ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಸ್ವಾತಂತ್ರ್ಯವೆಂದರೆ ನಮಗೆ ಇಷ್ಟ ಬಂದಂತೆ ಬದುಕುವ ಹಕ್ಕು ಮಾತ್ರವಲ್ಲ; ದೇಶ, ಸಂವಿಧಾನ, ಸಮಾಜ ಹಾಗೂ ಭವಿಷ್ಯದ ಪೀಳಿಗೆಯೆಡೆಗೆ ಕರ್ತವ್ಯ ಮತ್ತು ಜವಾಬ್ದಾರಿಯನ್ನೂ ಒಳಗೊಂಡಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ನಿವೃತ್ತ ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆದ 80ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಪಾಲಕರು, ಪೋಷಕರು ಹಾಗೂ ಊರಿನ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ‍್ಯ ಹೋರಾಟ, ಸ್ವಾತಂತ್ರ‍್ಯೋತ್ತರ ಭಾರತದ ಸಾಧನೆ, ರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವ, ಸಂವಿಧಾನ, ವೈವಿಧ್ಯತೆಯಲ್ಲಿ ಏಕತೆ ಹಾಗೂ ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರದ ಕುರಿತು ವಿವರವಾಗಿ ಮಾತನಾಡಿದರು.
ತ್ಯಾಗದ ಫಲವೇ ಸ್ವಾತಂತ್ರ್ಯ
ಭಾರತದ ಸ್ವಾತಂತ್ರ್ಯವು ಒಂದು ದಿನದಲ್ಲಿ ದೊರೆತದ್ದಲ್ಲ. ಅನೇಕ ತಲೆಮಾರುಗಳ ತ್ಯಾಗ, ಹೋರಾಟ, ನೋವು ಮತ್ತು ಅಚಲ ಸಂಕಲ್ಪದ ಫಲವಾಗಿ ಸ್ವಾತಂತ್ರ‍್ಯ ದೊರೆತಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಹೇಳಿದರು.
ಸ್ವಾತಂತ್ರ‍್ಯ ಪಡೆದ ಸಂದರ್ಭದಲ್ಲಿ ಭಾರತವು ಬಡತನ, ಅನಕ್ಷರತೆ, ಮೂಲಸೌಕರ್ಯಗಳ ಕೊರತೆ ಹಾಗೂ ಸೀಮಿತ ಕೈಗಾರಿಕಾ ಸಾಮರ್ಥ್ಯದಂತಹ ಹಲವು ಸವಾಲುಗಳನ್ನು ಎದುರಿಸಿತ್ತು. ಆದರೆ ನಂತರದ ತಲೆಮಾರುಗಳು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕೈಗಾರಿಕೆಗಳು, ವೈಜ್ಞಾನಿಕ ಸಂಸ್ಥೆಗಳು ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಗಳನ್ನು ನಿರ್ಮಿಸುವ ಮೂಲಕ ದೇಶದ ಪರಿವರ್ತನೆಗೆ ಭದ್ರ ಬುನಾದಿ ಹಾಕಿವೆ ಎಂದರು. ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿರುವ ಏಕತೆಯಲ್ಲಿ ಅಡಗಿದೆ. ಭಾಷೆ, ಸಂಸ್ಕೃತಿ, ಸಂಪ್ರದಾಯ, ಧರ್ಮ ಹಾಗೂ ಜೀವನಶೈಲಿಗಳಲ್ಲಿ ವೈವಿಧ್ಯವಿದ್ದರೂ ಭಾರತೀಯತೆಯ ಭಾವನೆ ನಮ್ಮನ್ನು ಒಗ್ಗೂಡಿಸುತ್ತದೆ. ಏಕತೆ ಎಂದರೆ ಏಕರೂಪತೆಯಲ್ಲ. ಭಿನ್ನಾಭಿಪ್ರಾಯಗಳು ವಿಭಜನೆಗೆ ಕಾರಣವಾಗದಂತೆ ಯುವಜನತೆ ಸಾಮರಸ್ಯವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಯುವಜನರೇ ವಿಕಸಿತ ಭಾರತದ ಶಕ್ತಿ
ಭಾರತವು ಇಂದು ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ, ಔಷಧ, ಡಿಜಿಟಲ್ ತಂತ್ರಜ್ಞಾನ, ರಕ್ಷಣಾ ಕ್ಷೇತ್ರ, ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ ಹಾಗೂ ವೈಜ್ಞಾನಿಕ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದು. ಯುವಕರು ಕೇವಲ ತಂತ್ರಜ್ಞಾನದ ಬಳಕೆದಾರರಾಗದೆ, ಆವಿಷ್ಕಾರಕರು, ಉದ್ಯಮಿಗಳು, ವಿಜ್ಞಾನಿಗಳು, ವೃತ್ತಿಪರರು ಹಾಗೂ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಶಿಕ್ಷಣವು ಕೇವಲ ಅಂಕ, ಪದವಿ ಅಥವಾ ಉದ್ಯೋಗ ಪಡೆಯುವ ಸಾಧನವಾಗಬಾರದು. ಅದು ವ್ಯಕ್ತಿಯಲ್ಲಿ ವ್ಯಕ್ತಿತ್ವ, ಸೃಜನಶೀಲತೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕು ಎಂದರು. ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳುವ ಜತೆಗೆ ಭಾರತೀಯ ಮೌಲ್ಯಗಳು ಹಾಗೂ ಸಂಸ್ಕೃತಿಯ ಬೇರುಗಳನ್ನು ಮರೆಯಬಾರದು. ಪ್ರಾಮಾಣಿಕತೆ, ತಂದೆ-ತಾಯಿ ಮತ್ತು ಶಿಕ್ಷಕರಿಗೆ ಗೌರವ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ ಯುವಜನರ ಜೀವನದ ಭಾಗವಾಗಬೇಕು ಎಂದು ಸಲಹೆ ನೀಡಿದರು.
ದೇಶ ನಮಗೆ ಏನು ನೀಡುತ್ತದೆ ಎಂಬುದಕ್ಕಿಂತ, ನಾವು ದೇಶಕ್ಕೆ ಏನು ನೀಡಬಹುದು ಎಂಬುದು ಮುಖ್ಯ ದೇಶ ನಮಗೆ ಏನು ನೀಡಬಹುದು ಎಂಬ ಪ್ರಶ್ನೆಯ ಜತೆಗೆ ನಾವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬ ಪ್ರಶ್ನೆಯನ್ನೂ ಯುವಕರು ಕೇಳಿಕೊಳ್ಳಬೇಕು ಎಂದು ಕ್ಯಾಪ್ಟನ್ ಕಾರ್ಣಿಕ್ ಹೇಳಿದರು. ಪರೀಕ್ಷೆಯಲ್ಲಿ ಪ್ರಾಮಾಣಿಕತೆ ಕಾಪಾಡುವುದು, ಸಾರ್ವಜನಿಕ ಆಸ್ತಿಯನ್ನು ಗೌರವಿಸುವುದು, ಪರಿಸರವನ್ನು ಸ್ವಚ್ಛವಾಗಿಡುವುದು, ಅಗತ್ಯವಿರುವವರಿಗೆ ನೆರವಾಗುವುದು ಹಾಗೂ ತಾವು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದೂ ರಾಷ್ಟ್ರ ನಿರ್ಮಾಣದ ಭಾಗವೇ ಆಗಿದೆ ಎಂದರು. ಭಾರತವು ಕೇವಲ ಶಕ್ತಿಶಾಲಿ ರಾಷ್ಟ್ರವಾಗುವುದಷ್ಟೇ ಅಲ್ಲದೆ, ಜಾಗತಿಕ ಶಾಂತಿ, ಸಮೃದ್ಧಿ ಹಾಗೂ ಮಾನವ ಕಲ್ಯಾಣಕ್ಕೆ ಕೊಡುಗೆ ನೀಡುವ ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಸೈನಿಕರ ತ್ಯಾಗ ಸ್ಮರಣೆ
ಸ್ವಾತಂತಂತ್ರ್ಯಯೊತ್ತರ ಭಾರತ ಎದುರಿಸಿದ ಯುದ್ಧಗಳು ಹಾಗೂ ವಿವಿಧ ಭದ್ರತಾ ಸವಾಲುಗಳನ್ನು ಸ್ಮರಿಸಿದ ಅವರು, ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಸೈನಿಕರು ಹಾಗೂ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದರು. ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಸಶಸ್ತ್ರ ಪಡೆಗಳ ಕೊಡುಗೆ ಅಪಾರವಾಗಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಆಕರ್ಷಣೆಯಾಗಿ 2,550 ವಿದ್ಯಾರ್ಥಿಗಳು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಸಂಯೋಜನೆಯ ಮೂಲಕ ಮೈದಾನದಲ್ಲಿ ವಿಶಾಲವಾದ ರಾಷ್ಟ್ರಧ್ವಜದ ಚಿತ್ರಣವನ್ನು ಮೂಡಿಸಿದರು. 8,350 ವಿದ್ಯಾರ್ಥಿಗಳು ಆಕಾಶ ನೀಲಿ ಬಣ್ಣದ ಟೀ ಶಾರ್ಟನ್ನು ಧರಿಸಿ ನಿಂತರೆ, 1,935 ವಿದ್ಯಾರ್ಥಿಗಳು ಮೈದಾನದ ಸುತ್ತಲಿನ ಗಡಿಭಾಗವನ್ನು ಆವರಿಸುವಂತೆ ಶಿಸ್ತಿನಿಂದ ಸಾಲಾಗಿ ನಿಂತು, ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಸಮನ್ವಯದಲ್ಲಿ ಮನಮೋಹಕ ತ್ರಿವರ್ಣದ ವಿನ್ಯಾಸವನ್ನು ರೂಪಿಸಿದರು. ತ್ರಿವರ್ಣದ ಬ್ಲಾಸ್ಟರ್‌ಗಳು ಮತ್ತು ಬ್ಲೋವರ್‌ಗಳು ಕಾರ್ಯಕ್ರಮದ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದರೆ, ತ್ರಿವರ್ಣದಲ್ಲಿ ಕಂಗೊಳಿಸಿದ ಸಿಂಹಗಳು ಮತ್ತು ಆವರಣದಲ್ಲಿದ್ದ ಸಿಲಿಂಡರ್ ಆಕಾರದ ಕಂಬಗಳಿಗೆ ತ್ರಿವರ್ಣದ ಬಣ್ಣಗಳ ಅಲಂಕಾರ ಸ್ವಾತಂತ್ರ‍್ಯ ದಿನಾಚರಣೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು. ಕೇಸರಿ, ಬಿಳಿ, ಹಸಿರು ತ್ರಿವರ್ಣ ರಂಗಿನ ಧಿರಿಸಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಧ್ವಜವನ್ನು ಅಲೆಯಂತೆ ಬೀಸುತ್ತಿದ್ದಾಗ, ದೇಶಭಕ್ತಿಯ ಅಭಿಮಾನದ ಸಾಗರವೇ ಉಕ್ಕಿಬಂತು.
ವಿಶೇಷ ಸಂಗೀತ ಕರ‍್ಯಕ್ರಮ
ಅಜಯ್ ವಾರಿಯರ್ ತಂಡದ ವತಿಯಿಂದ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನಪ್ರಿಯ ದೇಶ ಭಕ್ತಿಗೀತೆಗಳು, ಸುಮಧುರ ಸಂಗೀತ ಹಾಗೂ ಮನಮೋಹಕ ಗಾಯನದ ಮೂಲಕ ಕಲಾವಿದರು ವಿದ್ಯಾರ್ಥಿಗಳನ್ನು ರಂಜಿಸಿದರು.
ಪ್ರತಿಷ್ಠಾನದ ವ್ಯವಸ್ಥಾಪಕ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ ಆಳ್ವ, ಆಡಳಿತ ಮಂಡಳಿಯ ಬಾಲಕೃಷ್ಣ ಆಳ್ವ, ಡಾ. ಹನ ಶೆಟ್ಟಿ, ಡಾ. ಗ್ರೀಷ್ಮಾ ಆಳ್ವ ಇದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ, ಪಾಲಕರು, ಊರಿನ ಗಣ್ಯರು ಸಂಭ್ರಮದಲ್ಲಿ ಪಾಲ್ಗೊಂಡರು.
ಉಪನ್ಯಾಸಕರಾದ ವೇಣುಗೋಪಾಲ ಕೆ. ಶೆಟ್ಟಿ ಹಾಗೂ ಡಾ.ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಪರೇಡ್ ಕಮಾಂಡರ್ ಆಗಿ ಎನ್‌ಸಿಸಿ ಕೆಡೆಟ್ ಕ್ಯಾಪ್ಟನ್ ಯದುನಂದನ್ ಹಾಗೂ ಗೌರವ ವಂದನೆಯನ್ನು ಪಿಒ ಕೆಡೆಟ್ ಹಾರ್ದಿಕ್ ಹರ್ಷ ಶೆಟ್ಟಿ ನೆರವೇರಿಸಿಕೊಟ್ಟರು.
















