ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ವ್ಯಕ್ತಿಯೇ ಶಿಕ್ಷಕ. ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಠಿಸಲು ಶಿಕ್ಷಕರು ವಹಿಸುವ ಪಾತ್ರ ಅತ್ಯಮುಲ್ಯವಾದದ್ದು. ತಮ್ಮ ಜೀವನದುದ್ದಕ್ಕೂ ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವನ್ನು ಮೂಡಿಸಿ ಜ್ಞಾನಾರ್ಜನೆಯನ್ನು ಎರಕ ಹೊಯ್ಯುವ ಶಿಕ್ಷಕರುಗಳು ಮಕ್ಕಳ ಪಾಲಿಗೆ ಆ ದೇವರು ಕೊಟ್ಟ ವರ. ಇಂತಹ ಶಿಕ್ಷಕರಿಗೆ ಗೌರವ ಸೂಚಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ, ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಹಾಗೂ ಗೀತಾನಂದ ಫೌಂಡೇಶನ್ ರಿ. ಕೋಟ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿಂತನೆಯಂತೆ ಶಿಕ್ಷಕರು ಕೇವಲ ಬೋಧಿಸುವ ಅಧಿಕಾರಿಯಲ್ಲ. ಬದಲಾಗಿ ಎಳೆಯ ಮಕ್ಕಳಲ್ಲಿ ಶಿಕ್ಷಣದ ಮೂಲಕ ರಾಷ್ಟçಪ್ರೇಮ ಬಿತ್ತುವ, ಅವರ ಪ್ರತಿಭೆಗಳನ್ನು ಹೊರಹೊಮ್ಮಲು ಪ್ರೋತ್ಸಾಹಿಸುವ ಗುರು. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗೌರವಿಸಲು ನನ್ನು ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ಹೇಳಿದ್ದರು. ಅಂದಿನಿಂದ ಇಂದಿನವರೆಗೂ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಸಮಾಜದಲ್ಲಿ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಮಕ್ಕಳ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣವೇ ಮೂಲ ಅಡಿಪಾಯ. ಶಿಕ್ಷಕರ ಜೀವನ ಶೈಲಿ, ಅವರ ವಿಚಾರಧಾರೆಗಳನ್ನು ಮಕ್ಕಳು ಅನುಸರಿಸುತ್ತಾರೆ. ಮಕ್ಕಳ ಭವಿಷ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಪ್ರತ್ಯಕ್ಷ ಹಾಗೂ ಪರೋಖ್ಷ ಕೊಡುಗೆ ನೀಡುತ್ತಿರುವ ಶಿಕ್ಷಕ ಬಾಂಧವರು ವಸ್ತುನಿಷ್ಠೆ, ಶ್ರದ್ಧೆಯಿಂದ ಕೆಲಸ ಮಾಡುವುದರೊಂದಿಗೆ ಈ ನಿಸ್ವಾರ್ಥ ಸೇವೆಯನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಉಡುಪಿ ಜಿಲ್ಲೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಜೊತೆಗೆ ಆರ್ಥಿಕವಾಗಿಯೂ ಜಿಲ್ಲೆ ಮುಂದೆವರೆಯುತ್ತಾ ಸಾಗಿದೆ. ಜಿಲ್ಲೆಯಲ್ಲಿ ಸರ್ಕಾರದ ಜೊತೆಗೆ ಹೆಚ್ಚಾಗಿ ಖಾಸಗಿಯಾಗಿ ದಾನಿಗಳು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಜಿಲ್ಲೆಯ ಶ್ರೇಷ್ಠತೆ, ಶಕ್ತಿ ಸಾಮರ್ಥ್ಯವನ್ನು ನಿರೂಪಿಸುವ ಹಲವಾರು ಕಾರ್ಯಕ್ರಮಗಳಿಗೆ ಖಾಸಗಿ ದಾನಿಗಳು ಒತ್ತು ನೀಡುತ್ತಿರುವುದು ಈ ಜಿಲ್ಲೆಯ ವಿಶೇಷತೆಯನ್ನು ನಿರೂಪಿಸುತ್ತದೆ ಎಂದ ಅವರು, ಸಮಾಜದ, ಜಿಲ್ಲೆಯೆ ಒಳಿತಿಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಇರಬೇಕು ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರ ಜೊತೆಯಲ್ಲಿ ಇರುವವರು ಶಿಕ್ಷಕರು. ಶಿಕ್ಷಕರುಗಳು ಮಕ್ಕಳ ತಪ್ಪು ಒಪ್ಪುಗಳನ್ನು ತಿದ್ದಿ, ತೀಡಿ, ಸುಸಂಸ್ಕೃತರನ್ನಾಗಿ ಮಾಡುವುದರೊಂದಿಗೆ ಸನ್ನಡತೆಯ ದಾರಿಗೆ ತರುತ್ತಿದ್ದಾರೆ. ದೇವರು ಒಪ್ಪುವ ರೀತಿಯಲ್ಲಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಶಿಕ್ಷಕರುಗಳಿಗೆ ಗೌರವ ಸಲ್ಲಿಸಲು ಇದೊಂದು ಉತ್ತಮ ದಿನವಾಗಿದೆ ಎಂದರು.
ಸರ್ಕಾರದವು ಕರಾವಳಿ ಸೇರಿದಂತೆ ಇತರೆ ಭಾಗದಲ್ಲಿ ಮುಚ್ಚುವ ಹಂತದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನ ಮಾಡುತ್ತಿದೆ. ಶಾಲೆಗಳ ಅಭಿವೃದ್ಧಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದ ಅವರು, ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ಅವರುಗಳ ಜೀವನಕ್ಕೆ ಹೊಸ ರೂಪ ನೀಡುತ್ತಿದ್ದಾರೆ. ಇಂತಹ ದೇಶದ ಪ್ರಜೆಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತಿರುವ ಎಲ್ಲಾ ಶಿಕ್ಷಕರುಗಳಿಗೆ ಶುಭಾಶಯಗಳನ್ನು ತಿಳಿಸಿದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಮಾತನಾಡಿ, ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದು, ಇದಕ್ಕೆ ಪೋಷಕರು, ಮಕ್ಕಳು, ಆಡಳಿತ ವರ್ಗ ಜೊತೆಗೆ ಶಿಕ್ಷಕರೇ ಮೂಲ ಕಾರಣ. ಮಹತ್ಮಾಗಾಂಧೀಜಿಯವರು ಶಿಕ್ಷಣದಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯ, ಮೂಢನಂಬಿಕೆ ತೊಡೆದುಹಾಕಲು ಸಾಧ್ಯ ಎಂದಿದ್ದರು. ಅದೇ ರೀತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದ ಅತ್ಯುನ್ನತ ರಾಷ್ಟçಪತಿ ಹುದ್ದೆ ಅಲಂಕರಿಸುವುದರೊಂದಿಗೆ ಶಿಕ್ಷಕರ ಬಗ್ಗೆ ಅತೀವ ಕಾಳಜಿ ಹೊಂದಿದ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಆದರ್ಶಪ್ರಾಯರು ಎಂದರು.
ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಮನೆಯಲ್ಲಿ ಕಲ್ಪಿಸುವ ಪೂರಕ ವ್ಯವಸ್ಥೆಯನ್ನು ಸರ್ಕಾರ ಶಾಲೆಯಲ್ಲಿ ನೀಡುತ್ತಿದ್ದು, ಇದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿದೆ. ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಅನೇಕ ಒತ್ತಡ ಪರಿಸ್ಥಿತಿಗಳನ್ನು ಎದುರಿಸಿದರೂ ಸಹ ಮಕ್ಕಳ ಯಶಸ್ಸಿಗೆ ದಾರಿದೀಪವಾಗಿ ನಿಂತಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇದ್ದು, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ ಎಂದ ಅವರು, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಮಾತ್ರವಲ್ಲದೇ ಪ್ರತಿಭಾವಂತ ಅಧ್ಯಾಪಕರುಗಳಿಂದಲೂ ಸಹ ಜಿಲ್ಲೆಯು ಮುಂಚೂಣಿಯಲ್ಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯು ಶಿಕ್ಷಣ ವ್ಯವಸ್ಥೆಯಲ್ಲಿ ನಿರಂತರ ಸುಧಾರಣೆ ಆಗುತ್ತಿರುವುದು ನಾವು ಕಾಣುತ್ತಿದ್ದೇವೆ. ಇದಕ್ಕೆ ಶಿಕ್ಷಕರ ಕೊಡುಗೆ ಪ್ರಮುಖ ಕಾರಣ. ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳು, ಹೊಸ ಚಿಂತನೆಗಳು, ಅವರ ಆಲೋಚನೆಗಳಿಗೆ ಜೀವ ತುಂಬಬೇಕು. ರಾಜ್ಯಕ್ಕೆ ಮಾದರಿಯಾಗಿ ಜಿಲ್ಲೆಯ ಶಿಕ್ಷಕರು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದ ಅವರು, ಸಮಾಜದಲ್ಲಿ ಬದಲಾವಣೆ ನಿರಂತರ ಪ್ರಕ್ರಿಯೆಯಾಗಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಬಿ ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಉಪನ್ಯಾಸ ನೀಡಿ ಮಾತನಾಡುತ್ತಾ, ಮಕ್ಕಳನ್ನು ಸತ್ಪçಜೆಗಳಾಗಿ ರೂಪಿಸುವಲ್ಲಿ ಪೋಷಕರೊಂದಿಗೆ ಶಿಕ್ಷಕರ ಹೊಣೆಗಾರಿಯೂ ದೊಡ್ಡದಾಗಿದೆ. ಶಿಕ್ಷಕ ಎಂದರೆ ಜ್ಞಾನ, ಕೌಶಲ್ಯ, ಮತ್ತು ಮೌಲ್ಯಗಳನ್ನು ಇತರರಿಗೆ ಕಲಿಸುವ ಅಥವಾ ಮಾರ್ಗದರ್ಶನ ನೀಡುವ ವ್ಯಕ್ತಿ. ಅವರ ಮಾರ್ಗದರ್ಶನವನ್ನು ಮಕ್ಕಳು ಸದಾ ಪಾಲಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಜತೆಗೆ, ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಾಯ ಮಾಡುತ್ತಾರೆ. ಶಿಕ್ಷಕರು ಕಾಲಕಾಲಕ್ಕೆ ತಕ್ಕಂತೆ ಬದಲಾಗಬೇಕು. ಹೊಸ ತನವನ್ನು ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೈಂದೂರು ತಾ. ಸಾಲಿಮಕ್ಕಿ ಸರ್ಕಾರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಗಣೇಶ್, ಬ್ರಹ್ಮಾವರ ತಾ. ಆಲಡ್ಕ ಸರ್ಕಾರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ರವಿ, ಕುಂದಾಪುರ ತಾ. ಅಲ್ಬಾಡಿ ಮೂರು ಕೈ ಸರ್ಕಾರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಉಷಾಕುಮಾರಿ ಹಾಗೂ ಟಿ.ಟಿ. ರೋಡ್ ಸರ್ಕಾರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಲೀಲಾವತಿ ನಾಯ್ಕ, ಉಡುಪಿ ತಾ. ವಳಕಾಡು ಸರಕಾರಿ ಮಾದರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಸುವಾಸಿನಿ, ಕಾರ್ಕಳ ತಾ. ಹೆರ್ಮುಂಡೆ ಸರ್ಕಾರಿ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಶ್ರೀಕಾಂತ್ ಭಟ್.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬ್ರಹ್ಮಾವರ ತಾ. ಹೇರೂರು ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಂಜುಳ ಜಯಕರ್, ಕುಂದಾಪುರ ತಾ. ನೂಜಾಡಿ -2, ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶೈಲಜಾಶೆಟ್ಟಿ ಹಾಗೂ ಬೀಜಾಡಿ-ಪಡು ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಪಾರ್ವತಿ ಎಂ, ಕಾರ್ಕಳ ತಾ. ಕಲ್ಯಾ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ವೀಣಾ ಆರ್ ಹಾಗೂ ಉಡುಪಿ ತಾ. ಪಡು ಅಲೆವೂರು ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಸತೀಶ್ಚಂದ್ರ. ಪ್ರೌಢಶಾಲಾ ವಿಭಾಗದಲ್ಲಿ ಬ್ರಹ್ಮಾವರ ತಾ. ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹ ಶಿಕ್ಷಕ ಕೃಷ್ಣಶೆಟ್ಟಿ, ಬೈಂದೂರು ತಾ. ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹ ಶಿಕ್ಷಕ ರವಿರಾಜ್ ಶೆಟ್ಟಿ, ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್ ನಾರಾಯಣ ಶೆಣೈ, ಉಡುಪಿ ತಾ. ಪಟ್ಲ ಯು.ಎಸ್ ನಾಯಕ್ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ ಹಾಗೂ ಕುಂದಾಪುರ ತಾ. ಬಸ್ರೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪಿಯುಷ್ ಡಿ ಸೋಜಾ ಅವರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಡಾ. ಅಶೋಕ್ ಕಾಮತ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಶಾಲಿನಿ ಜಿ. ಶಂಕರ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಎಲ್ಲಾ ತಾಲೂಕು ಶಿಕ್ಷಕ ಸಂಘಟನೆಯ ಅಧ್ಯಕ್ಷರುಗಳು, ಪಧಾಧಿಕಾರಿಗಳು, ಶಿಕ್ಷಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಮಂಜುಳಾ ಜಯಕರ್ ಹಾಗೂ ಸತೀಶ್ ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ ವಂದಿಸಿದರು.
















