ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತಾಲೂಕಿನ ಹಳ್ಳಿಹೊಳೆಯ ದಿನೇಶ್ ಬೋವಿ ಅವರು ʼಪರಿಸರ ಉಳಿಸಿʼ ಎಂಬ ಸಂದೇಶದೊಂದಿಗೆ ಸತತ 11 ತಿಂಗಳ ಕಾಲ ಉಡುಪಿಯಿಂದ ಲಡಾಕ್ ತನಕ 3,300 ಕಿಮೀ ಯಾತ್ರೆಯನ್ನು ಸೈಕಲ್‌ನಲ್ಲಿ ಪ್ರಯಾಣಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
2024ರ ಅ.15ರಂದು ಉಡುಪಿಯಿಂದ ಸೈಕಲ್ ಮೂಲಕ ಲಡಾಖ್ ಗೆ ಪ್ರಯಾಣ ಬೆಳೆಸಿದ್ದ ದಿನೇಶ್, 2025ರ ಸೆ.15ರಂದು ಲಡಾಖ್ ತಲುಪಿ ಸತತ 330 ದಿನಗಳ ಸೈಕಲ್ ಯಾತ್ರೆಯನ್ನು ಸಂಪೂರ್ಣಗೊಳಿಸಿದ್ದಾರೆ. ಕರ್ನಾಟಕದಿಂದ ಆರಂಭಗೊಂಡ ಸೈಕಲ್ ಪ್ರಯಾಣ ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ ಮೂಲಕವಾಗಿ ಜಮು ಕಾಶ್ಮೀರ ತಲುಪಿದ್ದು 8 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಲಡಾಕ್‌ಗೆ 11 ತಿಂಗಳಿಗಿಂತ ಬೇಗ ತಲುಪ ಬಹುದಾಗಿದ್ದರೂ, ಕಾಶ್ಮೀರದ ಥಾಂಗ್ ಗ್ರಾಮದ ರಸ್ತೆ ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿರುತ್ತದೆ. ಹಾಗಾಗಿ 1 ತಿಂಗಳು ಮುಂಬೈಯಲ್ಲಿ ವಿಶ್ರಾಂತಿ ಮಾಡಿದ್ದರೆ, 3 ತಿಂಗಳು ಗುಜರಾತಿನಲ್ಲಿ ತಂಗಿದ್ದರು. 11 ತಿಂಗಳ ಸೈಕಲ್ ಪ್ರಯಾಣದಲ್ಲಿ ಒಟ್ಟು ಸುಮಾರು 1.5 ಲಕ್ಷ ರೂ. ವೆಚ್ಚವಾಗಿದೆ.

ಪ್ರಾಂಶುಪಾಲರ ಪ್ರೋತ್ಸಾಹ:
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ದಿನೇಶ್ ಅವರ ಸೈಕಲಿಂಗ್ ಆಸಕ್ತಿಯನ್ನು ಪ್ರಾಂಶುಪಾಲರಾದ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ಅವರು ಪ್ರೋತ್ಸಾಹಿಸಿದ್ದರು. ದಿನೇಶ್ ಲಡಾಕ್ ಯಾತ್ರೆ ಕೈಗೊಂಡಾಗ ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಭರಿಸಿದ್ದಾರೆ ಪ್ರಯಾಣ ವೆಚ್ಚ ಭರಿಸಲು ಅವರು ಸಹಕರಿಸಿದ್ದರು. ಸ್ವತಃ ಸೈಕಲಿಸ್ಟ್ ಆಗಿರುವ ವಿನ್ಸೆಂಟ್ ಆಳ್ವಾ ಸೈಕಲ್ ಸಹ ಕೊಡುಗೆಯಾಗಿ ನೀಡಿ, ತನ್ನ ವಿದ್ಯಾರ್ಥಿಗೆ ಪ್ರೋತ್ಸಾಹಿಸಿದ್ದಾರೆ. ಅಪ್ರತಿಮ ಸಾಧನೆ ತೋರಿ ಊರಿಗೆ ಮರಳಿದಾಗ ದಿನೇಶ್ ಅವರಿಗೆ ಕಾಲೇಜಿನ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ದಿನೇಶ್ ಬೋವಿ ಅವರು ಹಳ್ಳಿಹೊಳೆಯ ಪಾರ್ವತಿ ಮತ್ತು ಶೇಷು ಬೋವಿ ದಂಪತಿಯ ಪುತ್ರರಾಗಿದ್ದಾರೆ.
ಪ್ರಯಾಣಕ್ಕೆ ಸಾಥ್ ನೀಡಿದ ಚಾರ್ಲಿ:
ಸೈಕಲ್ ಯಾತ್ರೆಯ ಸಂದರ್ಭ ಕರ್ನಾಟಕ – ಗೋವಾ ಗಡಿಭಾಗದಲ್ಲಿ ತಂಗಿದ್ದಾಗ ಬೀದಿ ಬದಿಯಲ್ಲಿದ್ದ ಹೆಣ್ಣು ನಾಯಿ ಮರಿಯೊಂದು ದಿನೇಶ್ ಅವರಿಗೆ ದೊರಕಿತ್ತು. ಅದನ್ನು ಜೊತೆಯಲ್ಲಿ ಕರೆದುಕೊಂಡು ಲಡಾಕ್‌ಗೆ ಸೈಕಲಿನಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ. ಅವರ ಜೊತೆ ನಾಯಿ ಕೂಡ 326 ದಿನಗಳ ಕಾಲ ಸಂಚಾರ ಮುಗಿಸಿದೆ. ಅಲ್ಲಿಂದ ಆ ನಾಯಿಯೊಂದಿಗೆ ಅವರು ಊರಿಗೆ ವಾಪಾಸಾಗಿದ್ದು ಮನೆಗೆ ಕೊಂಡೊಯ್ದಿದ್ದಾರೆ.
ಸೈಕಲ್ ಪ್ರಯಾಣದ ಅನುಭವ:
ದಿನೇಶ್ ಈ ಹಿಂದೆ ಉಡುಪಿ ಯಿಂದ ಧರ್ಮಸ್ಥಳ ಕಾಲ್ನಡಿಗೆ ಮಾಡಿದ್ದರು. ಅದಾದ ಬಳಿಕ ಉಡುಪಿಯಿಂದ ಕನ್ಯಾಕುಮಾರಿಗೆ 1.500 ಕಿ.ಮೀ. ದೂರವನ್ನು 21 ದಿನಗಳಲ್ಲಿ ಸೈಕಲ್ ಮೂಲಕ ತೆರಳಿದ್ದರು. ಆ ಬಳಿಕ ಉಡುಪಿಯಿಂದ ಲಡಾಕ್ ತನಕ 3,300 ಕಿಮೀ ಯಾತ್ರೆಯನ್ನು ಸೈಕಲ್‌ನಲ್ಲಿ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಸಿಕ್ಕವರಿಗೆ ಪರಿಸರ ಉಳಿಸಿ ಅನ್ನುವ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಸಫಲವಾಗಿಸಿಕೊಂಡಿದ್ದಾರೆ. ಅವರ ಈ ಪ್ರಯತ್ನಕ್ಕೆ ಮನೆಯವರು, ಕಾಲೇಜಿನವರ ಸಹಕಾರದಿಂದ ದೊಡ್ಡದಿದೆ ಎಂದು ದಿನೇಶ್ ಹೇಳಿತ್ತಾರೆ.















