ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನವಾಲ ಅವರನ್ನು ಗುರುವಾರ ಭೇಟಿಯಾದ ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿವೃದ್ಧಿ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು.
ಗಂಗೊಳ್ಳಿ ರಾಜ್ಯದ 2ನೇ ಅತೀದೊಡ್ಡ ಮೀನುಗಾರಿಕ ಬಂದರಾಗಿದ್ದು, 200ಕ್ಕೂ ಹೆಚ್ಚು ದೋಣಿಗಳು ಅವಲಂಬಿತವಾಗಿವೆ. ಮತ್ಯೋದ್ಯಮ, ವ್ಯಾಪಾರ ಹಾಗೂ ಕರಾವಳಿಯ ವಾಣಿಜ್ಯ ವ್ಯವಹಾರಕ್ಕೆ ಗಂಗೊಳ್ಳಿ ಬಂದರು ಪ್ರಮುಖ ಕೇಂದ್ರವಾಗಿದೆ.
ಗಂಗೊಳ್ಳಿಯಿಂದ ತಾಲೂಕು ಕೇಂದ್ರ ಕುಂದಾಪುರವು ಕೂಗಳತೆಯ ದೂರದಲ್ಲಿದ್ದರೂ, ಇಲ್ಲಿನ ಜನರು ಪ್ರಸ್ತುತ ರಾ.ಹೆ.-66 ಮೂಲಕ 17-18ಕಿ.ಮೀ. ಸಂಚರಿಸಿ ಕುಂದಾಪುರ ತಲುಪಬೇಕಿದೆ.
ಇದರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹಾಗಾಗಿ ಗಂಗೊಳ್ಳಿ-ಕುಂದಾಪುರ ಸೇತುವೆ ಯೋಜನೆಯನ್ನು ಸಾಗರಮಾಲಾ ಯೋಜನೆಯ ಬಂದರು ಸಂಪರ್ಕ ಘಟಕದಡಿ ಸೇರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಶಿಫಾರಸು ಮಾಡುವಂತೆ ಸಂಸದರು ಒತ್ತಾಯಿಸಿದರು.
ಶಿರೂರು ಅಳಿವೆಗದ್ದೆ ಬಂದರಿನಲ್ಲಿ ಮೂಲಸೌಕರ್ಯವನ್ನು ಒದಗಿಸಿ ಮೀನುಗಾರರ ಬದುಕನ್ನು ಬೆಂಬಲಿಸಿ ಸುಸ್ಥಿರ ಮೀನುಗಾರಿಕೆಯನ್ನು ಉತ್ತೇಜಿಸಬೇಕು ಎಂದು ಸಂಸದರು ವಿವರಿಸಿದ್ದಾರೆ.















