ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕುಂದಾಪುರ ತಾಲೂಕು ಪಶು ವೈದ್ಯಕೀಯ ಶಿಬಿರ ಕಚೇರಿಯಲ್ಲಿ ಪಶು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಪೂಜಿತಾ ಅವರಿಗೆ, ಕುಂದಾಪುರ ತಾಲೂಕು ಶಿಬಿರ ಕಚೇರಿ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕೃತಕ ಗರ್ಭಧಾರಣಾ ಕಾರ್ಯಕರ್ತರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ವತಿಯಿಂದ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಕುಂದಾಪುರ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಕೊಮೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎಸ್. ದಯಾನಂದ ರಾವ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಪಶುವೈದ್ಯೆ ಡಾ. ಶ್ರದ್ಧಾ, ಕಾರ್ಯದರ್ಶಿ ಯೋಗೇಶ್ ಬಳ್ಕೂರು ಹಾಗೂ ಕೋಶಾಧಿಕಾರಿ ರವಿರಾಜ್ ಬಸ್ರೂರು ಉಪಸ್ಥಿತರಿದ್ದರು.
2024ರಿಂದ ಕುಂದಾಪುರ ಪಶುವೈದ್ಯಕೀಯ ಶಿಬಿರ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಡಾ. ಪೂಜಿತಾ ಅವರು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಕುಂದಾಪುರಕ್ಕೆ ಆಗಮಿಸಿದ ಅಲ್ಪಾವಧಿಯಲ್ಲಿಯೇ ಸ್ಥಳೀಯ ಕುಂದಾಪ್ರ ಭಾಷೆಯನ್ನು ಕಲಿತುಕೊಂಡಿದ್ದರು. ರೈತರ ಮನೆಮನೆಗೆ ಭೇಟಿ ನೀಡಿ ಪಶುಗಳ ಆರೋಗ್ಯ ರಕ್ಷಣೆ, ಚಿಕಿತ್ಸಾ ಸೇವೆ ಹಾಗೂ ಪಶುಪಾಲಕರಿಗೆ ಅಗತ್ಯವಾದ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸಿದ್ದರು. ತಮ್ಮ ಸರಳ, ಸೌಜನ್ಯಯುತ ವ್ಯಕ್ತಿತ್ವ ಹಾಗೂ ಸೇವಾ ಮನೋಭಾವದಿಂದ ರೈತರು ಮತ್ತು ಸಹಕಾರಿ ಸಂಘಗಳ ಸಿಬ್ಬಂದಿಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು ಎಂದು ಗಣ್ಯರು ಪ್ರಶಂಸಿಸಿದರು.
ವೆಂಕಟೇಶ್ ಕಿಣಿ ಕಟ್ ಬೇಲ್ತೂರು, ಸತೀಶ್ ಶೆಟ್ಟಿ ಬೇಳೂರು, ರಾಜು ಬೀಜಾಡಿ, ದೇವೇಂದ್ರ ಕಂದಾವರ, ಯಶೋಧ ಜಪ್ತಿ ಹಾಗೂ ರಮೇಶ್ ಬಸ್ರೂರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೃತಕ ಗರ್ಭಧಾರಣಾ ಕಾರ್ಯಕರ್ತರು ಹಾಗೂ ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದು, ಡಾ. ಪೂಜಿತಾ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ದೇವರಾಜ್ ತಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ್ ವಂದಿಸಿದರು.
















