ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಹಿಂದೂ ಸುರಕ್ಷಾ ಸಮಿತಿ ಚಿತ್ತೂರು ನೇತೃತ್ವದಲ್ಲಿ ದೇವಸ್ಥಾನದ ಸುತ್ತಮುತ್ತ ವಲಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಕಳ್ಳತನವನ್ನು ಖಂಡಿಸಿ ಹಾಗೂ ಗೋಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ಭವ್ಯ ಪಾದಯಾತ್ರೆ ಮತ್ತು ಜನಾಗ್ರಹ ಸಭೆ ಯಶಸ್ವಿಯಾಗಿ ನಡೆಯಿತು.

”ಕಾಮಧೇನುವಿನ ರಕ್ಷಣೆ ನಮ್ಮೆಲ್ಲರ ಹೊಣೆ” ಮತ್ತು “ಭಕ್ತರ ನಡೆ ಬ್ರಹ್ಮಲಿಂಗನ ಕಡೆ” ಎಂಬ ಧ್ಯೇಯವಾಕ್ಯದೊಂದಿಗೆ ಚಿತ್ತೂರು ಸರ್ಕಲ್‌ನಿಂದ ಆರಂಭವಾದ ಬೃಹತ್ ಪಾದಯಾತ್ರೆಯು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸನ್ನಿಧಿಯವರೆಗೆ ಸಾಗಿಬಂತು. ದಾರಿಯುದ್ದಕ್ಕೂ ಗೋರಕ್ಷಣೆ ಪರವಾಗಿ ಘೋಷಣೆಗಳನ್ನು ಕೂಗಿ, ಗೋಕಳ್ಳರನ್ನು ಕಠಿಣವಾಗಿ ಶಿಕ್ಷಿಸುವಂತೆ ಆಗ್ರಹಿಸಲಾಯಿತು.
ಪಾದಯಾತ್ರೆಯ ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆದರ್ಶ್ ಕೇಲ, ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಸಂಯೋಜಕ ಹರೀಶ್ ಸಲ್ಕೋಡ್ ಹಾಗೂ ಶ್ರೀನಿವಾಸ್ ಮಂಜರು ಉಪಸ್ಥಿತರಿದ್ದು ಗೋಹತ್ಯೆ ಮತ್ತು ಗೋಕಳ್ಳತನದ ವಿರುದ್ಧ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಹಾಗೂ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಸಾವಿರಾರು ಕಾರ್ಯಕರ್ತರು ಮತ್ತು ಭಕ್ತರು ಪಾಲ್ಗೊಂಡು ಬೆಂಬಲ ಸೂಚಿಸಿದರು.











