವವರ ಸಹಾಯಕ್ಕೆ ಸದಾ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಧೈರ್ಯ ತುಂಬುತ್ತಾ , ಶಾಲೆಯಲ್ಲಿ ಮಕ್ಕಳಿಗೆ ಹಿತರಕ್ಷಣೆಗೆ ಇರುವ ಎಲ್ಲಾ ವ್ಯವಸ್ಥೆಗಳ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ-ಶಿಕ್ಷಕೇತರವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿಯಾದ ಸುಮಲತಾ ಜೋಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.















