ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವವಿನಾಯಕ ನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪಿ.ಯು ಕಾಲೇಜಿನಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೆಸ್ಕುತ್ತೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅಬ್ದುಲ್ ರವೂಫ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಇದ್ದು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು. ಕ್ರೀಡೆಯಲ್ಲಿ ಕಲೆ ಮತ್ತು ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಅಂಶಗಳು ಒಳಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಕ್ರೀಡೋತ್ಸವದಂದು ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ವಿವಿಧ ಆಟೋಟ ಹಾಗೂ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅತ್ಯುನ್ನತ ಅಂಕಗಳನ್ನು ಗಳಿಸಿ ಯಮುನಾ ತಂಡದ ವಿದ್ಯಾರ್ಥಿಗಳು 2026-27ನೇ ಸಾಲಿನ ಚಾಂಪಿಯನ್ ತಂಡವಾಗಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಗಂಗಾ ತಂಡದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿ ರನ್ನರ್ ಅಪ್ ಟ್ರೋಪಿಯನ್ನು ಪಡೆದರು.
ಕಾರ್ಯಕ್ರಮದಲ್ಲಿ ಡ್ರಿಲ್, ಯೋಗ, ಲೇಜಿಮ್, ಡಂಬಲ್ಸ್, ಹೂಪ್ಸ್, ಕರಾಟೆ, ಪಿರಾಮಿಡ್ ಮೊದಲಾದ ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿ.ಇ.ಒ ವಿವಿರಾಜ್ ಹೆಗ್ಡೆ, ಸಂಸ್ಥೆಯ ಪ್ರಾಂಶುಪಾಲರಾದ ಸಂದೀಪ್ ಪುತ್ರನ್, ಆಡಳಿತಾಧಿಕಾರಿ ಹರೀಶ್ ಮರವಂತೆ, ಶಿಕ್ಷಕವೃಂದ, ಪೋಷಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಣೀತ ಸ್ವಾಗತಿಸಿ, ವರ್ಷ ಅತಿಥಿ ಪರಿಚಯಿಸಿ, ಡಿ. ಸಾನ್ವಿ ನಿರೂಪಣೆ ಮಾಡಿ, ಮನೀಶ್ ವಂದಿಸಿದರು.

















