ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಭಾ ಕಾರಂಜಿ ಎಂಬುದು ಒಂದು ವಿಶಿಷ್ಟವಾದ, ಗುಣಾತ್ಮಕವಾದ ಹಾಗೂ ಸೃಜನಾತ್ಮಕ ಕಾರ್ಯಕ್ರಮ. ವಿದ್ಯಾರ್ಥಿಗಳು ಇದನ್ನು ಸ್ಪರ್ಧೆ ಎಂದು ಪರಿಗಣಿಸದೆ ಒಂದು ಹಬ್ಬದ ರೀತಿಯಲ್ಲಿ ಇದರಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಸ್ಪರ್ಧಾ ಮನೋಭಾವ, ಆತ್ಮವಿಶ್ವಾಸ, ಸಮಯಪ್ರಜ್ಞೆ, ನಾಯಕತ್ವ ಗುಣ ಹಾಗೂ ಪರಸ್ಪರ ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಭೆಗೆ ಅವಕಾಶ, ಪ್ರೋತ್ಸಾಹ ದೊರೆಯುತ್ತದೆ. ಆದರೆ ನಿರಂತರ ಪ್ರಯತ್ನ ಮಾಡುತ್ತಿರಬೇಕು ಎಂದು ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯ ಹಾಗೂ ಎಂ.ಭಾಸ್ಕರ ಪೈ ಸರಕಾರಿ ಪ್ರೌಢಶಾಲೆ ಗುಜ್ಜಾಡಿ ಇವರ ಸಹಯೋಗದೊಂದಿಗೆ ಗುಜ್ಜಾಡಿಯ ಎಂ.ಭಾಸ್ಕರ ಪೈ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಹೆಮ್ಮಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪ್ರದೀಪ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಗುಜ್ಜಾಡಿ ಗ್ರಾಪಂ ಮಾಜಿ ಸದಸ್ಯ ಹರೀಶ ಮೇಸ್ತ, ಕೊಡಪಾಡಿ ಶ್ರೀ ಗುಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜು ಮೆಂಡನ್, ನಿವೃತ್ತ ಮುಖ್ಯೋಪಾಧ್ಯಾಯ ಜಿ.ಮಹಮ್ಮದ್ ರಫೀಕ್, ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಸದಾನಂದ ಮೊವಾಡಿ, ಜಗದೀಶ ಆಚಾರ್ಯ, ಗಣೇಶ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ಉದಯ ಗಾಂವಕರ್ ಸ್ವಾಗತಿಸಿ, ಪ್ರತಿಭಾ ಕಾರಂಜಿಯ ನೊಡೇಲ್ ಅಧಿಕಾರಿ ಸತ್ಯನಾ ಕೊಡೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕ ವಾಸುದೇವ ಕಾರ್ಯಕ್ರಮ ನಿರ್ವಹಿಸಿದರು. ಸಿಆರ್ಪಿ ಯಶೋಧಾ ವಂದಿಸಿದರು.

















