ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣ ಎನ್ನುವುದು ಶೈಕ್ಷಣಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬುದ್ಧಿಮತ್ತೆಯನ್ನು ಕಲಿಸುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಕೆ. ಗೋಪಾಲ್ ಹೇಳಿದರು.
ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಕಲಾ ವಿಭಾಗ ಆಯೋಜಿಸಿದ್ದ “ಆದ್ಯತಾ” ಕಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎನ್ನುವುದು ಕೇವಲ ಕಲಿಯುವಿಕೆ ಅಥವಾ ಅಂಕಗಳಿಗೆ ಸೀಮಿತವಾಗಿರಬಾರದು. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕವಾಗಿ ಕ್ರಿಯಾಶೀಲತೆ ಸೃಜನಶೀಲತೆ ಮತ್ತು ಉತ್ತಮ ಅಂಕಗಳನ್ನು ಪಡೆಯುವುದು, ಭಾವನಾತ್ಮಕವಾಗಿ ಆತ್ಮಸ್ಥೈರ್ಯ, ದೃಢ ಮನೋಭಾವ, ನಾಯಕತ್ವದ ಗುಣಗಳನ್ನು ಮತ್ತು ಸಾಮಾಜಿಕವಾಗಿ ಹೊಂದಾಣಿಕೆ, ಕಾರ್ಯಗಳನ್ನು ಸುಸಂಬದ್ಧ ರೀತಿಯಲ್ಲಿ ಮಾಡುವ ಮತ್ತು ನಿಭಾಯಿಸುವ ಪರಿಯನ್ನು ಪರಿಣಾಮಕಾರಿಯಾಗಿ ತಿಳಿಸಬೇಕು ಈ ಮೂರು ಅಂಶಗಳ ಸಮ್ಮಿಲನ ಈ ಕಾರ್ಯಕ್ರಮದಲ್ಲಿ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಮಾತನಾಡಿ ಕಲಾ ವಿಭಾಗದ ವಿದ್ಯಾರ್ಥಿಗಳು ಎಲ್ವಲಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಕಾಲೇಜಿನ ಇತಿಹಾಸದ ಪುಟಗಳನ್ನು ತೆರೆದರೆ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಾಲಿನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ಮಂಚೂಣಿಯಲ್ಲಿ ಇದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್, ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ, ಕಲಾ ವಿಭಾಗದ ಸಂಯೋಜಕರಾದ ಸ್ನೇಹ ಎಸ್. ಕಚೇರಿ ಅಧೀಕ್ಷಕರಾದ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ. ಗೋಪಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾ ಉತ್ಸವದ ಪ್ರಯುಕ್ತ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಅನಘಾ ಕಾರ್ಯಕ್ರಮ ನಿರೂಪಿಸಿ, ಸಂಜನಾ ಸ್ವಾಗತಿಸಿ ಸುಶ್ಮಿತಾ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

















