ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕಚೇರಿಯಲ್ಲಿ ಬೈಂದೂರು ತಾಲೂಕು ವ್ಯಾಪ್ತಿಯ ಅಕ್ರಮ ಸಕ್ರಮ ಕಡತಗಳ ಹಾಗೂ 94ಸಿ ಹಾಗೂ 94ಸಿಸಿ ಅರ್ಜಿಗಳ ವಿಲೇವಾರಿಯನ್ನು ಕಳೆದ ಮೂರು ವರ್ಷಗಳಿಂದ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ವಿನಾಕಾರಣ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಆಧರಿಸಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ನಡೆಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ಸಕ್ರಮ ಅರ್ಜಿಗಳನ್ನು ಅಧಿಕಾರಿಗಳು ರದ್ದು ಪಡಿಸಿರುವ ಬಗ್ಗೆ ಸಭೆಯಲ್ಲಿ ಕೆಂಡಾ ಮಂಡಲರಾದರು. ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರಕಾರ ತಂತ್ರಾಂಶಗಳನ್ನು ಅಳವಡಿಸಿದ್ದರೂ ಸದ್ರಿ ತಂತ್ರಾಂಶಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಅಧಿಕಾರಿಗಳ ಅಸಡ್ಡೆ ಹಾಗೂ ಗ್ರಾಮೀಣ ಭಾಗದ ಬಡ ರೈತರುಗಳ ಅಕ್ರಮ ಸಕ್ರಮ ಅರ್ಜಿಗಳು, ಆರ್ ಆರ್ ಟಿ ಅರ್ಜಿಗಳ ಬಗ್ಗೆ ಕಾಳಜಿ ತೋರಿಸದೇ ಕಳೆದ ಮೂರು ವರ್ಷಗಳಲ್ಲಿ ನೀಡಿದ ನಿರಂತರ ಸೂಚನೆಗಳ ಹೊರತಾಗಿಯೂ ಅರ್ಜಿ ವಿಲೇವಾರಿಗೆ ವಿಳಂಬ ತೋರಿಸುತ್ತಿರುವ ತಹಶೀಲ್ದಾರ್, ಸರ್ವೇ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಕಚೇರಿ ವಿಷಯ ನಿರ್ವಾಹಕರುಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಇನ್ನು 10 ದಿವಸದ ಒಳಗೆ ತಾಂತ್ರಿಕ ಕಾರಣಗಳನ್ನು ಸರಿ ಪಡಿಸಿ ಅರ್ಹ ಎಲ್ಲರಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ವಹಿಸದೇ ಇದ್ದಲ್ಲಿ ತಾಲೂಕು ಕಚೇರಿ ಎದುರುಗಡೆ ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಸಾರ್ವಜನಿಕರ, ಜನ ಪ್ರತಿನಿಧಿಗಳ ತಾಳ್ಮೆ ಪರೀಕ್ಷಿಸುವ ದುಸ್ಸಾಹಸ ಬೇಡ ಎಂದು ಆಕ್ರೋಶ:
ಆರ್ ಆರ್ ಟಿ ಹಾಗೂ 94ಸಿ ಹಾಗೂ 94 ಸಿಸಿಗೆ ಸಂಬಂಧಿಸಿದ ಹಳೆಯ ಅರ್ಜಿಗಳನ್ನು ಸಹ ಹಲವು ಸಮಯದಿಂದ ಬಾಕಿ ಇಟ್ಟುಕೊಂಡು ಕಚೇರಿಗೆ ಬರುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ವಿನಾ ಕಾರಣ ಕಚೇರಿಯಿಂದ ಕಚೇರಿಗೆ ಓಡಾಡಿಸುತ್ತಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಶಾಸಕರು ನನ್ನ ಹಾಗೂ ತಾಲೂಕಿನ ಸಾರ್ವಜನಿಕರ ತಾಳ್ಮೆ ಯನ್ನು ದೌರ್ಬಲ್ಯ ಪರಿಗಣಿಸಿದರೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಹಾಗಾಗಿ ಹಲವು ವರ್ಷ ಹಾಗೂ ತಿಂಗಳಿನಿಂದ ತಾಲೂಕು ಕಚೇರಿಯಲ್ಲಿ ಇರುವ ಹಳೆಯ ಅರ್ಜಿಗಳನ್ನು ತತಕ್ಷಣ ವಿಲೇವಾರಿ ಮಾಡುವ ಮೂಲಕ ಜನರಿಗೆ ಸ್ಪಂದಿಸಲು ಸಂಬಂಧ ಪಟ್ಟ ವಿಷಯ ನಿರ್ವಾಹಕರುಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಗ್ರೇಡ್ -1 ರವಿರಾಜ್ ದೀಕ್ಷಿತ್, ತಹಸೀಲ್ದಾರ್ ಗ್ರೇಡ್ -2 ರಾಮ ಚಂದ್ರಪ್ಪ,ಉಪ ತಹಸೀಲ್ದಾರ್ ಲತಾ ಬೈಂದೂರು ತಾಲೂಕು ಸರ್ವೇ ಸೂಪರ್ ವೈಸರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ತಾಲೂಕು ಕಚೇರಿ ವಿಷಯ ನಿರ್ವಾಹಕರು ಉಪಸ್ಥಿತರಿದ್ದರು.
















