ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೈಂಟ್ ಥಾಮಸ್ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾರತೀಯ ಸೇನೆಯ ನಿವೃತ್ತ ಯೋಧರಾದ ಜಾನ್ ಸಿ. ಥಾಮಸ್ ಅವರು ಆಗಮಿಸಿ, ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ದೇಶದ ಭದ್ರತೆ ಮತ್ತು ಸ್ವಾತಂತ್ರ್ಯಕ್ಕಾಗಿ ಸೈನಿಕರು ಸಲ್ಲಿಸುವ ಸೇವೆಯನ್ನು ವಿವರಿಸಿದರು. ವಿದ್ಯಾರ್ಥಿಗಳು ದೇಶದ ಉತ್ತಮ ನಾಗರಿಕರಾಗಿ ಬೆಳೆಯಬೇಕು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ಅವರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿ, ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ದೇಶಭಕ್ತಿ ಗೀತೆಗಳು, ನೃತ್ಯಗಳು, ದೇಶಭಕ್ತಿಯ ನಾಟಕಗಳು, ಭಾಷಣಗಳು ಹಾಗೂ ವಿವಿಧ ಕಲಾ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ಭಾರತದ ವೈವಿಧ್ಯತೆ, ಸಂಸ್ಕೃತಿ ಮತ್ತು ದೇಶಪ್ರೇಮವನ್ನು ಮನೋಜ್ಞವಾಗಿ ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ವಹಿಸಿದ್ದರು. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟ್ರಗೀತೆ ಹಾಡಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ದೇಶದ ಏಕತೆ, ಶಾಂತಿ ಮತ್ತು ಪ್ರಗತಿಗಾಗಿ ಪ್ರತಿಜ್ಞೆ ಕೈಗೊಂಡರು.
ಉಪಪ್ರಾಂಶುಪಾಲರಾದ ಸಿಸ್ಟರ್ ಕಾರ್ಮೆಲ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಅಭಿನಂದಿಸಿದರು.
“ನಮ್ಮ ಹೃದಯದಲ್ಲಿ ಸ್ವಾತಂತ್ರ್ಯ, ನಮ್ಮ ರಾಷ್ಟ್ರದಲ್ಲಿ ಏಕತೆ, ನಮ್ಮ ಆತ್ಮದಲ್ಲಿ ಹೆಮ್ಮೆ”ಎಂಬ ಸಂದೇಶದೊಂದಿಗೆ ಕಾರ್ಯಕ್ರಮವು ದೇಶಭಕ್ತಿಯ ಕಳೆ ಹೆಚ್ಚಿಸಿತು. ಅಂತಿಮವಾಗಿ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು .
ಕಾರ್ಯಕ್ರಮದ ನಿರೂಪಣೆ, ಸ್ವಾಗತ ಭಾಷಣ, ವಂದನಾರ್ಪಣೆ, ಶಾಲಾ ವಿದ್ಯಾರ್ಥಿಗಳು ನೆರವೇರಿಸಿದರು.
















