ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ‘ವಿಧಿಕ್ತ–2026’ ಕಾನೂನು ಅರಿವು ಮೂಡಿಸುವ ಮೂಟ್ ಕೋರ್ಟ್ ಮಾದರಿಯ ಅಂತರ್ ತರಗತಿ ಸ್ಪರ್ಧೆಯ ಸಮಾರೋಪ ಸಮಾರಂಭ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳು ಕಾನೂನಿನ ಮೂಲಭೂತ ಅರಿವನ್ನು ಹೊಂದಿರುವುದು ಅತ್ಯಂತ ಅಗತ್ಯ. ಕಾನೂನಿನ ಅರಿವು ಕೇವಲ ನ್ಯಾಯಾಲಯದ ವಿಚಾರಗಳಿಗೆ ಸೀಮಿತವಾಗಿರದೆ, ನಮ್ಮ ದೈನಂದಿನ ಜೀವನದಲ್ಲಿಯೂ ಅನ್ವಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು, ಜವಾಬ್ದಾರಿಯುತ ಹಾಗೂ ಉತ್ತಮ ಮಾನವರಾಗಿ ಬದುಕಬೇಕು ಎಂದು ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಖಾ ಕೆ. ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಸ್ಪರ್ಧೆಯ ತೀರ್ಪುಗಾರರಾದ ಉಡುಪಿ ಬಾರ್ ಅಸೋಸಿಯೇಷನ್‌ನ ವಕೀಲರಾದ ಪ್ರಸಾದಿ ಎಸ್. ಸುವರ್ಣ, ಪವರ್ ಟಿವಿ ನ್ಯೂಸ್ ನಿರೂಪಕರಾದ ಪ್ರಣುತ್ ಆರ್ ಗಾಣಿಗ, ಪ್ರಾಕ್ತನ ವಿದ್ಯಾರ್ಥಿನಿ ವಕೀಲೆ ನಾಗರತ್ನ, ವಿ–ರೀಚ್ ಅಕಾಡೆಮಿಯ ಕಾನೂನು ಸಲಹೆಗಾರರಾದ ಜೀವನ್ ಲ್ಯಾನ್ಸಿ ಫೆರೇರಾ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಕಿಶೋರ್ ಕೃಷ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಪ್ರೀತಿ ಹೆಗ್ಡೆ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೀತಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ವಿ. ಭಟ್ ವಂದಿಸಿದರು. ವಿಭಾಗದ ಪ್ರಾಧ್ಯಾಪಕರಾದ ಪೃಥ್ವಿಶ್ರೀ ಜಿ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ತೃತೀಯ ಬಿ.ಸಿ.ಎ. ವಿಭಾಗದ ವಿದ್ಯಾರ್ಥಿ ಆದಿತ್ಯ ಪ್ರಾರ್ಥಿಸಿದರು. ಪ್ರಾಧ್ಯಾಪಕ ಸತೀಶ್ ಶೆಟ್ಟಿ ಹೆಸ್ಕತ್ತೂರು ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು.
ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ. (ಡಿ) ಪ್ರಥಮ ಸ್ಥಾನ, ತೃತೀಯ ಬಿ.ಕಾಂ. (ಬಿ) ದ್ವಿತೀಯ ಸ್ಥಾನ ಹಾಗೂ ದ್ವಿತೀಯ ಬಿ.ಕಾಂ. (ಸಿ) ತೃತೀಯ ಸ್ಥಾನ ಪಡೆದುಕೊಂಡವು. ವೈಯಕ್ತಿಕ ವಿಭಾಗದಲ್ಲಿ ಬೆಸ್ಟ್ ಜಡ್ಜ್ ಪ್ರಶಸ್ತಿಯನ್ನು ರಕ್ಷಾ ದ್ವಿತೀಯ ಬಿ.ಕಾಂ (ಡಿ) ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ವರ್ಷಿಣಿ ದ್ವಿತೀಯ ಬಿ.ಕಾಂ (ಎ) ಹಾಗೂ ಬೆಸ್ಟ್ ಲಾಯರ್ ಪ್ರಶಸ್ತಿಯನ್ನು ಸೀಮಾ ತೃತೀಯ ಬಿ.ಕಾಂ (ಡಿ) ಪಡೆದರು. ಬೆಸ್ಟ್ ವಿಡಿಯೋ ಪ್ರಶಸ್ತಿಯನ್ನು ದ್ವಿತೀಯ ಬಿ.ಕಾಂ. (ಬಿ) ವಿಭಾಗ ಪಡೆದುಕೊಂಡಿತು.
















