ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂದೇ ಮಾತರಂ ಕೇವಲ ಘೋಷವಾಕ್ಯವಲ್ಲ; ಅದು ನಮ್ಮ ದೇಶದ ಆತ್ಮ. ತಾಯ್ತಾಡಿನ ಮೇಲಿನ 2,13, ಗೌರವ ಹಾಗೂ ದೇಶಭಕ್ತಿಯ ಪ್ರತೀಕವಾಗಿದೆ. ವಂದೇಮಾತರಂಪಾದಯಾತ್ರೆಯ ಮೂಲಕ ದೇಶಪ್ರೇಮದ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸುವ ಕಾರ್ಯವಾಗಲಿ ಎಂದು ಕೇರಳದ ರಾಜ್ಯಸಭಾ ಸದಸ್ಯ ಸದಾನಂದ ಮಾಸ್ಟರ್ ಹೇಳಿದರು.
ಅವರು ಕುಂದಾಪುರದಿಂದ ಸಾಸ್ತಾನದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಕಿ.ಮೀ. ದೂರದವರೆಗೆ ಕಾಲ್ನಡಿಗೆ ಜಾಥಾಗೆ ಸೋಮವಾರ ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿ ಚಾಲನೆ ನೀಡಿ, ಬಳಿಕ ಶಾಸ್ತ್ರಿ ಸರ್ಕಲ್ ಬಳಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ವಿಚಾರಧಾರೆಯನ್ನು ಪ್ರತಿಪಾದಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಪೈಪೋಟಿಯಲ್ಲಿ ರಾಷ್ಟ್ರೀಯ ವಿಚಾರಧಾರೆಗೆ ಮತ್ತಷ್ಟು ಬಲ ದೊರೆಯಲು ಎಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯವಿದೆ ಎಂದು ಮನವಿ ಮಾಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರದಲ್ಲಿ ನಡೆಯುತ್ತಿರುವವಂದೇ ಮಾತರಂ ಜನಜಾಗೃತಿ ಪಾದಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನರು ಹಾಗೂ ಯುವಕರು ಸೇರುತ್ತಿರುವುದು ಸಂತಸ ತಂದಿದೆ. ಕುಂದಾಪುರದಿಂದ ಸಾಸ್ತಾನದವರೆಗೆ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಯುವಕರ ಉತ್ಸಾಹ ಕಂಡು ಮತ್ತಷ್ಟು ಪ್ರೇರಣೆ ದೊರೆತಿದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳು ಹಾಗೂ 28 ಲೋಕಸಭಾ ಕ್ಷೇತ್ರಗಳ ಪೈಕಿ ಕುಂದಾಪುರದಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವುದು ಗಮನಾರ್ಹ ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ನಿವೃತ್ತ ಹಿರಿಯ ಯೋಧ ರಮೇಶ್ ಕಾರ್ಣಿಕ್, ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠಲ ಕಿಣಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಕುಮಾರ್ ಶೆಟ್ಟಿ, ವಿವಿಧ ಮಂಡಲಗಳ ಅಧ್ಯಕ್ಷರಾದ ಅನಿತಾ, ನವೀನ್ ನಾಯಕ್, ರಾಜು ಕುಲಾಲ್, ಗೋಪಾಲ್, ಪ್ರಮುಖರಾದ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರಾಜೇಶ್ ಕಾವೇರಿ, ಶಂಕರ ಅಂಕದಕಟ್ಟೆ, ಸುನೀಲ್ ಶೆಟ್ಟಿ, ಸುರೇಶ್ ಶೆಟ್ಟಿ ಕಾಡೂರು, ಸದಾನಂದ ಬಳ್ಳೂರು, ವಿಠಲ ಪೂಜಾರಿ, ಸೌರಭಿ ಪೈ, ರೂಪಾ ಪೈ, ಜಿಲ್ಲಾ, ಮಂಡಲದ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ನಿರೂಪಿಸಿ, ಸುಧೀರ್ ಕೆ.ಎಸ್. ವಂದಿಸಿದರು.
















