ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಕೊ-ಆಪರೇಟಿವ್ ಸೊಸ್ಶೆಟಿಯ 106ನೇ ವಾರ್ಷಿಕ ಸಾಮಾನ್ಯ ಸಭೆಯು ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಭಾನುವಾರ ಜರುಗಿತು.
ಸಹಕಾರಿಯ ಅಧ್ಯಕ್ಷ ಜಿ. ವೆಂಕಟೇಶ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯ ಗಂಗೊಳ್ಳಿ ಟೌನ್ ಸೌಹಾರ್ದ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್ 2025-26ನೇ ಸಾಲಿನಲ್ಲಿ 1.42 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.17 ಡಿವಿಡೆಂಡ್ ಘೋಷಿಸಿದರು.

ವರದಿ ಸಾಲಿನ ಅಂತ್ಯದಲ್ಲಿ ಸಂಘವು 4,114 ಸದಸ್ಯರು, 104.30 ಕೋಟಿ ಠೇವಣಿ, 89.44 ಕೋಟಿ ರೂ. ಸದಸ್ಯರ ಸಾಲ, 30.92 ಕೋಟಿ ಹೂಡಿಕೆ, 6.55 ಕೋಟಿ ವಿವಿಧ ನಿಧಿಗಳನ್ನು ಹೊಂದಿದ್ದು, ಸೌಹಾರ್ದ ಕಾಯಿದೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸೌಹಾರ್ದ ಸಹಕಾರಿ ಸಂಘಗಳಲ್ಲಿ ಮಂಚೂಣಿಯಲ್ಲಿದೆ. ಕಳೆದ ನವಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯೂ ಲಭಿಸಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ ಮರವಂತೆ, ಸಿದ್ದಾಪುರ ಹಾಗೂ ಸಾಸ್ತಾನದಲ್ಲಿ ಸಂಘದ ನೂತನ ಶಾಖೆಗಳನ್ನು ತೆರೆಯಲು ನಿರ್ಣಯಿಸಲಾಗಿದೆ ಎಂದು ಹೇಳಿದ ಅವರು, ಗಂಗೊಳ್ಳಿಯ ರಥಬೀದಿಯಲ್ಲಿ ಹೈಮಾಸ್ಕ್ ದೀಪ, ಸ್ಥಳೀಯ ಗ್ರಾಮ ಪಂಚಾಯತ್‌ಗೆ ಬೀದಿ ದೀಪಗಳ ಕೊಡುಗೆ ಸೇರಿದಂತೆ ಹಲವು ಜನೋಪಯೋಗಿ ಕೊಡುಗೆಗಳನ್ನು ಅವರು ಸಭೆಯಲ್ಲಿ ಘೋಷಿಸಿದರು.
ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎನ್. ಮಾಧವ ಕಿಣಿ, ಕೆ. ಪರಮೇಶ್ವರ ನಾಯಕ್, ರಾಮನಾಥ ಚಿತ್ತಾಲ್, ಬಿ. ರಾಘವೇಂದ್ರ ಪೈ, ನಗರ್ ಅಶ್ವಿನ್ ಕುಮಾರ್ ನಾಯಕ್, ಗೀತಾ ಜಿ. ನಾಯಕ್, ದೀಪಾಲಕ್ಷ್ಮೀ ನಾಯಕ್, ಕಿರಣ್ ಪಿಲಿಫ್ ಪಿಂಟೊ, ಮಹಾಬಲ ಪೂಜಾರಿ, ಸುರೇಶ್ ಜಿ. ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ನಾಗಪ್ರಸಾದ್ ಪೈ ಎಂ.ಜಿ. ಸ್ವಾಗತಿಸಿ, ಸಂಘದ ಕಿರಿಯ ಸಹಾಯಕಿ ಪ್ರತೀಕ್ಷಾ ರಾಷ್ಟ್ರೀಯ ಗೀತೆಯನ್ನು ಹಾಡಿದರು. ನಿರ್ದೇಶಕ ಎಸ್. ವೆಂಕಟರಮಣ ಆಚಾರ್ಯ ವಂದಿಸಿ, ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್ ನಿರ್ವಹಿಸಿದರು.
















