ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಇದರ ವತಿಯಿಂದ 52ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ 10 ದಿನಗಳ ಕಾಲ ನಡೆದು, ಗುರುವಾರ ರಾತ್ರಿ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.
ಶ್ರೀ ಶಾರದಾ ಮಂಟಪದ ಬಳಿಯಿಂದ ಆರಂಭಗೊಂಡ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಮುಖ್ಯ ರಸ್ತೆಯಲ್ಲಿ ಮೇಲ್ಗಂಗೊಳ್ಳಿಯ ಬಾವಿಕಟ್ಟೆ ತನಕ ಸಾಗಿ ಬಂದರಿನ ಪೋರ್ಟ್ ಆಫೀಸಿನ ಬಳಿ ಸಮಾಪನಗೊಂಡಿತು. ಬಳಿಕ ಶ್ರೀ ದೇವಿಯ ವಿಗ್ರಹವನ್ನು ಪಂಚಗಂಗಾವಳಿ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು. ಹುಲಿ ವೇಷ, ವಿವಿಧ ಟ್ಯಾಬ್ಲೋಗಳು, ಛದ್ಮ ವೇಷಗಳು ಮೆರವಣಿಗೆಗೆ ಮತ್ತು ಮೆರುಗು ತಂದಿತ್ತವು. ಈ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ನಗರದಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಸೇರಿದ್ದರು.
ಈ ಸಂದರ್ಭದಲ್ಲಿ ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ, ಸಮಿತಿಯ ಅಧ್ಯಕ್ಷ ಶೇಖರ ಜಿ., ಪ್ರಧಾನ ಕಾರ್ಯದರ್ಶಿ ಪ್ರಶಾಂತ ಎಸ್ಆರ್ಜಿ, ಕಾರ್ಯದರ್ಶಿ ಎಂ. ಸಂದೀಪ ಖಾರ್ವಿ, ಮಹಿಳಾ ಮಂಡಳಿ ಅಧ್ಯಕ್ಷೆ ರೇಣುಕಾ ವಾಸುದೇವ ಶೇರುಗಾರ್, ಆಡಳಿತ ಮಂಡಳಿ ಪದಾಧಿಕಾರಿಗಳು, ಮಹಿಳಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಭಜಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.












