ಆರೋಪ ಮಾಡಲು ಹೋಗಿ ಪೇಚಿಗೆ ಸಿಲುಕಿದ ರಾಜಕೀಯ ನಾಯಕರು.
ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಮಹಿಳೆಯರೇ ನೀವು ಸೀರೆ ಕೊಳ್ಳಲು ಹೋಗುತ್ತಿದ್ದೀರಾ? ಸ್ವಲ್ಪ ಹುಷಾರಾಗಿ ಕೊಂಡು ಬನ್ನಿ. ಯಾಕಂದ್ರೆ ಬೈಂದೂರಿನಲ್ಲಿ ಸೀರೆ ಕೊಂಡರೂ ಅದೂ ರಾಜಕೀಯ ಪಕ್ಷದವರೇ ಕೊಟ್ಟದ್ದು ಎಂದು ಆರೋಪಿಸುವ ಕೀಳು ರಾಜಕೀಯ ಶುರುವಾಗಿದೆ!
ಹೌದು. ಇಂತದ್ದೊಂದು ಪ್ರಕರಣವೂ ನಡೆದು ಹೋಗಿದೆ. ನವೋದಯ ಸ್ವಸಹಾಯ ಗುಂಪಿನ ಮಹಿಳೆಯರಿಗೆ ವಿತರಿಸಲು ಸಂಘದ ಬ್ಯಾಂಕಿನಲ್ಲಿಟ್ಟಿದ್ದ ಸೀರೆಯನ್ನು ವೋಟು ಕೇಳಲು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಚುನಾವಣೆಯ ಸಂದರ್ಭದಲ್ಲಿ ಅನಗತ್ಯ ರಾಜಕೀಯ ಮಾಡಲು ಹೋರಟ ಪ್ರಕರಣ ಬೈಂದೂರಿನ ಇತಿಹಾಸದಲ್ಲೊಂದು ಕಪ್ಪು ಚುಕ್ಕೆಯೆಸಿಕೊಂಡಿದೆ. (ಕುಂದಾಪ್ರ ಡಾಟ್ ಕಾಂ ವರದಿ)
[quote font_size=”16″ bgcolor=”#ffffff” bcolor=”#dd9933″ arrow=”yes” align=”right”]ನನಗೆ ಸಂಬಂಧವಿಲ್ಲ. ಆಣೆಗೆ ಸಿದ್ಧ: ರಾಜು ಪೂಜಾರಿ
ಬೈಂದೂರಿನ ಎಸ್‌ಸಿಡಿಸಿಸಿ ಬ್ಯಾಂಕಿನ ಶಾಖೆಯಲ್ಲಿ ಸಂಗ್ರಹಿಸಲಾದ ಸೀರೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ. ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರು ಇಂತಹ ಆರೋಪಗಳನ್ನು ಮಾಡಿ ಕೀಳು ಮಟ್ಟದ ರಾಜಕೀಯಕ್ಕಿಳಿದಿದ್ದಾರೆ. ವ್ಯಥಾ ನನ್ನ ಮೇಲೆ ಆರೋಪಿಸುವ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಅವರ ಬೇಕಿದ್ದರೆ ಕೊಲ್ಲೂರಿನ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಹೇಳಲಿ. ನಾನು ಕೂಡ ಸೀರೆ ವಿಚಾರಕ್ಕೂ ನನಗೂ ಸಂಬಂಧವಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ಆಗಲಾದರೂ ಸತ್ಯ ತಿಳಿಯಲಿದೆ
– ರಾಜು ಪೂಜಾರಿ, ಬೈಂದೂರು ಜಿಪಂ ಕಾಂಗ್ರಸ್ ಅಭ್ಯರ್ಥಿ[/quote]
ಏನಿದು ಘಟನೆ:
ಬೈಂದೂರಿನ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನವೂದಯ ಸ್ವಸಹಾಯ ಗುಂಪಿ ಮಹಿಳೆಯರಿಗೆ ವಿತರಿಸಲು ಸಮವಸ್ತ್ರವನ್ನು(ಸೀರೆ) ಸಂಗ್ರಹಿಸಿಡಲಾಗಿತ್ತು. ಇದು ಬ್ಯಾಂಕಿನ ಸಿಸಿ ಕ್ಯಾಮರಾಗಳಿಗೆ ತಡೆಯುಂಟುಮಾಡುತ್ತಿದ್ದರಿಂದ ಸೀರೆ ಬಂಡಲ್‌ಗಳನ್ನು ಬ್ಯಾಂಕಿನ ಪಕ್ಕದ ಖಾಸಕಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೆಲವರು ದೂರು ನೀಡಿದ್ದರು. ಏಕಾಏಕಿ ರಾತ್ರಿವೇಳೆ ಗೋದಾಮಿಗೆ ಮುತ್ತಿಗೆ ಹಾಕಿದ ಬೈಂದೂರು ರಾಜಕೀಯ ನಾಯಕರು ಸೀರೆಗಳನ್ನು ಚುನಾವಣೆಗೆ ಹಂಚುವ ಸಲುವಾಗಿ ಇಟ್ಟುಕೊಂಡಿದ್ದಾರೆ ಎಂದು ಆರೋಪ ಮಾಡಲು ಶುರುವಿಟ್ಟುಕೊಂಡರು. ಕೂಡಲೇ ಸೀರೆಗಳನ್ನು ಜಪ್ತಿ ಮಾಡಬೇಕು ಎಂದು ಆಗ್ರಹಿಸಿದ್ದರಿಂದ ಮರುದಿನ ಚುನಾವಣಾ ಸೆಕ್ಟರ್ ಅಧಿಕಾರಿಗಳು ಬೆಳಿಗ್ಗೆ 7,540 ಸೀರೆಗಳನ್ನು ಜಪ್ತಿ ಮಾಡಿ ಆಯೋಗಕ್ಕೆ ವರದಿ ನೀಡಿದ್ದಾರೆ. ಇಷ್ಟಕ್ಕೆ ನಿಲ್ಲದೆ ಹಿಂದೆ ಮುಂದೆ ನೋಡದೇ ರಾಜಕೀಯ ನಾಯಕರು ಸಾಮಾಜಿಕ ತಾಣಗಳಲ್ಲಿ ಆರೋಪ ಮಾಡಲು ಶುರುವಿಟ್ಟುಕೊಂಡು ಬೈಂದೂರಿನ ಕಾಂಗ್ರೆಸ್ ಅಭ್ಯರ್ಥಿಯ ತೇಜೋವಧೆ ಮಾಡಲು ನಿಂತರು. (ಕುಂದಾಪ್ರ ಡಾಟ್ ಕಾಂ ವರದಿ)
ಸೋಲಿನ ಹತಾಷೆಯಲ್ಲಿರುವ ಕಾಂಗ್ರಸಿಗರು ಸೀರೆ ಹಣ ಹಂಚುವ ಕೆಲಸಕ್ಕೆ ಮುಂದಾಗಿದ್ದಾರೆ. ಇದೇ ಕಾರಣದಿಂದ ನವೋದಯ ಸೀರೆಗಳನ್ನು ಸಂಗ್ರಹಿಸಿದ್ದು, ಬಿಜೆಪಿ ಕಾರ್ಯಕರ್ತರು ಇದನ್ನು ತಡೆಹಿಡಿದಿದ್ದಾರೆ ಎಂದು ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಆರೋಪಿಸಿದ್ದಾರೆ.
ವಾಸ್ತವವಾಗಿ ಸೀರೆಗಳು ಅಲ್ಲೇಕಿತ್ತು?
ಖಾಸಗಿ ಕಟ್ಟಡದಲ್ಲಿ ನವೋದಯ ಸೀರೆಗಳಿರುವುದಕ್ಕೆ ಬಿಲ್ ಹಾಗೂ ಇನ್ನಿತರ ದಾಖಲೆಗಳೊಂದಿಗೆ ಸ್ಟಷ್ಠೀಕರಣ ನೀಡಿರುವ ಬೈಂದೂರು ಎಸ್‌ಸಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರು, ಶೀಘ್ರದಲ್ಲಿ ಭಟ್ಕಳದಲ್ಲಿ ಬ್ಯಾಂಕಿನ ನೂತನ ಶಾಖೆ ಆರಂಭಗೊಳ್ಳಲಿರುವುದರಿಂದ, ನವೋದಯ ಸ್ವಸಹಾಯ ಗುಂಪಿನ ಮಹಿಳೆಯರಿಗೆ ವಿತರಿಸಲು ಕಳೆದ ನಾಲ್ಕು ತಿಂಗಳ ಹಿಂದೆ ಈ ಸಮವಸ್ತ್ರವನ್ನು ಇಲ್ಲಿ ಶೇಖರಿಸಲಾಗಿತ್ತು. ಕಛೇರಿಯ ಭದ್ರತಾ ಕೊಠಡಿಯ ಸಿಸಿ ಕ್ಯಾಮಾರಕ್ಕೆ ಸೀರೆ ಬಂಡಲ್ ಅಡ್ಡ ಇದ್ದುದರಿಂದ ಪಕ್ಕದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)
ಒಟ್ಟಿನಲ್ಲಿ ಸೀರೆ ವಿಚಾರ ಚುನಾವಣೆಯ ಸಮಯದಲ್ಲಿ ಆರೋಪ-ಪ್ರತ್ಯಾರೋಪಗಳ ಹೊರತಾಗಿ ಕೀಳು ಮಟ್ಟದ ರಾಜಕೀಯಕ್ಕಿಳಿರುವುದು ಸಕಾರಾತ್ಮಕ ಬೆಳವಣಿಗೆಯಲ್ಲ ಎಂಬ ಮಾತುಗಳ ರಾಜಕೀಯದ ಪಡೆಸಾಲೆಯಿಂದ ಕೇಳಿಬರುತ್ತಿದೆ.