ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಇಂದು ಸಿ.ಎ, ಸಿಎಸ್ ಅಥವಾಸಿ.ಎಮ್.ಎ ವ್ಯಾಸಂಗ ಕೈಗೊಂಡು ಸಫಲರಾಗುತ್ತಿದ್ದಾರೆ. ದೇಶದ ಪ್ರಸಕ್ತ ಆರ್ಥಿಕ ಬೆಳವಣಿಗೆಯ ಪ್ರಮಾಣಕ್ಕೆ ಇನ್ನೂ ಹೆಚ್ಚೆಚ್ಚು ಸಿ.ಎ, ಸಿ.ಎಸ್ ಪದವೀಧರರ ಅಗತ್ಯವಿದ್ದು, ವ್ಯಾಪಾರೋದ್ಯಮಗಳನ್ನು ನಡೆಸಲು ಬೇಕಾದ ಕೌಶಲ್ಯವನ್ನೂ ಇಂಥ ತರಬೇತಿಗಳಿಂದ ಸಿದ್ಧಿಸುವುದನ್ನು ಈಗಿನ ವಾಣಿಜ್ಯ ಪ್ರಪಂಚದಲ್ಲಿ ಕಾಣುತ್ತಿದ್ದೇವೆ ಎಂದು ಉಡುಪಿಯ ವೀ ರೀಚ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎಸ್. ಸಂತೋಷ್ ಪ್ರಭು ಹೇಳಿದರು.
ಅವರು ಇಲ್ಲಿನ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿ ರೀಚ್ ಅಕಾಡೆಮಿಯ ಆಡಳಿತಾಧಿಕಾರಿ ನಾಗೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ ಅವರು ಧನ್ಯವಾದ ಸಲ್ಲಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.












