ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಜಯನಗರದ BGS ಮೈದಾನದಲ್ಲಿ ‘ಟೀಮ್ ಕುಂದಾಪುರಿಯನ್ಸ್’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕುಂದಾಪ್ರ ಕನ್ನಡ ಉತ್ಸವ 2026 ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ನೆರವೇರಿತು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೈದಾನದಾದ್ಯಂತ ಕೇವಲ ಕುಂದಾಪ್ರ ಕನ್ನಡದ ಸೊಗಡು, ಕರಾವಳಿಯ ಆಚಾರ-ವಿಚಾರ ಮತ್ತು ಸಂಸ್ಕೃತಿಯ ಹಬ್ಬವೇ ಮನೆಮಾಡಿತ್ತು.




ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಕಲಾತಂಡಗಳೊಂದಿಗೆ ಕುಂದಾಪ್ರದ ಪಾರಂಪರಿಕ ವಸ್ತುಗಳ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ರಂಗೇರಿದ ನೃತ್ಯ ವೈಭವ, ಯುವ ಸಂಗಮ, ಡಿಜೆ ಕುಂದಾಪುರ ಮತ್ತು ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.
ಇನ್ನು ಹಳೆಯ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳ ಪ್ರದರ್ಶನದ ಮೂಲಕ ಇವುಗಳನ್ನು ಯುವ ಜನರಿಗೆ ಪರಿಚಯಿಸಲಾಯಿತು ಬೈಗಿ, ಬಂಗುಡೆ ಸೇರಿ ಕರಾವಳಿಯ ವಿವಿಧ ಬಗೆಯ ಮೀನುಗಳ ಪ್ರದರ್ಶನ ನೋಡಲು ವಿಭಿನ್ನವಾಗಿತ್ತು.
ಕುಂದಾಪುರ ಆಟೋಟ ಸ್ಪರ್ಧೆಗಳು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ‘ಕುಂದಾಪುರ ಸಂವಾದ’ ಕಾರ್ಯಕ್ರಮದಲ್ಲಿ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಯ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದಿದ್ದು ಲಕ್ಷ್ಮಿ ಜಿ ಪ್ರಸಾದ್ ಕುಂದಾಪ್ರದ ದೈವಗಳ ಬಗ್ಗೆ ಮಾತಾಡಿದ್ರು, ವಸಂತ್ ಶೆಟ್ಟಿ ಕುಂದಾಪ್ರದ ಉದ್ಯಮದ ಬಗ್ಗೆ ಸಂವಾದ ಮಾಡಿದ್ರು. ಕುಂದಾಪುರ ಭಾಗದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವಂತಹ ವಿವಿಧ ಕ್ರಿಯೇಟರ್ಸ್ ಗಳನ್ನ ಕರೆಸಿ, ಅವರ ಮೂಲಕ ಯುವಸಂಗಮ ಎಂಬ ಕಾರ್ಯಕ್ರಮವನ್ನು ನಡೆಸಿದ್ದು ವಿಶೇಷವಾಗಿತ್ತು.

ಇದರ ಜೊತೆಗೆ ಕಾರ್ಯಕ್ರಮದಲ್ಲಿ ಕವಿ ರತ್ನ ನಾಗೇಂದ್ರ ಪ್ರಸಾದ್, ಸ್ವರ್ಣಕಮಲ ಪುರಸ್ಕ್ರತ ಪ್ರದೀಪ ಕೆಂಚನೂರು, ಗಣೇಶ್ ಕುಂಬಾಶಿ, ದೀಪಕ್ ಶೆಟ್ಟಿ ಬಾರ್ಕೂರು,ನಟಿಯರಾದ ಅಮೃತಾ ರಾಮಮೂರ್ತಿ, ರಜನಿ ಪ್ರವೀಣ್ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಂದಾಪುರದ ವಿಶಿಷ್ಟ ಸಂಸ್ಕೃತಿಯ ಬಗ್ಗೆ ಅದ್ಭುತವಾಗಿ ಮಾತನಾಡಿ, ಕುಂದಾಪುರ ಕನ್ನಡ ಭಾಷೆಯ ಉಳಿವಿಗಾಗಿ ಹೇಗೆಲ್ಲ ಶ್ರಮಿಸಬೇಕು ಎಂಬುದನ್ನ ತಿಳಿ ಹೇಳಿದ್ರು.
ಈ ಉತ್ಸವದ ಮುಖ್ಯ ವಿಶೇಷತೆ ಎಂದರೆ, ಇದು ಕೇವಲ ಕುಂದಾಪುರದ ಜನರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬೆಂಗಳೂರಿನ ಮೂಲೆ ಮೂಲೆಯಿಂದ ಬಂದ ಕನ್ನಡ ಪ್ರೇಮಿಗಳು, ಕರಾವಳಿಯ ಸಂಸ್ಕೃತಿಯ ಸವಿಯನ್ನು ಸವಿದರು. ಕುಂದಾಪ್ರ ಕನ್ನಡದ ವಿಶಿಷ್ಟ ಶೈಲಿಯ ಸಂಭಾಷಣೆ, ನಗು, ಹರಟೆ ಮತ್ತು ಪ್ರೀತಿಯ ಸಮ್ಮಿಲನಕ್ಕೆ BGS ಮೈದಾನ ಸಾಕ್ಷಿಯಾಯಿತು.
ಸಂಘಟಕರಾದ ‘ಟೀಮ್ ಕುಂದಾಪುರಿಯನ್ಸ್’ ತಂಡದ ನೇತೃತ್ವದಲ್ಲಿ ಮೂಡಿಬಂದ ಈ ಕಾರ್ಯಕ್ರಮ, ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿಯ ಮೆಲುಕು ಹಾಕಿದೆ.
ಈ ಕಾರ್ಯಕ್ರಮದಲ್ಲಿ ಕುಂದಾಪ್ರ ರತ್ನ, ಸಂವಾದ ಹಾಗೂ ಯುವರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಒಟ್ಟಾರೆ ಟೀಮ್ ಕುಂದಾಪುರಿಯನ್ಸ್ ತಂಡದ ಎಂಟನೇ ವರ್ಷದ ಕುಂದಾಪ್ರ ಕನ್ನಡ ಉತ್ಸವ ಕಾರ್ಯಕ್ರಮ ಅದ್ಭುತವಾದ ಯಶಸ್ಸನ್ನ ಪಡೆದಿದೆ.

















