ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಕಾನೂನು ಪದವೀಧರರಾಗಿ ಸಹಕಾರಿ ಕ್ಷೇತ್ರದಲ್ಲಿ ಜನಸಾಮಾನ್ಯರ ನ್ಯಾಯವಾದಿಗಳಾಗಿ ಕಾನೂನು ವೃತ್ತಿಯ ಜತೆಗೆ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಕೃಷಿ, ಸಹಕಾರಿ, ಸೊಸೈಟಿ, ಬ್ಯಾಂಕುಗಳಲ್ಲೂ ಉನ್ನತ ಸ್ಥಾನಗಳ ಜವಾಬ್ದಾರಿಯನ್ನು ಹೊಂದಿದ್ದು ಕರ್ನಾಟಕ ರಾಜ್ಯದಾದ್ಯಂತ ಸಹಕಾರಿ ಸಂಘಟನಾ ಕ್ಷೇತ್ರಗಳಲ್ಲಿ ವಿದ್ವತ್ ಭಾಷಣಗಾರರಾಗಿ ಗುರುತಿಸಿಕೊಂಡಿರುವ ನ್ಯಾಯವಾದಿ ಶ್ರೀಧರ ಪಿ. ಎಸ್. ಅವರು ಮೂಲತಃ ಸಾಸ್ತಾನದವರು.
ತನ್ನ ಹುಟ್ಟೂರು ಸಾಸ್ತಾನದಿಂದ ಬೆಳೆದು ಬಂದು ವಿವಿಧ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡು ಹಂತ ಹಂತವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯದಾದ್ಯಂತ ತನ್ನ ಆಸಕ್ತಿಯ ಸಹಕಾರಿ ಕ್ಷೇತ್ರದ ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಹಾಗೂ ಕಾನೂನು ಕ್ಷೇತ್ರಗಳ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿರುವ ಶ್ರೀಧರ ಪಿ. ಎಸ್. ಅವರು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಸಾಸ್ತಾನದ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ತನ್ನ ವೃತ್ತಿಯಾದ ಕಾನೂನು ಕ್ಷೇತ್ರದ ನ್ಯಾಯವಾದಿಯಾಗಿ, ಕುಂದಾಪುರವನ್ನು ಕೇಂದ್ರೀಕರಿಸಿ ಬೇಕರಿ ಉತ್ಪನ್ನಗಳ ತಯಾರಕರು, ಮಾರಾಟಗಾರರಾಗಿ ಸ್ವಂತ ಬೇಕರಿ ಉದ್ಯಮ ವ್ಯವಹಾರವನ್ನು ನಡೆಸುತ್ತಿದ್ದು, ಹಲವು ಜನರಿಗೆ ತನ್ನ ಬೇಕರಿ ಉದ್ಯಮ ಕ್ಷೇತ್ರದಲ್ಲಿ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದಾರೆ.
ಕರ್ನಾಟಕ ರಾಜ್ಯ ಹಾಗೂ ಉಡುಪಿ ಜಿಲ್ಲೆಯನ್ನು ಕೇಂದ್ರೀಕರಿಸಿ ಸಹಕಾರಿ ಕ್ಷೇತ್ರದಲ್ಲೂ ಹಲವು ಮಹತ್ವದ ಸಾಧನೆ ಗೈದಿದ್ದಾರೆ. ಉಡುಪಿ ಜಿಲ್ಲೆಯ ಹಲವು ಕೃಷಿ, ಸಹಕಾರಿ ಸೊಸೈಟಿ ಬ್ಯಾಂಕುಗಳ ಅಧ್ಯಕ್ಷರು, ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ಕರ್ನಾಟಕ ಸರಕಾರದ ಕರ್ನಾಟಕ ಸಹಕಾರ ಮಹಾಮಂಡಲದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಉಡುಪಿ ಜಿಲ್ಲೆಯ ಕುಂದಾಪುರದ ಬೇಕರಿ ಮತ್ತು ಖಾದ್ಯ ತಯಾರಕರ ಮತ್ತು ಮಾರಾಟಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತನ್ನ ಬಿಡುವಿಲ್ಲದ ಉದ್ಯೋಗ ವ್ಯವಹಾರದ ಸಮಯವನ್ನು ಹೊಂದಿಸಿಕೊಂಡು ತನ್ನ ಆಸಕ್ತಿ ಕ್ಷೇತ್ರವಾದ ಶಿಕ್ಷಣ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಗೈದಿದ್ದಾರೆ. ಶ್ರೀಧರ ಪಿ. ಎಸ್. ಅವರು ಇದೀಗ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಮೂಡುಬಿದಿರೆ – ದೂರಶಿಕ್ಷಣ ಡಿ.ಸಿ.ಎಂ. ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ‘ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮೇನೇಜ್ ಮೆಂಟ್ ಕೋರ್ಸ್’ನಲ್ಲಿ ‘ಎ’ ಶ್ರೇಣಿಯಲ್ಲಿ ತೇರ್ಗಡೆಗೊಂಡು ಡಿಪ್ಲೋಮಾ ಪದವೀಧರರಾಗಿ ಮಹತ್ವದ ಸಾಧನೆ ಗೈದಿದ್ದಾರೆ.
ಶ್ರೀಧರ ಪಿ. ಎಸ್. ಅವರ ಸಾಧನೆಯನ್ನು ಅಭಿನಂದಿಸಿ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ ನ್ಯಾಕ್, ಕಾರ್ಯಾಧ್ಯಕ್ಷ ಶ್ರೀನಿವಾಸ ಶೇರ್ವೆಗಾರ್ ಹೆಬ್ರಿ, ಕೋಶಾಧಿಕಾರಿ ಯು. ಕರುಣಾಕರ ರಾವ್ ಉಡುಪಿ, ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ನಾಗರಾಜ ರಾವ್ ಕಾಮಧೇನು ಹಾಗೂ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಹಾಗೂ ವಿವಿಧ ಕ್ಷೇತ್ರದ ಗಣ್ಯ ಮಹನೀಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
















