ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅನನ್ಯ ಪ್ರೀತಿ ಹಾಗೂ ಗ್ರಾಮೀಣ ಸಂಸ್ಕೃತಿ ಸೊಗಡನ್ನು ಅನಾವರಣಗೊಳಿಸುವ ಉದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಕೆಸರಲ್ಲೊಂದು ದಿನ – ಗಮ್ಮತ್ತ್” ಕಾರ್ಯಕ್ರಮವನ್ನು ಅಗಸ್ಟ್ 23ರ ಭಾನುವಾರ ಬೆಳಿಗ್ಗೆ ಗಂಟೆ 09ರಿಂದ ಬೈಂದೂರು ಯಡ್ತರೆಯ ಜೆ.ಎನ್.ಆರ್ ಕಲಾಮಂದಿರ ಹಾಗೂ ಪಕ್ಕದ ನೆಲ್ಯಾಡಿ ಬೈಲ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಹೇಳಿದರು.


ಅವರು ಬೈಂದೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ಎರಡು ವರ್ಷದಿಂದ ಅದ್ದೂರಿ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೂರನೇ ವರ್ಷದ ಕಾರ್ಯಕ್ರಮದಲ್ಲಿ ಅದ್ದೂರಿ ಕಂಬಳ, ವಿವಿಧ ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನ, ಹರಟೆ, ನ್ಯೆಗಿಕೊಪ್ಪರಿಗೆ ವಿವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ 29ಕ್ಕೂ ಅಧಿಕ ಸ್ಪರ್ಧೆಗಳು ಇರಲಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದೆ ಎಂದರು.

ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು:
ಏಕಕಾಲದಲ್ಲಿ ಜೆ.ಎನ್.ಆರ್. ಸಭಾಂಗಣ ಹಾಗೂ ಆವರಣ ಮತ್ತು ಕೆಸರುಗದ್ದೆಯಲ್ಲಿ ಎಲ್ಲಾ ಕಾರ್ಯಕ್ರಮಗಲೂ ಮತ್ತು ಸ್ಪರ್ಧೆಗಳ ನಡೆಯಲಿದೆ. ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ, ಕೆಸರ್ ಗದ್ದೆ ಓಟ, ಅಡಿಕೆ ಹಾಳಿಯಲ್ಲಿ ಕೂರಿಸಿ ಎಳೆಯುವುದು, ಬೀಸ್ ಬಲಿ ಬೀಸುದ್, ಚಿಟ್ ಬಿಲ್ ಶೂಟಿಂಗ್, ಅಪ್ಪ – ಮಗು ಉಪ್ಪು ಮೂಟೆ, ಚನ್ನೆಮಣೆ, ಸಾಂಪ್ರದಾಯಿಕ ಗೀತಗಾಯನ, ಕಾಯಿಜೂಜು, ಮೊಸ್ರ್ ಕುಡ್ಕಿ ಒಡೆಯುವುದು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮಹಿಳೆಯರಿಗೆ ಹಗ್ಗಜಗ್ಗಾಟ, ಥ್ರೋಬಾಲ್, ಕೆಸರ್ ಗದ್ದೆ ಓಟ, ಅಡಿಕೆ ಹಾಳಿಯಲ್ಲಿ ಕೂರಿಸಿ ಎಳೆಯುವುದು, ಮಡ್ಲ್ ನೇಯುವುದು, ಗುಡ್ನ ಆಟ, ಚನ್ನೆಮಣೆ ಆಟ, ಅಮ್ಮ – ಮಗು ಉಪ್ಪು ಮೂಟೆ, ಜಿಬ್ಲಿ/ಕುಂಟೆಬಿಲ್ಲೆ, ಹಿಡಿ ಕಡ್ಡಿ ಒಯ್ಯುದ್, ಕೊಟ್ಟಿ ಸೆಟ್ಟುದ್, ಹೂಮಾಲೆ ಕಟ್ಟುವುದು, ಸಾಂಪ್ರದಾಯಿಕ ಗೀತಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಚಿತ್ರಕಲೆ, ಅಜ್ಜಿ ಕಾಲದ ಕಥೆ ಹೇಳುವ ಸ್ಪರ್ಧೆ, ಸೈಕಲ್ ಟಯರ್ ಓಡ್ಸುವ ಸ್ಪರ್ಧೆ, ಕೆಸರ್ ಗದ್ದೆ ಓಟ, ಬೆನ್ ಚೆಂಡ್ ಆಟ, ಲಿಂಬೆ ಚಮಚ ಓಟ, ಅಡಿಕೆ ಹಾಳಿಯಲ್ಲಿ ಕೂರಿಸಿ ಎಳೆಯುವುದು, ಗೂಟಕ್ಕೆ ಸುತ್ತಿ ಓಡುವುದು ಸ್ಪರ್ಧೆಗಳ ನಡೆಯಲಿದೆ. ನಿಧಿಶೋಧ, ತೆಂಗಿನ ಚ್ವಾಂಗಿಯಿಂದ ಮಾದರಿ ತಯಾರಿ, ರಸಪ್ರಶ್ನೆ ಸ್ಪರ್ಧೆ, ಚಿಟ್ ಬಿಲ್ ಸ್ಪರ್ಧೆ ಮುಕ್ತ ವಿಭಾಗದಲ್ಲಿ ನಡೆಯಲಿದೆ. ಸಾರ್ವಜನಿಕರು ಎಲ್ಲಾ ಸ್ಪರ್ಧೆಗಳಲ್ಲಿ ಉಚಿತವಾಗಿ ನೊಂದಣಿಯೊಂದಿಗೆ ಭಾಗವಹಿಸಬಹುದಾಗಿದೆ.
ಮೆರವಣಿಗೆ:
ಅ.23ರ ಬೆಳಿಗ್ಗೆ 09-00ಕ್ಕೆ ರಾಹುತನಕಟ್ಟೆಯಿಂದ ಜೆ.ಎನ್.ಆರ್ ಹಾಲ್ ತನಕ ವೈಭವದ ಮೆರವಣಿಗೆ ಇರಲಿದ್ದು, ಕಂಬಳ ಕೋಣಗಳು, ಭಜನಾ ತಂಡಗಳು, ಕೊರಗ ಸಮುದಾಯದ ಡೋಲು ವಾದನ, ಎತ್ತಿನಗಾಡಿ, ಯಕ್ಷಗಾನ ವೈಭವ, ಚಂಡೆ ತಂಡಗಳು ಮೆರವಣಿಗೆಯುಲ್ಲಿ ಇರಲಿದೆ.
ವಿಶೇಷತೆ:
ಬೆಳಿಗ್ಗೆಯಿಂದ 40 ಜೊತೆ ಕಂಬಳ ಕೋಣಗಳ ಆಕರ್ಷಕ ಓಟ ಇರಲಿದೆ. ನೆಲಮೂಲದ ಬಳಕೆಯ ಹತಾರುಗಳ ಪ್ರದರ್ಶನ, ಮಡಿಕೆ – ಅಕ್ಕಿಮುಡಿ – ಹಾಳಿ ಟೊಪ್ಪಿ – ಬೀಳ್ ಬುಟ್ಟಿ ತಯಾರಿ ಪ್ರಾತ್ಯಕ್ಷಿಕೆಗಳು, ಕೊರಗ ಸಮುದಾಯದ ಕಲಾ ಪ್ರದರ್ಶನ, ಹಾಡು – ಹಸೆ, ಪಿಟ್ಲಂಡಿ ಹೊಡ್ಸುದ್, ಕುಂದಾಪ್ರ ಕನ್ನಡದ ಹರಟೆ, ಕುಂದಾಪ್ರ ಶೈಲಿಯಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ, ಸಂಜೆ ಪಾನಕ ವ್ಯವಸ್ಥೆ, ಶವರ್ ಡಾನ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಹಬ್ಬದ ವಾತಾವರಣ ಇರಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಕಿರಣ್ ಕಿಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವರು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಕೆ. ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ಜಯಶೀಲ ಶೆಟ್ಟಿ, ರಾಜೇಶ್ ಕಾರಂತ್, ಸುಗ್ಗಿ ಸುಧಾಕರ ಶೆಟ್ಟಿ, ಗೋವಿಂದ ಬಾಬು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ನಟ ಶೈನ್ ಶೆಟ್ಟಿ, ಎಸ್. ರಾಜು ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ, ಜನಾರ್ದನ ದೇವಾಡಿಗ, ಬಾರ್ಕೂರು ದೀಪಕ್ ಶೆಟ್ಟಿ ಸೇರಿದಂತೆ ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.
ಮಕ್ಕಳ ಸ್ಪರ್ಧೆಗಳಿಗೆ ಬೆಳಿಗ್ಗೆ ಸ್ಥಳದಲ್ಲಿಯೇ ನೊಂದಣಿ ಇರಲಿದೆ. ಬೆಳಿಗ್ಗೆಯಿಂದಲೇ ಎಲ್ಲಾ ಸ್ಪರ್ಧೆಗಳು ಆರಂಭವಾಗುವುದರಿಂದ ಸ್ಪರ್ಧಿಗಳು ಆರಂಭದಲ್ಲಿಯೇ ಹಾಜರಿರಬೇಕು. ಎಲ್ಲಾ ವಿಭಾಗದ ವಿಜೇತರಿಗೆ ಪದಕ, ಸರ್ಟಿಫಿಕೇಟ್ ನೀಡಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ನೆಲ್ಯಾಡಿ ಬೈಲು ಮಾಲಕರಾದ ದಿವಾಕರ್ ಶೆಟ್ಟಿ, ಪ್ರಮುಖರಾದ ಪ್ರಿಯದರ್ಶಿನಿ ಬೆಸ್ಕೂರು, ಸುನಿಲ್ ಎಚ್. ಜಿ. ಬೈಂದೂರು, ಅರುಣ್ ಕುಮಾರ್ ಶಿರೂರು ಇದ್ದರು.
















