ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾವು ಎಲ್ಲೇ ಹೋದರೂ ನಮ್ಮ ಮಾತೃಭಾಷೆಯ ಸೊಗಡನ್ನು ಬಿಡಬಾರದು. ನಮ್ಮ ಹಿರಿಯರು ಉಳಿಸಿಕೊಂಡು ಬಂದ ಅಸ್ಮಿತೆಯನ್ನು ಮಕ್ಕಳಾದ ನೀವು ಮುಂದುವರೆಸಿಕೊಂಡು ಹೋಗಬೇಕು ಎಂದು ಪೂರ್ಣ ಪ್ರಜ್ಞಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ಸಿದ್ದಾಪುರ ಅಭಿಪ್ರಾಯಪಟ್ಟರು.
ಅವರು ಸೋಮವಾರ ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ್ದ” ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ”ಯ ಅಂಗವಾಗಿ ಹಮ್ಮಿಕೊಂಡ “ಕುಂದಗನ್ನಡದ ವೈಶಿಷ್ಟ್ಯತೆ” ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ನಾವು ಬಳಸುವ ಎಷ್ಟೋ ಪದಗಳ ಅರ್ಥವನ್ನು ನಾವೇ ಅರಿತಿರುವುದಿಲ್ಲ. ಈ ಪದಗಳು ಇಂದು ನಿನ್ನೆಯದಲ್ಲ ಪಂಪಭಾರತ, ಗದಾಯುದ್ಧ, ಕುಮಾರವ್ಯಾಸ ಭಾರತಗಳಂತಹ ಮೇರು ಕೃತಿಗಳಲ್ಲಿ ಇವುಗಳ ಉಲ್ಲೇಖ ದೊರೆಯುತ್ತದೆ. ವಿದ್ಯಾರ್ಥಿಗಳು ಗುಂಡ್ಮಿ ಚಂದ್ರಶೇಖರ ಐತಾಳ್, ರಾಜಗೋಪಾಲ ಆಚಾರ್ಯರು ಕುಂದಗನ್ನಡದ ಬಗ್ಗೆ ಬರೆದ ಪುಸ್ತಕಗಳನ್ನು ಓದುವ ಅವಶ್ಯಕತೆ ಇದೆ. ಇದರೊಂದಿಗೆ ಮಕ್ಕಳು ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್. ಶೆಣೈಯವರು ಮಾತನಾಡಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ಕನ್ನಡದ ಪ್ರಮುಖ ಸಾಹಿತಿಗಳಾದ ವೈದೇಹಿ, ಮಿತ್ರಾ ವೆಂಕಟರಾಜ್ ಮೊದಲಾದವರು ಕುಂದಾಪ್ರ ಕನ್ನಡದಲ್ಲಿಯೇ ಬರೆದು ಅದನ್ನು ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿಯವರು ಎಲ್ಲ ಭಾಷೆಗೂ ತನ್ನದೇ ಆದ ಸತ್ವವಿದೆ ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಬೆಳೆಸಿಕೊಂಡು ಹೋಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಕೆ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಮೋಹನ್ ಬಿ. ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಮಮತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಅರ್ಚನಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ಸುಶ್ಮಿತಾ ಶೆಟ್ಟಿ ವಂದಿಸಿದರು.
















