ಕುಂದಾಪ್ರ ಡಾಟ್ ಕಾಂ | ಯಾಕೂಬ್ ಖಾದರ್ ಗುಲ್ವಾಡಿ.
ಚಿತ್ರರಂಗ ಎನ್ನುವುದು ಬರಿ ವೈಭವದ ಜಗತ್ತಷ್ಟೇ ಅಲ್ಲ; ಅದೊಂದು ಆಳವಾದ ಅಧ್ಯಯನ, ನಿರಂತರ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯ ಮಾಧ್ಯಮ ಎಂಬುದನ್ನು ತಮ್ಮ ಬರವಣಿಗೆ ಹಾಗೂ ನಿರ್ದೇಶನದ ಮೂಲಕ ಸಾಬೀತುಪಡಿಸಿದವರು ಡಾ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು.
ಬಾಲ್ಯದ ಗೆಳೆಯನಾಗಿ, ಅವರ ಈ ಶೈಕ್ಷಣಿಕ ಹಾಗೂ ಸೃಜನಶೀಲ ಹಾದಿಯನ್ನು ಹತ್ತಿರದಿಂದ ಕಂಡ ನನಗೆ, ಇಂದು ಅವನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಡೆಯುತ್ತಿರುವ ಗೌರವಗಳು ಅತ್ಯಂತ ಹೆಮ್ಮೆಯ ಕ್ಷಣಗಳನ್ನು ತಂದಿತ್ತಿವೆ.
ಇತ್ತೀಚೆಗಷ್ಟೇ ಪ್ರಕಟಗೊಂಡ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (2024) ಯಲ್ಲಿ, ಡಾ. ಪ್ರದೀಪ್ ಬರಹದ ‘ನಾನಿರುವುದು ನಮಗಾಗಿ ನಾಡಿರುವುದು ನಮಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’(ಮಿರರ್ ಪುಸ್ತಕ, ಕುಂದಾಪುರ) ಪ್ರಕಟಿಸಿರುವ ಕೃತಿಗೆ ಅತ್ಯುನ್ನತ “ಸ್ವರ್ಣ ಕಮಲ” ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಚಲನಚಿತ್ರ ಕುರಿತ ಅತ್ಯುತ್ತಮ ಕೃತಿಗೆ ನೀಡಲಾಗುವ ಈ ಪ್ರಶಸ್ತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ನಮ್ಮ ಕರಾವಳಿ ಭಾಗಕ್ಕೆ ದಕ್ಕಿದ ಬಹುದೊಡ್ಡ ಗೌರವ.
ಕುಂದಾಪುರ ತಾಲೂಕಿನ ಕೆಂಚನೂರಿನಿಂದ ಬಂದ ಪ್ರದೀಪನಿಗೆ ಬಾಲ್ಯದಿಂದಲೂ ಸಾಹಿತ್ಯದ ಓದು, ನಿರಂತರ ಬರಹ ಮತ್ತು ಸಿನಿಮಾದ ಮೇಲೆ ಅಪಾರ ಪ್ರೀತಿ. ಮಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ ವಿಷಯದಲ್ಲಿ ಪಿಎಚ್.ಡಿ. ಪಡೆದಿದ್ದಾನೆ. ಪ್ರಸ್ತುತ ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರದೀಪ್, ತರಗತಿಯ ಬೋಧನೆಯ ಜೊತೆಗೇ ಸಿನಿಮಾದ ಆಳ-ಅಗಲಗಳನ್ನು ತಲುಪಿದವನು.
ಪುಣೆಯ ಪ್ರತಿಷ್ಠಿತ ‘FTII’ ನಿಂದ ಫಿಲ್ಮ್ ಅಪ್ರಿಸಿಯೇಶನ್ ಕೋರ್ಸ್ ಹಾಗೂ ಕೋಲ್ಕತ್ತಾದ ‘SRFTII’ ನಿಂದ ಧ್ವನಿ ಕೋರ್ಸ್ ಪೂರ್ಣಗೊಳಿಸಿರುವ ಪ್ರದೀಪ್, ಸಿನಿಮಾ ಮತ್ತು ಚರಿತ್ರೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾನೆ. ನನ್ನ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ವಿಜೇತ ‘ರಿಸರ್ವೇಶನ್’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವಲ್ಲಿಯೂ ಪ್ರದೀಪನ ಪಾತ್ರ ಪ್ರಮುಖವಾದದ್ದು.
ಕೇವಲ ಸೈದ್ಧಾಂತಿಕ ಬರಹಕ್ಕೆ ಸೀಮಿತವಾಗದೆ, ಪ್ರದೀಪ್ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿದ “The Hug of Emptiness” ಸಾಕ್ಷ್ಯಚಿತ್ರಕ್ಕೆ 19ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (MIFF 2026) ಪ್ರತಿಷ್ಠಿತ FIPRESCI ಅಂತರರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿ ಲಭಿಸಿತ್ತು. ಈಗ ಬರವಣಿಗೆಗೂ ರಾಷ್ಟ್ರೀಯ ಮಟ್ಟದ ‘ಸ್ವರ್ಣ ಕಮಲ’ ಒಲಿದು ಬಂದಿರುವುದು ಅವನ ನಿರಂತರ ಪರಿಶ್ರಮ ಮತ್ತು ಬದ್ಧತೆಗೆ ಸಿಕ್ಕ ಪ್ರತಿಫಲ.
ಪ್ರದೀಪನ ಈ ಎಲ್ಲಾ ಸಾಧನೆಯ ಹಿಂದೆ ಅವನ ಪತ್ನಿ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸೌಮ್ಯ ಹೇರಿಕುದ್ರು ಅವರ ಬೆಂಬಲ ದೊಡ್ಡದಿದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದ ಮೇಲೆ ಪಿಎಚ್‌ಡಿ ಮಾಡಿರುವ ಸೌಮ್ಯ, ಶೈಕ್ಷಣಿಕವಾಗಿ ಹಾಗೂ ಸೃಜನಶೀಲವಾಗಿ ಪ್ರದೀಪನ ಪ್ರತಿ ಹೆಜ್ಜೆಗೂ ಶಕ್ತಿಯಾಗಿ ನಿಂತಿದ್ದಾರೆ. ಇಬ್ಬರೂ ಸಾಹಿತ್ಯಿಕವಾಗಿ, ಪ್ರಬುದ್ಧ ಚಿಂತಕರಾಗಿ ಬೆಳೆಯುತ್ತಿರುವುದು ಸಂತಸದ ವಿಷಯ.
ಬಾಲ್ಯದ ಒಡನಾಡಿಯಾಗಿ, ನನ್ನೆಲ್ಲ ಕಷ್ಟ-ಸುಖಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತ ಗೆಳೆಯ ಪ್ರದೀಪ್ ಇಂದು ರಾಷ್ಟ್ರದ ಉನ್ನತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದನ್ನು ಕಣ್ಣಾರೆ ನೋಡುವುದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ.
ಸಿನಿಮಾವನ್ನು ಸಿದ್ಧಾಂತ, ಸಾಹಿತ್ಯ ಮತ್ತು ಕಲೆಯನ್ನಾಗಿ ಪ್ರೀತಿಸುವ ಡಾ. ಪ್ರದೀಪ್ ಕೆಂಚನೂರು ಅವರ ಜ್ಞಾನದ ದಾರಿಯಲ್ಲಿ ಇನ್ನಷ್ಟು ಇಂತಹ ಅದ್ಭುತ ಕೃತಿಗಳು, ಸಿನಿಮಾಗಳು ಮೂಡಿಬರಲಿ ಎಂಬುದು ನನ್ನ ಹಾರೈಕೆ.
















