ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹನ ಸನ್ನಿಧಿಯಲ್ಲಿ 2ನೇ ಶ್ರಾವಣ ಮಾಸದ ಶನಿವಾರದ ಅಂಗವಾಗಿ ವಿವಿಧ ಸಾಂಸ್ಕೃತಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಧಾರ್ಮಿಕ, ಸಮಾಜ ಸೇವೆಯಲ್ಲಿ ಸಮಾಜ ಸೇವಕ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ಶೈಕ್ಷಣಿಕ ಹಾಗೂ ಶ್ರೀ ಗುರುರಸಿಂಹ ದೇವಳದಲ್ಲಿ ನಿತ್ಯ ಪೂಜಾ ವಿಧಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಚಿತ್ರಪಾಡಿ ಜಗದೀಶ ಉಪಾಧ್ಯಾಯ, ಆಂಜನೇಯ ದೇವಳದಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಸ್ವಚ್ಛತಾ ಸೇವೆಗೈದ ರಾಮಚಂದ್ರ ಆಚಾರ್, ಪಾರಂಪಳ್ಳಿ ರಾಧಾ, ಕರ್ಣ, ಶ್ರೀದೇವಳದಲ್ಲಿ ಅಡಿಪು ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಗಿರಿಜಾ ದೇವಾಡಿಗ ಅವರುಗಳನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಕಾರಂತ ಅವರುಗಳನ್ನು ಅಭಿನಂದಿಸಿ ಸೇವೆಯನ್ನು ಶ್ಲಾಘಿಸಿ ದೇವಸ್ಥಾನವಿರಲಿ ಯಾವುದೇ ಸಂಘ ಸಂಸ್ಥೆಗಳಿರಲಿ ಪ್ರತಿಯೊಬ್ಬರ ಸೇವಾ ಕಾರ್ಯ ಬಹಳ ಮುಖ್ಯವಾಗಿದೆ ಹಾಗೂ ಅವರ ಸೇವಕಾರ್ಯವನ್ನು ಗುರುತಿಸಿ ಗೌರವಿಸಿದಾಗ ಉಳಿದವರಿಗೂ ಕೂಡ ಪ್ರೇರಣಾದಾಯಕವಾಗಿರುತ್ತದೆ ಎಂದು ತಿಳಿಸಿದರು.
ದೇಗುಲ ರಾಜ್ಯಾಂಗಣದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ ಉಪಾಧ್ಯಾಯರು ಕಾರ್ಯದರ್ಶಿ ಪರಶುರಾಮ ಭಟ್ಟ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಹೊಳ್ಳ ಸದಸ್ಯರಾದ ತಾರಾನಾಥ ಹೊಳ್ಳ, ಪ್ರಸನ್ನ ತುಂಗ ಮತ್ತು ವ್ಯವಸ್ಥಾಪಕರಾದ ಗಣೇಶ ಭಟ್ಟ ಉಪಸ್ಥಿತರಿದ್ದರು.
ನಾಗರತ್ನ ಹೇರಳೆ ಕಾರ್ಯಕ್ರವನ್ನು ನಿರೂಪಿಸಿದರು. ಛಾಯಾತರಂಗಿಣಿ ಸಂಗೀತ ಶಾಲೆ ಕೋಟ ಇವರ ಸಂಯೋಜನೆಯಲ್ಲಿ ವಿದುಷಿ ಶರ್ಮಿಳಾ ರಾವ್ ಹಾಗೂ ಶಿಷ್ಯವೃಂದದವರಿಂದ ವಯಲಿನ್ ವಾದನ , ಯಕ್ಷ ಮಂಜುಳಾ ಮಹಿಳಾ ಬಳಗ ಕದ್ರಿ ಮಂಗಳೂರು ಇವರಿಂದ ಮಂಡೋದರಿ ಪರಿಣಯ ಮತ್ತು ಗಣೇಶ ಮಹಿಮೆ ಎನ್ನುವ ಯಕ್ಷಗಾನ ತಾಳಮದ್ದಲೆ.
ಶ್ರೀ ಮಹಿಷಮರ್ಧಿನಿ ವಿಪ್ರ ಮಹಿಳಾ ಬಳಗ ನೀಲಾವರ ಇವರಿಂದ ಭಜನೆ ಕಾರ್ಯಕ್ರಮ, ಸಂಜೆ ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಇವರಿಂದ ಯಕ್ಷಗಾನ ಸುಧನ್ವಾರ್ಜುನ ಪ್ರಸಂಗ ಜರಗಿತು.
















