ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೆಂಪು ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ರವಿವಾರ ಕಾಲ್ತೋಡು ಬೊಳ್ಳಂಬಳ್ಳಿಯಲ್ಲಿ ಸಂಭವಿಸಿದೆ.
ಹೇರಂಜಾಲು ಗ್ರಾಮದ ಶಿವಾನಂದ ದೇವಾಡಿಗ (49) ಮೃತಪಟ್ಟ ದುರ್ದೈವಿ.
ಶಿವಾನಂದ ಅವರು ಜು.26 ರಂದು ಬೆಳಿಗ್ಗೆ ಕಾಲ್ತೋಡು ಬೊಳ್ಳಂಬಳ್ಳಿಯಲ್ಲಿರುವ ಕೆಂಪು ಕಲ್ಲು ಕ್ವಾರೆ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರಿಗೆ ದಿಢೀರ್ ತಲೆತಿರುಗಿ ಬಿದ್ದಿದ್ದರಿಂದ ಗಾಯಗೊಂಡಿದ್ದರು ಎನ್ನಲಾಗಿದೆ. ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಪತ್ನಿ, ಮೃತರ ತಲೆಯ ಭಾಗದಲ್ಲಿದ್ದ ಗಾಯವನ್ನು ಕಂಡು ಪತಿಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ನೀಡಿದ ದೂರಿನನ್ವಯ ಬೈಂದೂರು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
















