ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸ್ನೇಹಿತನ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ ಹಣದ ಬೇಡಿಕೆಯ ಸಂದೇಶ ಕಳುಹಿಸಿದ ಸೈಬರ್ ವಂಚಕರು, ವ್ಯಕ್ತಿಯೊಬ್ಬರಿಂದ 52,000 ರೂ. ಹಣವನ್ನು ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ಕೋಟದ ದಯಾನಂದ (64) ಅವರಿಗೆ ತೆಕ್ಕಟ್ಟೆಯ ಅನಂತ ಎಂಬುವವರು ಸ್ನೇಹಿತರಾಗಿದ್ದರು. ಸೆಪ್ಟೆಂಬರ್ 22ರಂದು ಅನಂತ ಅವರ ಹೆಸರಿನ ವಾಟ್ಸಾಪ್ ಖಾತೆಯಿಂದ ದಯಾನಂದ ಅವರಿಗೆ ಸಂದೇಶವೊಂದು ಬಂದಿತ್ತು. ತುರ್ತಾಗಿ ಹಣದ ಅಗತ್ಯವಿದ್ದು ಕಳುಹಿಸಿರುವ ಕ್ಯೂಆರ್ ಕೋಡ್ಗೆ 52,000 ರೂ. ವರ್ಗಾಯಿಸುವಂತೆ ಅದರಲ್ಲಿ ಮನವಿ ಮಾಡಲಾಗಿತ್ತು.
ಸ್ನೇಹಿತನೇ ಹಣ ಕೇಳಿದ್ದಾರೆಂದು ನಂಬಿದ ದಯಾನಂದ ಅವರು, ಯಾವುದೇ ಅನುಮಾನವಿಲ್ಲದೆ ತಮ್ಮ ಬ್ಯಾಂಕ್ ಖಾತೆಯಿಂದ ಕ್ಯೂಆರ್ ಕೋಡ್ ಮೂಲಕ 52,000 ರೂ. ಹಣವನ್ನು ವರ್ಗಾಯಿಸಿದ್ದರು. ಬಳಿಕ ಅನಂತ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ, ಅವರ ಮೊಬೈಲ್ ಹ್ಯಾಕ್ ಆಗಿರುವುದು ತಿಳಿದು ಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















