ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸಾರ್ವಜನಿಕರ ಹಿತದೃಷ್ಟಿಯಿಂದ ಉಡುಪಿ ನಗರ, ಗ್ರಾಮೀಣ ಪ್ರದೇಶ ಹಾಗೂ ಗಡಿ ಭಾಗಗಳಲ್ಲಿ ಸಿಸಿಟಿವಿ ಅವಳಡಿಕೆಗೆ ಮುಂದಾಗಿರುವ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅವರು ಉಡುಪಿ ಚೆಂಬರ್ ಆಫ್ ಕಾಮರ್ಸ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಅಳವಡಿಸಲು ಉದ್ದೇಶಿಸಲಾಗಿರುವ ಶ್ಯೇನ ದೃಷ್ಟಿ (ಸಿಸಿಟಿವಿ ಅಳವಡಿಕೆ) ಕೇಂದ್ರಕ್ಕೆ ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿ, ಸಿಸಿಟಿವಿ ಅಳವಡಿಕೆಯಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟಬಹುದು ಎಂದರು.
ಜಿಲ್ಲೆಯ 207 ಜಂಕ್ಷನ್‌ಗಳಲ್ಲಿ 621 ನೈಟ್ ವಿಸನ್ ಕ್ಯಾಮೆರಾಗಳು ಮತ್ತು 10 ಜಿಲ್ಲಾ ಗಡಿ ರಸ್ತೆಗಳಲ್ಲಿ 20 ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಯೋಜನೆಗೆ ಸುಮಾರು 2.50 ರಿಂದ 3 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಇದನ್ನು ಸಂಪೂರ್ಣವಾಗಿ ಉಡುಪಿ ವಾಣಿಜ್ಯೋದ್ಯಮ ಮಂಡಳಿಯು ನೀಡಿದೆ. ಇದಕ್ಕಾಗಿ ಚೆಂಬರ್ ಆಫ್ ಕಾಮರ್ಸ್ ಸಂಘಟನೆಗೆ ನಾನು ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.










