ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನಾಗಶಯನ ಪಿ.ಸಿ. ಇಲಾಖಾವಾರು ಯೋಜನಾ ಪ್ರಗತಿ ಪರಿಶೀಲಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಬೈಂದೂರು ಹಾಗೂ ಕುಂದಾಪುರ ತಾಲ್ಲೂಕುಗಳಲ್ಲಿ ಮರಣ ಹೊಂದಿದ ಒಟ್ಟು 25,079 ಫಲಾನುಭವಿಗಳ ಖಾತೆಗೆ ₹77.44 ಲಕ್ಷ ಅನುದಾನ ಜಮೆಯಾಗಿತ್ತು. ಇದರಲ್ಲಿ ಈಗಾಗಲೇ ₹29 ಲಕ್ಷದಷ್ಟು ಮೊತ್ತ ಮೃತರ ಬ್ಯಾಂಕ್ ಖಾತೆಗಳಿಂದ ಸರ್ಕಾರಕ್ಕೆ ಮರು ಜಮೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇನ್ನುಳಿದಂತೆ ಅನ್ನಭಾಗ್ಯ ಯೋಜನೆಯಡಿ ಶಿರೂರಿನ ಹಡವಿನಕೋಣೆಯಲ್ಲಿ ಹೊಸ ರೇಷನ್ ಅಂಗಡಿ ತೆರೆಯಲು ಅನುಮೋದನೆ ಸಿಕ್ಕಿದ್ದು, ಆದೇಶ ಪತ್ರ ಬಂದ ತಕ್ಷಣ ಉದ್ಘಾಟನೆಗೆ ಕ್ರಮವಹಿಸಲು ಸೂಚಿಸಲಾಯಿತು. ಕೊಲ್ಲೂರು, ಜಡ್ಕಲ್, ಮುದೂರು, ಹಳ್ಳಿಹೊಳೆ ಭಾಗದ ಜನರಿಗೆ ಶಕ್ತಿ ಯೋಜನೆಯ ಪ್ರಯೋಜನ ಸಿಗಲು ಕನಿಷ್ಠ ಒಂದು ಸರ್ಕಾರಿ ಬಸ್ ಒದಗಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಇದರೊಂದಿಗೆ ಗೃಹ ಜ್ಯೋತಿ ಯೋಜನೆಯಡಿ ಬೈಂದೂರು ಮೆಸ್ಕಾಂ ವ್ಯಾಪ್ತಿಯ ಬಾಕಿ ಸರ್ವೆ ಕಾರ್ಯಕ್ಕೆ ಸಹಕಾರ ಕೋರಲಾಯಿತು ಹಾಗೂ ಯುವನಿಧಿ ಯೋಜನೆಯ ಬಾಕಿ ಅನುಮೋದನೆಗಳನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
















