ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಾಲೆಯೆಂದರೆ ದೇವಸ್ಥಾನದಷ್ಟೇ ಪವಿತ್ರ ಸ್ಥಳ. ಅದರ ಬೆಳವಣಿಗೆಯ ಹಿಂದೆ ಶಿಕ್ಷಕರ ಜೊತೆಗೆ ಊರವರ ಅವಿರತ ಶ್ರಮವಿರುತ್ತೆ. ಎಲ್ಲರನ್ನೂ ಒಳಗೊಂಡು ಸರಕಾರಿ ಶಾಲೆಯ ಗುಣಮಟ್ಟ ಕಾಯ್ದುಕೊಳ್ಳುವುದು ಇಂದಿನ ಅಗತ್ಯ ಎಂದು ಬೈಂದೂರು ಬಿಐಇಆರ್‌ಟಿ ನಾಗರತ್ನ ಹೇಳಿದರು.



ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ಮತ್ತು ಚಿಣ್ಣರ ಸಂಭಮ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅವರು ಮಾತನಾಡಿ, ಕನ್ನಡ ಮಾಧ್ಯಮ ಇಂಗ್ಲೀಷ್ ಮಾಧ್ಯಮ ಶಾಲೆಗಳೆಂಬ ಭೇದಭಾವ ಮಾಡದೇ, ಗುಣಾತ್ಮಕ ಶಿಕ್ಷಣದ ಬಗ್ಗೆ ಪೋಷಕರು ಗಮನಹರಿಸಬೇಕಿದೆ. ಸರಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಗೇರಿದ ಸಾವಿರಾರು ಉದಾಹರಣೆಗಳಿವೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಮಾಹದೇವ ಬಿಲ್ಲವ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ತಗ್ಗರ್ಸೆ ಶಾಲೆ, ಶತಮಾನದ ಹೊಸ್ತಿಲಿನಲ್ಲಿದೆ. ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರವನ್ನು ಒಗ್ಗಟ್ಟಾಗಿ ಶತಮಾನೋತ್ಸವವನ್ನು ಆಚರಿಸಬೇಕಿದೆ ಎಂದರು.
ಬೈಂದೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗಣಪತಿ ಹೋಬಬಳಿದಾರ್, ಸ್ಥಳೀಯರಾದ ರಾಜು ಹುಳುವಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಯದರ್ಶಿ ಸುಧಾಕರ ಮೊಗವೀರ, ಖಜಾಂಚಿ ಮಹಾದೇವ ಬಿಲ್ಲವ, ಎಸ್ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ, ವಿದ್ಯಾರ್ಥಿ ನಾಯಕ ಕಾರ್ತಿಕ್ ಉಪಸ್ಥಿತರಿದ್ದರು.



ಈ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಡುಗೆ ಸಹಾಯಕರನ್ನು ಸನ್ಮಾನಿಸಲಾಯಿತು. ಶಾಲೆಯ ಅಭಿವೃದ್ಧಿಯಲ್ಲಿ ಸಹಕರಿಸಿದ ಗ್ರಾಮಸ್ಥರು ಹಾಗೂ ಹಳೆವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ತಗ್ಗರ್ಸೆ ಶಾಲಾ ಮುಖ್ಯೋಪಧ್ಯಾಯಿನಿ ಮುಕ್ತ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಶಿಕ್ಷಕಿ ಮಾಲತಿ ಎಸ್. ಸ್ವಾಗತಿಸಿ, ಸಹಶಿಕ್ಷಕಿ ಸಂಗೀತ ವಂದಿಸಿದರು. ಸಹಶಿಕ್ಷಕಿ ಸಾರಿಕಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.














