ಅವುಗಳಿಗೂ ಬದುಕುವ ಆಸೆ -ಹಕ್ಕು ಇದೆ ಅಲ್ಲವಾ!

Call us

Call us

Call us

ನರೇಂದ್ರ ಎಸ್. ಗಂಗೊಳ್ಳಿ.
ಹೆಚ್‌ಒನ್.ಎನ್‌ಒನ್, ಎಬೋಲಾ,ಝಿಕಾ….. ಹೌದು ಮನುಷ್ಯ ಜಗತ್ತು ಬೆಳೆಯುತ್ತಿದ್ದ ಹಾಗೆ ಒಂದೊಂದು ಹೊಸ ಹೊಸ ಕಾಯಿಲೆಗಳು ಪ್ರತೀ ವರುಷ ಹುಟ್ಟಿಕೊಳ್ಳುತ್ತಿದೆಯೇನೋ ಅನ್ನುವ ಹಾಗೆ ಹೊಸಹೊಸ ಕಾಯಿಲೆಗಳು ಹುಟ್ಟತೊಡಗಿವೆ. ವೈದ್ಯ ವಿಜ್ಞಾನಿಗಳು ಅದಕ್ಕೆಲ್ಲಾ ಸವಾಲೊಡ್ಡುವಂತೆ ನಿತ್ಯನಿರಂತರವಾಗಿ ಹೊಸ ಹಳೇ ಕಾಯಿಲೆಗಳಿಗೆ ಪರಿಹಾರ ಕಾಣಿಸುವ ಪ್ರಯೋಗಗಳಲ್ಲಿ ತಲ್ಲೀನರಾಗಿರುತ್ತಾರೆ. ಅಂತೂ ಕೊನೆಗೂ ಸಹಸ್ರಾರು ಪ್ರಯೋಗಗಳ ಬಳಿಕ ಬಹಳಷ್ಟು ಸಲ ಯಶಸ್ಸನ್ನು ಕಾಣಲಾಗುತ್ತದೆ. ಓದಿ ನಮಗೂ ಸಂತೋಷವಾಗುತ್ತದೆ. ಆದರೆ ಆ ಸಂತೋಷದ ಹಿಂದೆ ಅದೆಷ್ಟು ಕೋಟ್ಯಂತರ ಜೀವಿಗಳ ಮಾರಣ ಹೋಮವಾಗಿದೆ ಅನ್ನುವುದರ ಅರಿವು ನಮಗಿರಬೇಕಿದೆ. ಯಾಕೆಂದರೆ ನಾವು ಮನುಷ್ಯರು ಮಾನವರು ಮಾನವೀಯತೆ ಉಳ್ಳವರು ಎಂದೆಲ್ಲಾ ಗುರುತಿಸಿಕೊಂಡವರು. ಬೇರೆ ಜೀವಿಗಳ ಹಿಂಸೆಯಲ್ಲಿ ಮರಣದಲ್ಲಿ ನಮ್ಮ ಬದುಕಿನ ಸಂತೋಷಗಳನ್ನು ನಾವು ಹುಡುಕುವುದೆಷ್ಟರ ಮಟ್ಟಿಗೆ ಸರಿ? ವಿಷಯಕ್ಕೆ ಬರುತ್ತೀನಿ.

Call us

Click Here

ನಿಜ. ಇವತ್ತು ನಮ್ಮಲ್ಲಿ ಬೇರೆ ಬೇರೆ ರೀತಿಯ ಸಹಸ್ರಾರು ತೆರನಾದ ಖಾಯಿಲೆಗಳಿಗೆ ನಮ್ಮಲ್ಲಿ ಸಹಸ್ರಾರು ರೀತಿಯ ಔಷಧಗಳು ಲಭ್ಯವಿವೆ. ಒಂದು ಮಾಮೂಲಿ ಜ್ವರದ ನಿವಾರಣೆ ಮಾಡಲಿಕ್ಕಾಗಿ ನೂರಾರು ಕಂಪೆನಿಗಳು ತಮ್ಮದೇ ಬ್ರಾಂಡಿನ ವಿವಿಧ ಹೆಸರಿನ ಔಷಧಗಳನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿವೆ. ನಿಮಗೆ ಗೊತ್ತಿರಲಿ ಒಂದು ಔಷಧ ಮಾರುಕಟ್ಟೆಗೆ ಬರಬೇಕಾದರೆ ಅದು ನಿರ್ದಿಷ್ಠ ರೋಗದ ವಿರುದ್ಧ ಖಚಿತ ಪರಿಣಾಮ ಬೀರುತ್ತದೆ ಎಂದು ಪ್ರಯೋಗಗಳಿಂದ ಸಾಬೀತು ಪಟ್ಟಿರಬೇಕು ಮತ್ತು ನಿರ್ದಿಷ್ಠ ಸಂಸ್ಥೆಗಳಿಂದ ಪರವಾನಿಗೆಯನ್ನು ಪಡೆದಿರಬೇಕು. ಪರವಾನಿಗೆಯ ಮಾತು ಬಿಡಿ. ಪ್ರಯೋಗಗಳ ವಿಷಯಕ್ಕೆ ಬರೋಣ. ಯಾವುದೇ ಹೊಸ ಔಷಧಗಳನ್ನು ಸಂಶೋಧನೆ ಮಾಡುವಾಗ ಅದರ ಪರಿಣಾಮವನ್ನು ಖಚಿತಪಡಿಸಿಕೊಳ್ಳಲೋಸುಗ ಇಂದು ಕೋಟ್ಯಂತರ ಪ್ರಾಣಿಗಳ ಬಳಕೆಯನ್ನು ಮಾಡಿಕೊಳ್ಳಲಾಗುತ್ತಿದೆ ಅನ್ನುವುದು ನಿಜಕ್ಕೂ ದುರಂತ. ಆಧುನಿಕ ವಿಜ್ಞಾನ ಇಷ್ಟೊಂದು ಮುಂದುವರಿದ ಬಳಿಕವೂ ಇನ್ನೂ ಅದೇ ಹಳೆಯ ಪದ್ಧತಿಯಲ್ಲಿ ಪ್ರತೀ ಔಷಧಗಳನ್ನು ಪ್ರಾಣಿಗಳ ಮೇಲೆ ವಿವಿಧ ಹಂತಗಳಲ್ಲಿ ಬೇರೆ ಬೇರೆ ತೆರದಲ್ಲಿ ಪ್ರಯೋಗಿಸಿ ಆ ಬಳಿಕ ಅವುಗಳನ್ನು ಮನುಷ್ಯರ ಬಳಿಗೆ ತಂದು ಸಂಭ್ರಮಿಸುವ ಪರಿಪಾಠ ಬೇಸರ ತರಿಸುವಂತಾದ್ದು.

ಇಂದು ಈ ತೆರನಾದ ಔಷಧ ಸಂಶೋಧನೆಯ ಪ್ರಯೋಗಗಳಿಗೆ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಬಳಕೆಯಾಗುತ್ತಿರುವುದು ಇಲಿಗಳು ಮಂಗಗಳು ಹಂದಿಗಳು ಅಳಿಲುಗಳು ನಾಯಿಗಳು ಮೊಲಗಳು ಕುರಿಗಳು ಬೆಕ್ಕಗಳು ಮತ್ತಿತರ ಚಿಕ್ಕಪುಟ್ಟ ಪ್ರಾಣಿಗಳು. ಆ ಸಮಯದಲ್ಲಿ ಅವುಗಳನ್ನು ಬಳಸಿಕೊಳ್ಳುವ ರೀತಿ ಇದೆಯಲ್ಲಾ ಅದು ಮನುಷ್ಯ ಮಾತ್ರರು ಒಪ್ಪುವಂತಹ ಕೃತ್ಯವಲ್ಲ. ಉದ್ಧೇಶ ಪೂರ್ವಕವಾಗಿಯೆ ಅಂತಹ ಚಿಕ್ಕಪುಟ್ಟ ಪ್ರಾಣಿಗಳ ದೇಹಕ್ಕೆ ರೋಗಕಾರಕ ಅಂಶಗಳನ್ನು ಚುಚ್ಚಲಾಗುತ್ತದೆ. ಆ ಬಳಿಕ ಆ ರೋಗವು ಜೀವಿಗಳಲ್ಲಿ ಆವರಿಸುವ ಪ್ರತಿಯೊಂದು ಹಂತವನ್ನು ನೂರಾರು ಬಾರಿ ಅಧ್ಯಯನ ಮಾಡಲಾಗುತ್ತದೆ. ಅವುಗಳ ಮೇಲೆ ಬೇರೆ ಬೇರೆ ರೀತಿಯ ವಿವಿಧ ಪ್ರಮಾಣದ ಔಷಧಗಳನ್ನು ಪ್ರಯೋಗ ಮಾಡಿ ನೋಡಲಾಗುತ್ತದೆ.ಬಹಳ ಸಲ ಎಷ್ಟೊಂದು ಕ್ರೂರವಾಗಿ ಅವುಗಳ ಜೊತೆ ವರ್ತಿಸಲಾಗುತ್ತದೆ ಎಂದರೆ ಅವುಗಳು ಪ್ರಜ್ಞೆಯಲ್ಲಿರುವಾಗಲೇ ಒಂದು ಹನಿ ಅನಸ್ತೇಶಿಯಾವನ್ನು ಕೂಡ ನೀಡದೆ ಅವುಗಳ ದೇಹವನ್ನು ಎಲ್ಲೆಂದರಲ್ಲಿ ಸಿಗಿಯಲಾಗುತ್ತದೆ. ಅವುಗಳು ಜೀವಂತವಿರುವಾಗಲೇ ಹೊರಭಾಗದ ಚರ್ಮವನ್ನು ಸಿಗಿಯಲಾಗುತ್ತದೆ. ಅವುಗಳನ್ನು ಕೊತಕೊತನೆ ಕುದಿಯುತ್ತಿರುವ ನೀರಿನಲ್ಲಿ ಜೀವಂತವಾಗಿ ಮುಳುಗಿಸುವುದು ಉಂಟು. ಎಲ್ಲವೂ ಪ್ರಯೋಗಗಳ ಹೆಸರಿನಲ್ಲಿ. ಅವುಗಳ ಸಹಿಸಲಸಾಧ್ಯ ನೋವಿನ ಆಕ್ರಂದನ ಯಾರೆಂದರೆ ಯಾರ ಕಿವಿಗೂ ಕೇಳಿಸುವುದಿಲ್ಲ. ಪ್ರಯೋಗದ ಹೆಸರಿನಲ್ಲಿ ಅವುಗಳಿಗೆ ವಿಷವನ್ನು ಕೂಡ ನೀಡಲಾಗುತ್ತೆ. ಅದರ ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತೆ.

ಎಷ್ಟೋ ಬಾರಿ ಅವುಗಳು ಪ್ರಯೋಗಕ್ಕೆ ಬಲಿಯಾಗಿ ಶಾಶ್ವತವಾಗಿ ಕುರುಡಾಗುತ್ತವೆ. ಬಲವಂತವಾಗಿ ಚುಚ್ಚಿಸಿಕೊಂಡ ಒಂದು ರೋಗದ ಜೊತೆಗೆ ಹತ್ತಾರು ಇತರ ರೋಗಗಳ ದಾಳಿಗೂ ತುತ್ತಾಗಬೇಕಾಗುತ್ತದೆ. ಅರ್ಧಂಬರ್ಧ ದೇಹಗಳನ್ನು ಸಿಗಿಸಿಕೊಂಡು ಆಹಾರ ನೀರು ಏನೊಂದು ಇಲ್ಲದೆ ಪ್ರಯೋಗಾಲಯದ ಯಾವುದೋ ಮೂಲೆಗಳಲ್ಲಿ ದಿನಗಟ್ಟಲೆ ನರಳಿ ನರಳಿ ಸಾವನ್ನಪ್ಪುತ್ತವೆ.ಹಲವು ಬಾರಿ ಅವುಗಳನ್ನು ಬೇಕೆಂದೇ ಉಪವಾಸ ಇರಿಸಲಾಗುತ್ತದೆ. ಅವುಗಳು ಜೀವಂತವಿರುವಾಗಲೇ ಅವುಗಳ ಜನನೇಂದ್ರಿಯಗಳ ಮೇಲೂ ಅತ್ಯಂತ ಕ್ರೂರವಾಗಿ ವಿವಿಧ ಪ್ರಯೋಗಗಳನ್ನು ನಡೆಸಲಾಗುತ್ತದೆ. ಎಸಿಡ್ ಎರಚುವಿಕೆಯ ಪರಿಣಾಮಗಳನ್ನು ಹೀಗೆ ಅಧ್ಯಯನ ಮಾಡಲಾಗುತ್ತದೆ ಎಂದರೆ ಆ ಮೂಕ ಜೀವಿಗಳು ಎಷ್ಟೊಂದು ಯಮಹಿಂಸೆ ಅನುಭವಿಸುತ್ತಿರಬಹುದು ಯೋಚಿಸಿ ನೋಡಿ.ನಿಮಗೆ ಗೊತ್ತಿರಲಿ ಚಹಾ ಕಾಫಿ ತಂಪುಪಾನೀಯಗಳು ಕುರುಕಲು ತಿಂಡಿಗಳು ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳು ದೇಹದ ಮೇಲೆ ಬೀರುವ ಪರಿಣಾಮವನ್ನು ಸಂಶೋಧನೆ ಮಾಡಲಿಕ್ಕೂ ಈ ಪಾಪದ ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಪ್ರಯೋಗಾಲಯಗಳಲ್ಲಿ ಸಂಶೋಧನೆ ಮತ್ತು ಅಧ್ಯಯನದ ಹೆಸರಿನಲ್ಲಿ ನಡೆಯುವ ಈ ಕೃತ್ಯಗಳು ಮನುಷ್ಯನ ಅನಾಗರಿಕ ಮುಖಕ್ಕೆ ಹಿಡಿದ ಕನ್ನಡಿಯಂತಿವೆ.

ಹೀಗೆ ಪ್ರಯೋಗಾಲಯಗಳಲ್ಲಿ ಸಂಶೋಧನೆಯ ಹೆಸರಿನಲ್ಲಿ ಪ್ರಾಣಿಗಳ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ಮಾಡುವುದನ್ನು ವಿವಿಸೆಕ್ಷನ್ ಎಂದು ಹೆಸರಿಸಲಾಗಿದೆ. ಇದು ಲ್ಯಾಟಿನ್ ಮೂಲದಿಂದ ತೆಗೆದುಕೊಂಡ ಪದ. ಹಾಗೆಂದರೆ ಜೀವಂತ ಕತ್ತರಿಸುವುದು ಎಂದೇ ಅರ್ಥ. ಈ ಪ್ರಯೋಗಗಳು ಕೇವಲ ಸಂಶೋಧನೆಗೆ ಮಾತ್ರ ಮೀಸಲಾಗಿಲ್ಲ. ಸರ್ಜನ್ ಗಳಿಗೆ ಅಪರೇಷನ್ನುಗಳನ್ನು ಕಲಿಯಲಿಕ್ಕೆ ಬಯೋ ಮೆಡಿಕಲ್ ರಿಸರ್ಚ ವಿದ್ಯಾರ್ಥಿಗಳಿಗೆ ಜೀವ ಶಾಸ್ತ್ರವನ್ನು ಅಭ್ಯಸಿಸಲು ಕೂಡ ಈ ರೀತಿಯಲ್ಲಿ ಅಮಾನವೀಯವಾಗಿ ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತೆ. ಹೀಗೆ ಪ್ರಯೋಗಗಳಿಗಾಗಿ ಪ್ರಾಣಿಗಳನ್ನು ಬಳಸಕೊಳ್ಳುತ್ತಿರುವುದು ನವೀನ ವಿಧಾನವೇನೂ ಅಲ್ಲ. ಗ್ರೀಕ್ ಶರೀರ ಶಾಸ್ತ್ರಜ್ಞ ಅರಿಸ್ಟಾಟಲ್‌ನ ಕಾಲದಿಂದಲೇ ಇದು ನಡೆದುಕೊಂಡು ಬಂದಿರುವಂತಾದ್ದು. ಜೀವಶಾಸ್ತ್ರದ ಜನಕ ಕ್ಲಾಡ್ ಬರ್ನಾರ್ಡ್ ಕೂಡ ಇದನ್ನು ಸಮರ್ಥಿಸಿಕೊಳ್ಳುತ್ತಾರೆ. 1937ರಲ್ಲಿ ಅಮೇರಿಕದ ಫಾರ್ಮಾಸ್ಯುಟಿಕಲ್ ಕಂಪೆನಿಯೊಂದು ವಿಷಕಾರಿ ಅಂಶವುಳ್ಳ ಔಷಧವೊಂದನ್ನು ಪ್ರಯೋಗಕ್ಕೆ ಒಳಪಡಿಸದೆ ಮಾರುಕಟ್ಟೆಗೆ ತಂದಿದ್ದರ ಪರಿಣಾಮವಾಗಿ ನೂರಾರು ಜನರ ಪ್ರಾಣಕ್ಕೆ ಎರವಾಯಿತು. ಆಗಿನಿಂದ ವಿವಿಸೆಕ್ಷನ್ ಅಗತ್ಯತೆಗೆ ಮತ್ತಷ್ಟು ಬಲ ಬಂದಿತ್ತು. 1950-60ರಲ್ಲಿ ನಿದ್ರಾಹೀನತೆ ತಲೆನೋವಿಗೆ ಪರಿಹಾರವೆಂದು ಫಿಯಾಸ್ಕೊ ಹೆಸರಿನ ಔಷಧವೊಂದು ಪ್ರಯೋಗಕ್ಕೆ ಒಳಪಡದೆ ಜನ ಸೇವಿಸಿದ್ದರಿಂದಾಗಿ ಸುಮಾರು 46 ದೇಶಗಳ 10000ಕ್ಕು ಅಧಿಕ ಜನರು ತೀವ್ರ ತೊಂದರೆಗೊಳಗಾದರು. ಆ ಮೇಲೆ 1961ರಲ್ಲಿ ಅದನ್ನು ಹಿಂಪಡೆಯಲಾಯಿತು. ಈ ಘಟನೆ ಕೂಡ ವಿವಿಸೆಕ್ಷನ್‌ಗೆ ಬಲ ನೀಡಿತ್ತು. ಅಂಗಶೋಧನ ಶಾಸ್ತ್ರ, ಶರೀರ ಶಾಸ್ತ್ರ ,ರೋಗ ವಿಜ್ಞಾನ, ಔಷಧ ಶಾಸ್ತ್ರ ಎಲ್ಲದರ ಬೆಳವಣಿಗೆಯ ಮೂಲ ವಿವಿಸೆಕ್ಷನ್‌ನಲ್ಲಿದೆ. ಹಾಗಂತ ಇಂದಿನ ಆಧುನಿಕ ಯುಗದಲ್ಲೂ ಈ ತೆರನಾದ ಅಮಾನುಷ ಪ್ರಯೋಗಗಳು ಎಷ್ಟು ಸರಿ ಎನ್ನುವುದು ಪ್ರಶ್ನೆ.

Click here

Click here

Click here

Click Here

Call us

Call us

ಗಾಂಧೀಜಿಯವರು ಅಭಿಪ್ರಾಯಪಡುವಂತೆ ಒಂದು ದೇಶದಲ್ಲಿ ಅಲ್ಲಿನ ಪ್ರಾಣಿ ಸಂಪನ್ಮೂಲವನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದರ ಆಧಾರದ ಮೇಲೆ ಆ ದೇಶದ ಶ್ರೇಷ್ಠತೆ ಮತ್ತು ನೈತಿಕ ಬೆಳವಣಿಗೆಯನ್ನು ನಿರ್ಧರಿಸಬಹುದು. ಅದು ನೂರಕ್ಕೆ ನೂರು ನಿಜ. ಥಿಯೋಡರ್ ರೂಸ್‌ವೆಲ್ಟ್ ಹೇಳುವಂತೆ ಸರಿ ತಪ್ಪುಗಳ ವಿವೇಕವಿಲ್ಲದ ತಿಳುವಳಿಕೆ ಅಪರಾಧಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಈಗ ಆಗಿರುವುದು ಆದೇ ಅನ್ನಿಸುತ್ತದೆ. ನಿಜಕ್ಕೆಂದರೆ ತೀರಾ ಅನಿವಾರ‍್ಯ ಎನ್ನುವಂತೆ ಬಿಂಬಿಸಲಾಗುತ್ತಿರುವ ಈ ಪ್ರಯೋಗಗಳು ಕೆಲವರು ಅಭಿಪ್ರಾಯಪಡುವಷ್ಟು ಅನಿವಾರ‍್ಯ ಅಲ್ಲವೇ ಅಲ್ಲವೆನ್ನುವುದು ತಜ್ಞರ ಮಾತು. ಎಲ್ಲಕ್ಕಿಂತ ಹೆಚ್ಚಾಗಿ ಅವು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಪಡೆಯುವುದಿಲ್ಲ ಅನ್ನೋದು ಸತ್ಯ. ಅಮೇರಿಕದ ಎಫ್‌ಡಿಎ (ಫೆಢರಲ್ ಡ್ರಗ್ ಅಡ್ಮಿನಿಸ್ಟ್ರೇಷನ್ ) ವರದಿ ಹೇಳುವಂತೆ ವಿವಿಸೆಕ್ಷನ್ ಆರಂಭವಾದಾಗಿನಿಂದ ಈವರೆಗೆ ಪ್ರಾಣಿಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾದ ಹತ್ತು ಔಷಧಗಳಲ್ಲಿ ಒಂಬತ್ತು (ಶೇಕಡ ತೊಂಬತ್ತು ) ಔಷಧಗಳು ಮನುಷ್ಯರ ಮೇಲೆ ಪ್ರಯೋಗ ಮಾಡಿದಾಗ ಸಂಪೂರ್ಣವಾಗಿ ವಿಫಲವಾಗಿವೆ.ಅಂದರೆ ನೂರಕ್ಕೆ ತೊಂಬತ್ತರಷ್ಟು ಔಷಧಿಗಳು ವಿಫಲವಾಗಿವೆ. ಅದು ಬಹಿರಂಗ ಸತ್ಯ. ಕಾರಣ ತೀರಾ ಸರಳ ಪ್ರಾಣಿಗಳ ಅಂಗವಿನ್ಯಾಸ ದೇಹರಚನೆ ಮತ್ತತರ ಅಂಶಗಳಿಗೂ ಮಾನವನ ದೇಹಕ್ಕೂ ಬಹಳ ವ್ಯತ್ಯಾಸಗಳಿವೆ. ಒಂದು ಕುರಿಯ ದೇಹದ ಜೀವಕೋಶಗಳು ಒಂದು ನಿರ್ದಿಷ್ಠ ಔಷಧಿಗೆ ಸ್ಪಂದಿಸಿದಂತೆ ಮಾನವನ ದೇಹದ ಜೀವಕೋಶಗಳು ಸ್ಪಂದಿಸಬೇಕಾಗಿಲ್ಲ. ಬೆಕ್ಕಿಗೆ ಕೊಟ್ಟ ಔಷಧ ನಾಯಿಗೆ ಒಗ್ಗಬೇಕಾಗಿಲ್ಲ. ಯಾಕೆಂದರೆ ಪ್ರತಿಯೊಂದು ಜೀವಿಯ ದೇಹರಚನೆ ಬೇರೆ ಬೇರೆ ಆಗಿರುತ್ತದೆ.ಮನುಷ್ಯನೊಬ್ಬ ನಾಯಿಯ ಅಳತೆ ಕೊಟ್ಟು ನನಗೊಂದು ಅಂಗಿ ಹೊಲಿದುಕೊಡಿ ಎಂದು ದರ್ಜಿಯನ್ನು ಕೇಳುವಂತಿದೆ ಈ ಪ್ರಯೋಗಗಳು. ಹಂದಿ ಕೊಳಚೆ ವಸ್ತುಗಳನ್ನು ತಿಂದು ಬದುಕುತ್ತದೆ ಎಂದು ಮನುಷ್ಯನೂ ಅದನ್ನು ತಿಂದರೆ?

ಒಟ್ಟಿನಲ್ಲಿ ಸಂಶೋಧನೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರಯೋಗಗಳನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವರುಷವೊಂದಕ್ಕೆ ವಿಶ್ವದಾದ್ಯಂತ 1000 ಕ್ಕೂ ಅಧಿಕ ಪ್ರಯೋಗಾಲಯಗಳಲ್ಲಿ ಈ ರೀತಿಯ ಅಮಾನುಷ ಬರ್ಬರ ಪ್ರಯೋಗಗಳಿಗೆ ಬಲಿಯಾಗುತ್ತಿರುವ ಪ್ರಾಣಿಗಳ ಸಂಖ್ಯೆ ಲಕ್ಷಗಳನ್ನು ದಾಟುತ್ತವೆ. ನಿಜಕ್ಕೂ ಇದು ಅನಿವಾರ‍್ಯ ಅಲ್ಲವೇ ಅಲ್ಲ. ಪರಿಹಾರದ ಹಲವಾರು ಮಾರ್ಗೋಪಾಯಗಳು ಲಭ್ಯವಿರುವಾಗ ಅವುಗಳನ್ನು ಬಳಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಕಂಪ್ಯೂಟರ್ ಮಾದರಿಗಳು, ಸಿಲಿಕೊ ಮಾಡೆಲ್ ಗಳನ್ನು ಇಲ್ಲಿ ಬಳಸಬಹುದು. ಮನುಷ್ಯನ ಜೀವಕೋಶಗಳನ್ನು ಸ್ನಾಯುಗಳನ್ನು ಬಳಸಿಕೊಂಡು ಔಷಧಗಳ ಪರಿಣಾಮವನ್ನು ತೀವ್ರತೆಯನ್ನು ಪರೀಕ್ಷೆಗೊಳಪಡಿಸಬಹುದು.ಅಮೇರಿಕದ ನ್ಯಾಷನಲ್ ಹೆಲ್ತ್ ಇನಸ್ಟಿಟ್ಯೂಟ್ ನ ಮಾಜಿ ನಿರ್ದೇಶಕ ಡಾ ಇಲಿಯಾಸರವರು ಮನುಷ್ಯರ ಬಳಕೆಗಾಗಿನ ಔಷಧಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ಪರೀಕ್ಷಿಸುವುದರಿಂದ ಖಚಿತ ಫಲಿತಾಂಶ ದೊರೆಯಲಾರದು.ಪ್ರಾಣಿಗಳ ಮೇಲಿನ ಈ ತೆರನಾದ ಪ್ರಯೋಗಗಳ್ನು ನಿಲ್ಲಿಸಬೇಕಿದೆ ಅದಕ್ಕೆ ಬದಲಾಗಿ ಆಧುನಿಕ ವಿಧಾನಗಳನ್ನು ನಾವು ಅಭಿವೃದ್ಧಿಪಡಿಸಬೇಕಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ನಿಜ ಇತ್ತೀಚಿನ ದಿನಗಳಲ್ಲಿ ಈ ಅಮಾನವೀಯ ಪದ್ಧತಿಯ ಬಗೆಗೆ ಒಂದು ಅಂದೋಲನ ರೂಪುಗೊಳ್ಳತೊಡಗಿದೆ. ಪೇಟಾದಂತಹ ಸಂಸ್ಥೆಗಳು ವಿವಿಸೆಕ್ಷನ್ ವಿರುದ್ಧ ಬೃಹತ್ ಹೋರಾಟವನ್ನು ಜಾರಿಯಲ್ಲಿಟ್ಟಿವೆ. ಅಷ್ಟೇ ಅಲ್ಲ ಅನೇಕ ಸಹಸ್ರಾರು ಪ್ರಾಣಿಗಳ ಬಲಿಯನ್ನು ತಪ್ಪಿಸುವುದರಲ್ಲಿ ಯಶಸ್ವಿಯಾಗಿದೆ.ಜಗತ್ತಿನಾದ್ಯಂತ ಪ್ರಾಣಿ ಪ್ರಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನರಲ್ಲಿ ಈ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ. 3ಆರ್ ಅಭಿಯಾನಗಳು ಬೆಳೆಯತೊಡಗಿವೆ. 3ಆರ್ ಎಂದರೆ ರಿಪ್ಲೇಸ್ ಮೆಂಟ್, (ಪ್ರಾಣಿಗಳ ಬದಲಿಗೆ ಕೃತಕ ಮಾಡಲ್‌ಗಳ ಬಳಸುವಿಕೆ) ರಿಡಕ್ಷನ್ ( ಪ್ರಯೋಗಗಳಲ್ಲಿ ಪ್ರಾಣಿಗಳ ಬಳಕೆಯನ್ನು ಮಿತಗೊಳಿಸುವುದು) ರಿಫೈನ್ಮೆಂಟ್ (ಪ್ರಯೋಗಗಳಿಗಾಗಿನ ಪ್ರಾಣಿಗಳ ಬಳಕೆಯಲ್ಲಿ ಸುಧಾರಣೆ ತರುವುದು).ಇದೆಲ್ಲದರ ಫಲವಾಗಿ ಚೀನಾ ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ಪ್ರಯೋಗಕ್ಕಾಗಿ ಪ್ರಾಣಿಗಳ ಆಮದನ್ನು ತಮ್ಮ ಏರ್‌ಲೈನ್ಸ್ ಗಳಲ್ಲಿ ನಿಷೇಧಿಸಿವೆ. ಹಲವಾರು ದೇಶಗಳಲ್ಲಿ ಕಂಪ್ಯೂಟರ್ ಮಾದರಿ ತರಬೇತಿಗಳ ಮೂಲಕ ಜೀವ ವಿಜ್ಞಾನವನ್ನು ಕಲಿಸಲಾಗುತ್ತಿದೆ.

ನಿಜ ನಾವು ಕೂಡ ಈ ನಿಟ್ಟಿನಲ್ಲಿ ಇವರ ಹೋರಾಟವನ್ನು ಬೆಂಬಲಿಸಬೇಕಿದೆ. ನಮ್ಮ ಉಳಿವಿಗಾಗಿ ಇತರ ಕೋಟ್ಯಂತರ ಪ್ರಾಣಿಗಳ ಜೀವನದ ಜೊತೆ ಅಮಾನುಷವಾಗಿ ವರ್ತಿಸುವುದನ್ನು ಮೊದಲು ನಿಲ್ಲಿಸಬೇಕಿದೆ. ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಪ್ರಾಣಿಗಳಿಗೂ ಬದುಕುವ ಆಸೆ ಬದುಕಿನ ಬಗೆಗೆ ಪ್ರೀತಿ ಭಾವನೆ ಎಲ್ಲವೂ ಇರುತ್ತೆ ಅಲ್ಲವಾ! ಅವುಗಳನ್ನು ವಿನಾಕಾರಣ ಹಿಂಸಿಸುವ ಕ್ರೂರವಾಗಿ ಅವುಗಳನ್ನು ನಡೆಸಿಕೊಳ್ಳುವ ಹಕ್ಕನ್ನು ನಮಗೆ ಕೊಟ್ಟವರಾರು?ಪ್ರಯೋಗಗಳ ಹಸರಿನಲ್ಲಿ ಅವುಗಳ ಜೀವದ ಜೊತೆ ಕ್ರೂರವಾಗಿ ವರ್ತಿಸುವುದನ್ನು ಹಿಂಸಿಸುವುದನ್ನು ಸಾಮೂಹಿಕ ಪ್ರಾಣಿಬಲಿಯ ಹೆಸರಿನಲ್ಲಿ ಅವುಗಳಲ್ಲಿ ತೀವ್ರ ಪ್ರಾಣಭೀತಿಯನ್ನು ಹುಟ್ಟಿಸಿ ಅವುಗಳ ಜೊತೆಗಾರರೆದುರೇ ಅವುಗಳ ಕತ್ತನ್ನು ಕತ್ತರಿಸಿ ಕೇಕೆ ಹಾಕಿ ನಗುವ ಸಂತೋಷಿಸುವ ವಿಕೃತ ಭಕ್ತಿಯ ಆಚರಣೆಯನ್ನು ಕೈಬಿಡಬೇಕಿದೆ. ಪ್ರಸ್ತುತ ಪ್ರಾಪಂಚಿಕ ಬದುಕಿನಲ್ಲಿ ಹಿಂಸೆ ಅನಿವಾರ‍್ಯ ಅನ್ನಿಸಬಹುದೇನೋ. ಆದರೆ ಹಾಗಂತ ತೀರಾ ಮಾನವೀಯತೆಯನ್ನೇ ಮರೆಯುವುದು ಎಷ್ಟು ಸರಿ? ನೀವೇ ಹೇಳಿ. ಮನುಷ್ಯತ್ವವೇ ಇಲ್ಲದಿದ್ದವ ಮನುಷ್ಯನಾಗಲು ಹೇಗೆ ಸಾಧ್ಯ?
ನರೇಂದ್ರ ಎಸ್ ಗಂಗೊಳ್ಳಿ.

Leave a Reply