ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸ್ಕೂಟಿಯೊಂದು ಬಸ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಸಹಸವಾರ ಪುತ್ರ ಗಂಭೀರ ಗಾಯಗೊಂಡ ಘಟನೆ ಶನಿವಾರ ಮಾಬುಕಳ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.
ಸ್ಕೂಟಿ ಸವಾರ ರವಿರಾಜ್ (49) ಮೃತ ಪಟ್ಟ ವ್ಯಕ್ತಿ. ಸಹಸವಾರನಾಗಿದ್ದ ಅವರ ಪುತ್ರ ಅನಿಲ್ ಗಂಭೀರವಾಗಿ ಗಾಯಗೊಂಡಿದ್ದು ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿರಾಜ್ ಅವರು ಮೂಲತಃ ಕಿರಿಮಂಜೇಶ್ವರ ನಿವಾಸಿಯಾಗಿದ್ದು ಪ್ರಸ್ತುತ ಮಟಪಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪುತ್ರ ಕೋಟದ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಶಾಲೆಗೆ ಹೊರಡುವುದು ತಡವಾದ ಕಾರಣ ಸ್ಕೂಟಿಯಲ್ಲಿ ಮಗನನ್ನು ಶಾಲೆಗೆ ಬಿಡಲು ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮಾವರದಿಂದ ಕುಂದಾಪುರ ಕಡೆಗೆ ಚಲಾಯಿಸುತ್ತಿದ್ದ ಬಸ್ಸು ಮಾಬುಕಳ ಬಸ್ ನಿಲ್ದಾಣದ ಬಳಿ ಮತ್ತೊಂದು ವಾಹನವನ್ನು ಹಿಂದಿಕ್ಕಿ ಬಳಿಕ ಮುನ್ಸೂಚನೆ ನೀಡದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಏಕಿ ನಿಲ್ಲಿಸಿದೆ ಎನ್ನಲಾಗಿದೆ.
ಈ ವೇಳೆ ರವಿರಾಜ್ ಅವರು ಚಲಾಯಿಸುತ್ತಿದ್ದ ಸ್ಕೂಟಿ ಬಸ್‌ನ ಹಿಂಭಾಗದ ಬಲಬದಿಗೆ ಢಿಕ್ಕಿ ಹೊಡೆದು ಬಸ್‌ನಡಿ ಬಿದ್ದಿದೆ. ಪರಿಣಾಮ ರವಿರಾಜ್ ಹಾಗೂ ಅನಿಲ್ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ರವಿರಾಜ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅನಿಲ್ ಒಳರೋಗಿಯಾಗಿ ದಾಖಲಾಗಿದ್ದಾರೆ.
ಬಸ್ ಚಾಲಕನ ನಿರ್ಲಕ್ಷ್ಯ ವಿರುದ್ಧ ಸ್ಥಳೀಯರು ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















