ಬೈಂದೂರು: ವಿದ್ಯಾರ್ಥಿ ದೆಸೆಯನ್ನು ಜೀವನದ ಸುವರ್ಣ ಕಾಲವೆಂದು ಪರಿಗಣಿಸುತ್ತಾರೆ. ಅದು ಅಕ್ಷರಶ: ಹಾಗಾಗಬೇಕಾದರೆ ಅದರ ಪ್ರತಿ ಕ್ಷಣವನ್ನೂ ಅನುಭವಿಸುವ ಮೂಲಕ ವಿದ್ಯಾರ್ಥಿ ತನ್ನ ಬೌದ್ಧಿಕ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಎತ್ತರಿಸಿಕೊಂಡಿರಬೇಕು. ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಸಾಧಿಸುವ ಛಲ ಬೆಳೆಸಿಕೊಂಡಿರಬೇಕು. ಮುಂದಿನ ಬದಲಾವಣೆಗಳನ್ನು ಎದುರಿಸಲು ಸಾಧ್ಯವಾಗುವ ಮನೋಬಲವನ್ನು ಸಂಪಾದಿಸಿಕೊಂಡಿರಬೇಕು ಎಂದು ಬಸ್ರೂರು ಶಾರದಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ರಾಧಾಕೃಷ್ಣ ಶೆಟ್ಟಿ ಹೇಳಿದರು.
ನಾವುಂದದ ರಿಚರ್ಡ್ ಆಲ್ಮೇಡ ಮೆಮೋರಿಯಲ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಸ್ಥಾಪಕರ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಮೇಲ್ಮೆಗಾಗಿ ದುಡಿದವರನ್ನು ಸ್ಮರಿಸುವ, ಗೌರವಿಸುವ ಕ್ರಮ ಇತರರನ್ನು ಆ ಮಾರ್ಗ ಕ್ರಮಿಸಲು ಪ್ರೇರೇಪಿಸುತ್ತದೆ. ಅಂತಹ ಪರಂಪರೆ ಇರುವ ದೇಶ ಉನ್ನತಿಗೇರುತ್ತದೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ ಎಂದು ಅವರು ನುಡಿದರು.
ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್ ಆಲ್ಮೇಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಪ್ರೀತಿ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಎಸ್. ನಾರಾಯಣ ರಾವ್ ಸ್ಥಾಪಕರ ಸಂಸ್ಮರಣೆ ಮಾಡಿದರು. ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸುಮಲತಾ ವಂದಿಸಿದರು. ಸುಚಿತ್ರಾ ಶೆಟ್ಟಿ ಮತ್ತು ಕವಿತಾ ಭಟ್ ನಿರೂಪಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.









