ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರ್ಕಾರದ ಆಕ್ಷೇಪಣೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಹೇಳಿದರು.
ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಕಸ್ತೂರಿ ರಂಗನ್ ವರದಿ ಕುರಿತ ಏಳನೇ ಕರಡು ಪ್ರತಿ ಬಿಡುಗಡೆಗೊಳಿಸಿದೆ. ಹಾಗೂ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಮಿತಿ ನಿಗದಿ ಪಡಿಸಿದೆ ಹಾಗೂ ಇದು ಪ್ರಥಮ ಭಾರಿಯಲ್ಲ ಈಗಾಗಲೇ ಆರು ಭಾರಿ ಕರಡು ಜಾರಿಯಾದರೂ ಸಹ ಇಲ್ಲಿಯ ತನಕ ರೈತರ ಹಾಗೂ ಪಶ್ಚಿಮ ಘಟ್ಟವಾಸಿಗಳ ಬೇಡಿಕೆಯಾದ ಭೌತಿಕ ಸರ್ವೇ ಕಾರ್ಯ ಇಲ್ಲಿಯ ತನಕ ನಡೆಯಲೇ ಇಲ್ಲಾ.
ಸಂಸದರು ಹಾಗೂ ಶಾಸಕರುಗಳು ಕೇವಲ ಕಾಟಾಚಾರಕ್ಕೆ ಅಧಿಕಾರಿಗಳನ್ನು ಕೂರಿಸಿಕೊಂಡು ಸಭೆ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಅಧಿಕಾರಿಗಳು ಸಭೆಯಲ್ಲಿ ನೀಡಿದ ಹಾರಿಕೆಯ ಉತ್ತರಗಳಿಗೆ ಸಮ್ಮತಿ ನೀಡದೆ ಕೂಡಲೇ ರಾಜ್ಯ ಸರ್ಕಾರದ ಆಕ್ಷೇಪಣೆಯ ಪ್ರತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು.
ಇಲ್ಲದೇ ಇದ್ದರೆ ಇದು ಕೇವಲ ರೈತರ ಹಾಗೂ ಪಶ್ಚಿಮ ಘಟ್ಟ ತಪ್ಪಲು ನಿವಾಸಿಗಳ ಕಣ್ಣೀರೊರೆಸುವ ತಂತ್ರದ ಒಂದು ಭಾಗವಾಗಲಿದೆ ಬಿಟ್ಟರೆ ಜನಸಾಮಾನ್ಯರ ಬೇಡಿಕೆ ಮತ್ತು ಆಗ್ರಹಗಳು ಯಾವುದೂ ಈಡೇರುವ ಸಾಧ್ಯತೆಯಿಲ್ಲಾ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
















