ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸರಕಾರವು ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೆ ಸಕಾಲದಲ್ಲಿ ತಲುಪುವಂತೆ ಮಾಡುವುದರೊಂದಿಗೆ ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಭೋವಿ (ವಡ್ಡರ) ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಗತಿ ಪರಿಶೀಲನ ಸಭೆ ಹಾಗೂ ಸಮುದಾಯದ ಮುಖಂಡರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರಕಾರವು ಜನ ಸಾಮಾನ್ಯರ ಶ್ರೇಯೋಭಿವೃದ್ಧಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರೊಂದಿಗೆ ಭೋವಿ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ 6 ಗ್ಯಾರಂಟಿ ಯೋಜನೆಗಳನ್ನು ಜಾರಿಗೋಳಿಸಿದೆ. ಈ ಎಲ್ಲಾ ಯೋಜನೆಗಳು ಪ್ರಾಮಾಣಿಕವಾಗಿ ಅರ್ಹ ಬಡವರು, ನಿರ್ಗತಿಕರು ಸೇರಿದಂತೆ ಸಮಾಜದ ಕಟ್ಟಕಡೆಯ ಭೋವಿ ಸಮಾಜದ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕರ್ತವ್ಯವಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.
ಅತೀ ಹಿಂದುಳಿದವರಾದ ಭೋವಿ ಸಮಾಜಕ್ಕೆ ಅಗತ್ಯ ನೆರವು ದೊರಕಿ ಅವರ ಬೇಡಿಕೆಗಳು ಈಡೇರಬೇಕು. ಅತೀ ಕಡು ಬಡವ ಜನಾಂಗದವರಾದ ಭೋವಿ ಜನಾಂಗವು ಜಿಲ್ಲೆಯಲ್ಲಿ ತಮ್ಮ ಜೀವನಪಾಯಕ್ಕಾಗಿ ಬೇರೆ ಬೇರೆ ಕಡೆಗಳಿಂದ ಬಂದು ನೆಲೆಸಿ ವಿವಿಧ ಕುಲ ಕಸುಬುಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಮಾಜವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಅವಶ್ಯವಿದ್ದು, ಜಾತಿಯ ಪ್ರಮಾಣ ಪತ್ರ ನೀಡಲು, ಈ ಸಮುದಾಯದವರು ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಾಗ ಕಂದಾಯ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಪರಿಶೀಲಿಸಿ, ಸಮನ್ವಯದೊಂದಿಗೆ ಅರ್ಹರಿಗೆ ಜಾತಿ ಪ್ರಮಾಣ ಪತ್ರ ದೊರಕಿಸಿಕೊಡಬೇಕು. ಒಂದೊಮ್ಮೆ ಅರ್ಜಿದಾರರನ್ನು ಪರಿಶೀಲನೆಗೆ ಕರೆದಾಗ ಅವರಿಗೆ ಸಹಕರಿಸಬೇಕು ಎಂದರು.
ಭೋವಿ ಜನಾಂಗದ ಕುಲಕಸುಬಾದ ಕಲ್ಲು ಒಡೆಯುವುದು, ಆಗಿದ್ದು, ಸರಕಾರ ಅವರ ಮೂಲ ವೃತ್ತಿ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 2 ಎಕರೆ ವರೆಗೆ ಕಲ್ಲು ಕೋರೆಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೆ 21 ಜನ ಅರ್ಜಿ ಸಲ್ಲಿಸಿದ್ದು, ಆದರೆ ಕೇವಲ ಎರಡು ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಉಳಿದ ಅರ್ಜಿ ಸಲ್ಲಿಸಿದವರಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯಲು ಕಳುಹಿಸಿದ್ದು, ಇವುಗಳನ್ನು ನೀಡಲು ವಿಳಂಬ ಉಂಟಾಗುತ್ತಿದೆ. ಗಣಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅನುಸರಣೆ ಮಾಡಿ, ಮುಂದಿನ ಎರಡು ತಿಂಗಳ ಒಳಗಾಗಿ ನಿಯಮಾನುಸಾರವಾಗಿ ಕೋರೆಗಳನ್ನು ನೀಡಲು ಮುಂದಾಗಬೇಕೆAದು ತಿಳಿಸಿದರು.
ಭೋವಿ ಸಮಾಜದವರು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ. ಇವರುಗಳು ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದಾಗ ಪರಿಶೀಲಿಸಿ ಅರ್ಹ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ನೀಡಬೇಕೆಂದು ತಿಳಿಸಿದರು.
ಭೋವಿ ಸಮುದಾಯದ ಮಕ್ಕಳನ್ನು ಹೆಚ್ಚು ಶಿಕ್ಷಣವಂತರನ್ನಾಗಿ ಮಾಡಬೇಕು. ಸಮುದಾಯದ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಪ್ರತಿಷ್ಟಿತ ಶಾಲೆಗಳಲ್ಲಿ ಈ ಸಮುದಾಯದ ಮಕ್ಕಳು ಹೆಚ್ಚು ದಾಖಲು ಆಗುವಂತೆ ಸೂಕ್ತ ಕ್ರಮ ವಹಿಸಬೇಕು ಎಂದ ಅವರು ಯಾವುದೇ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವಾಗ ಜಾತಿ, ಉಪಜಾತಿ ಸೇರಿದಂತೆ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ ನಂತರ ದಾಖಲು ಮಾಡಿಕೊಳ್ಳುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ತಿಳಿಸಬೇಕು ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ ಗಪೂರ್ ಮಾತನಾಡಿ, ಸರಕಾರವು ಭೋವಿ ಸಮಾಜವು ಮುನ್ನೆಲೆಗೆ ಬರುವ ನಿಟ್ಟಿನಲ್ಲಿ ಅವರುಗಳಿಗೆ ಮೂಲಭೂತ ಸೌಕರ್ಯ, ಆರ್ಥಿಕ ಸಹಾಯಧನ ನೀಡುವುದರೊಂದಿಗೆ ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಅನುವು ಮಾಡಿಕೊಡಲಾಗಿದೆ. ಇವುಗಳ ಲಾಭವನ್ನು ಸಮುದಾಯದವರು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಕರಾವಳಿ ಜಿಲ್ಲೆಗಳಲ್ಲಿ ವಾಸವಿರುವ ಭೋವಿ ಸಮುದಾಯದ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ನಿಗಮದ ಅಧ್ಯಕ್ಷರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದ ಅವರು, ಧ್ವನಿ ಇಲ್ಲದವರ ಸಮಾಜಕ್ಕೆ ಧ್ವನಿಯಾಗಲು ಡಾ. ಬಿ. ಆರ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಸಮಾಜದಲ್ಲಿ ಪ್ರತಿಯೊಬ್ಬರೂ ಗೌರವಯುತವಾಗಿ ಬದಕಲು ದಾರಿ ಮಾಡಿಕೊಟ್ಟಿದ್ದಾರೆ. ಈ ಹಕ್ಕುಗಳನ್ನು ಭೋವಿ ಸಮಾಜದವರು ಅನುಸರಣೆ ಮಾಡಬೇಕು ಎಂದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೋವಿ ಸಮುದಾಯವಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಉಭಯ ಜಿಲ್ಲೆಗಳಲ್ಲಿ ಭೋವಿ ಸಮುದಯದವರಿಗೆ ಕಂದಾಯ ಅಧಿಕಾರಿಗಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರವು ವಿದ್ಯಾಭ್ಯಾಸ, ಉದ್ಯೋಗಕ್ಕ ಅತ್ಯಾವಶ್ಯವಾಗಿದ್ದು, ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಸರಕಾರದ ಚೌಕಟ್ಟಿನಲ್ಲಿ ಸಭೆ ನಡೆಸಿ, ಸ್ಪಷ್ಟ ತೀರ್ಮಾನ ಕೈಗೊಂಡು ಸಮುದಾಯದವರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧ್ಯಕ್ಷರಲ್ಲಿ ಬೇಡಿಕೆ ಇಟ್ಟರು.
ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಮಾತನಾಡಿ, ಸರಕಾರದ ವತಿಯಿಂದ ಭೋವಿ ಸಮಾಜದ ಜನರ ಅಭಿವೃದ್ಧಿಗಾಗಿ ಜಾರಿಗೊಳಿಸಲಾದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅರ್ಹರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಉಡುಪಿ ಹಾಗೂ ದಕ್ಷಿಣ ಕನ್ನಡ ಉಭಯ ಜಿಲ್ಲೆಗಳ ಸಮುದಾಯದ ಜನರ ಕುಂದು ಕೊರತೆಗಳು, ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಿದ್ದು, ಅವರ ಸಮಸ್ಯೆಗಳಿಗೆ ಗರಿಷ್ಟ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳೋಣ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಜಿಲ್ಲೆಯಲ್ಲಿ ಭೋವಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ಸಮುದಾಯದ ಜನರಿಂದ ಬೇಡಿಕೆ ಇದ್ದು, ಭವನ ನಿರ್ಮಾಣ ಮಾಡಲು ಮಾನದಂಡಕ್ಕೆ ಅನುಗುಣವಾಗಿ ಸಿ.ಎ ಸೈಟ್‌ಗಳನ್ನು ನೀಡಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರಾ ನಾಯಕ್ ನಿಗಮದಿಂದ ಅನುಷ್ಠಾನಗೊಳಿಸಲಾಗಿರುವ ಯೋಜನೆಗಳ ಕುರಿತು ಹಾಗೂ ಭೋವಿ ಸಮುದಾಯದ ಜನರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಸಿದರು.
ಸಭೆಯಲ್ಲಿ ಶಾಸಕ ಯಶ್‌ಪಾಲ್ ಎ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್ ಕಾದ್ರೊಳ್ಳಿ, ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ, ದಕ್ಷಿಣ ಕನ್ನಡ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಹೇಮಲತಾ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ ಮುಲ್ಲಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ತಹಶೀಲ್ದಾರ್ ಗಳು, ಭೋವಿ ಸಮಾಜದ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.
















