ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಹೊರಾಂಗಣ ವೇದಿಕೆಯಲ್ಲಿ ಧ್ವಜಾರೋಹಣ ಪುರಸ್ಸರವಾಗಿ ವಿಜೃಂಭಣೆಯಿಂದ 79ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ದಂತ ವೈದ್ಯರು ಕಾಟಿಪಳ್ಳ ಡಾ. ಅರವಿಂದ ಭಟ್ ಕೆ. ಮತ್ತು ಶ್ರೀ ಎನ್‌ಎಸ್‌ಆರ್ ವಕೀಲರು, ಕುಂದಾಪುರ ಅವರನ್ನು ಶಾಲೆಯ ವಾದ್ಯಮೇಳದೊಂದಿಗೆ ಸ್ವಾಗತಿಸಲಾಯಿತು. ಅತಿಥಿಗಳು ಧ್ವಜಾರೋಹಣಗೈದು ಧ್ವಜವಂದನೆ ಸಲ್ಲಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ದೇಶಭಕ್ತಿಯ ಘೋಷವಾಕ್ಯಗಳನ್ನು ಬೋಧಿಸಿದರು. ವಿದ್ಯಾರ್ಥಿಗಳು ಪಥಸಂಚಲನದ ಮೂಲಕ ಧ್ವಜವಂದನೆಗೈದರು.
ಡಾ. ಅರವಿಂದ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಾಲೆಯು ಉತ್ತಮ ಶಿಸ್ತನ್ನು ಹೊಂದಿದ್ದು, ಆ ಎಲ್ಲಾ ಶಿಸ್ತನ್ನು ಮಕ್ಕಳು ಜೀವನದಲ್ಲಿ ಸದಾ ಮೈಗೂಡಿಸಿಕೊಳ್ಳಬೇಕು. ದೇಶದ ಮುಂದಿನ ಪ್ರಜೆಗಳು ಇಂದಿನ ವಿದ್ಯಾರ್ಥಿಗಳಾದ ನೀವು. ಈ ಎಲ್ಲಾ ಶಿಸ್ತನ್ನು ಮೈಗೂಡಿಸಿಕೊಂಡರೆ ನಮ್ಮ ದೇಶ ಶಿಸ್ತಿನಲ್ಲೂ, ಸಂಯಮದಲ್ಲೂ ಸಾಧನೆಗೈಯ್ಯುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ನಾವು ಬೇರೆಲ್ಲ ಹಬ್ಬಗಳನ್ನು ನಮ್ಮ ನಮ್ಮ ಮತ ಧರ್ಮಗಳಂತೆ ಆಚರಿಸಿದರೆ, ಈ ಸಂತೋಷವನ್ನು ಎಲ್ಲರೂ ಸೇರಿ ಆಚರಿಸಿಕೊಳ್ಳುತ್ತಿದ್ದೇವೆ. ಇದುವೇ ರಾಷ್ಟ್ರೀಯ ಭಾವೈಕ್ಯತೆಯ ಪ್ರತೀಕವಾಗಿದೆ. ಎಂದರು.
ಕುಂದಾಪುರ ವಕೀಲರಾದ ಶ್ರೀ ಎನ್‌ಎಸ್‌ಆರ, ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ಇಂದು ನಾವೆಲ್ಲಾ ಸಂತೋಷ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸುವಂತಾಗಿದೆ. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಮಂಗಳ ಪಾಂಡೆ, ಝಾನ್ಸಿರಾಣಿ ಲಕ್ಷ್ಮೀಬಾಯಿ ಇವರೇ ಮೊದಲಾದ ವ್ಯಕ್ತಿಗಳ ಮಾತು ಸದಾ ನಮ್ಮ ಕಿವಿಗಳಲ್ಲಿ ಮೊಳಗುತ್ತಿರಬೇಕು. ಆಲಸ್ಯ, ತಾತ್ಸಾರ, ದುಷ್ಟಚಟಗಳಿಂದ ಮುಕ್ತರಾಗಿ, ದೇಶದ ಅಭಿವೃದ್ಧಿಯ ಕಡೆಗೆ ಸದಾ ಗಮನಿಸಬೇಕು. ವಿದ್ಯಾರ್ಥಿಗಳಾದ ನೀವು ಸದಾ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಬೇರೆಯವರಿಗೆ ಸಹಾಯ ಮಾಡುತ್ತಿರಬೇಕು. ನಿಮ್ಮ ವಾತಾವರಣವನ್ನು ಶುದ್ಧವಾಗಿರಿಸಿಕೊಳ್ಳಬೇಕು. ಸತ್ಯವಾದ ನುಡಿ, ಪ್ರಾಮಾಣಿಕತೆ, ಸ್ವಾಭಿಮಾನ ನಿಮ್ಮ ಉಸಿರಾಗಿರಬೇಕು. ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್. ಶಾಲೆಯ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸುಜಾತಾ ಸದಾರಾಮ್ ಮತ್ತು ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು.
ವಿದ್ಯಾರ್ಥಿ ಚಿನ್ಮಯ್ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿನಿ ವೈಷ್ಣವೀ ಸರ್ವರನ್ನು ಸ್ವಾಗತಿಸಿ, ವಿದ್ಯಾರ್ಥಿ ಪ್ರದ್ಯುಮ್ನ ವಿ.ಕೆ ಧನ್ಯವಾದವನ್ನು ಸಮರ್ಪಿಸಿದರು.















