ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಾಂಸ್ಕೃತಿಕ ತೇರು, ಕಲೆಗಳ ಮೇರು ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನೆರವೇರಿತು.
ದೀಪ ಪ್ರಜ್ವಲನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆ ಜಗದಗಲ ಪಸರಿಸುವಂತಾಗಲಿ ಎನ್ನುವ ಸದಾಶಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯು. ಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಅಮಿತಾ ಶೆಟ್ಟಿ ಮಾತನಾಡಿ, ಪ್ರತಿಭೆಗೆ ವೇದಿಕೆ ಸಿಕ್ಕಾಗ ಆತ್ಮ ವಿಶ್ವಾಸ ಅರಳುತ್ತದೆ.ಅನ್ವೇಷಣೆ, ಅಭಿವ್ಯಕ್ತಿ, ಧೈರ್ಯ ಈ ಮೂರು ಒಂದಾಗಿ ಸೇರಿದಾಗ ಸಾಧನೆಯಾಗಿ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಕಲೆ, ಸಂಸ್ಕೃತಿ ಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ. ಕೆ. ರಾಧಾಕೃಷ್ಣ ಶೆಣೈಯವರುವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್, ರಸಾಯನಶಾಸ್ತ್ರ ಉಪನ್ಯಾಸಕರಾದ ರಮಾಕಾಂತ್ ರೇವಣಕರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಸುತ್ ಶೆಟ್ಟಿ ಪರಿಚಯಿಸಿ, ಅಮ್ರಾ ವಂದಿಸಿ, ಕನ್ವಿತಾ ಸ್ವಾಗತಿಸಿ, ಅರ್ಶಿಯ ಕಾರ್ಯಕ್ರಮ ವನ್ನು ನಿರೂಪಿಸಿದರು. ಎರಡು ದಿನಗಳು ನಡೆದ ಪ್ರತಿಭಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಕಲಾತ್ಮಕ ಪ್ರತಿಭೆಗೆ ವೇದಿಕೆ ಒದಗಿಸಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದು ಕೇವಲ ಸ್ಪರ್ಧೆಯಾಗಿರದೆ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಿತ್ತು.
















