ಘಟನಾ ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ, ಶಾಸಕ ಗೋಪಾಲ ಪೂಜಾರಿ ಭೇಟಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ವ್ಯಕ್ತಿಯೋರ್ವರನ್ನು ಮಾರಕಾಯುಧಗಳಿಂದ ಹೊಡೆದು ಕೊಲೆಗೈದ ಘಟನೆ ವರದಿಯಾಗಿದ್ದು, ಮೃತರನ್ನು ಪಡುವಾಯಿನ ಮನೆ ನಿವಾಸಿ ಮಾಧವ ಪೂಜಾರಿ ಯಾನೆ ಮಾಸ್ತಿ ಪೂಜಾರಿ (೬೨) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ನಾವುಂದದ ಪಡುವಾಯಿನ ಮನೆ ಎಂಬಲ್ಲಿ ಕಳೆದ ಮೂರು ವರ್ಷಗಳಿಂದ ನೆಲೆಸಿದ್ದ ಮಾಧವ ಪೂಜಾರಿ ಅವರು ಮಗಳೊಂದಿಗೆ ಮುಂಬೈ ತೆರಳುವ ಆಕೆಯನ್ನು ಸಲುವಾಗಿ ನಾವುಂದದ ಮನೆಗೆ ಬರಲು ತಿಳಿಸಿದ್ದರು. ಶನಿವಾರ ಬೆಳಿಗ್ಗೆ ಸುಮಾರು ೫:೩೦ರ ಹೊತ್ತಿಗೆ ಮೈಸೂರಿನಿಂದ ಮಗಳು, ಅಳಿಯ ಹಾಗೂ ಮೊಮ್ಮೊಗ ಆಗಮಿಸಿದಾಗ ಮನೆಯ ಬೀಗ ಹಾಕಲಾಗಿತ್ತು. ಮಗಳು ತಂದೆಯನ್ನು ಕರೆದಾಗಲೂ ಉತ್ತರವಿಲ್ಲದ್ದರಿಂದ ಮುಂಬೈಯಲ್ಲಿ ನೆಲೆಸಿರುವ ತಾಯಿಗೆ ಪೋನಾಯಿಸಿ ವಿಚಾರಿಸಿದ್ದಾರೆ. ಅವರು ವಾಕಿಂಗ್‌ಗೆ ತೆರಳಿರಬಹುದೆಂಬ ತಾಯಿ ಹೇಳಿದ್ದರಿಂದ ಸ್ವಲ್ಪ ಹೊತ್ತು ಕಾದು ಬಳಿಕ ಅಕ್ಕಪಕ್ಕದ ಮನೆಯವರಲ್ಲೂ ವಿಚಾರಿಸಿದ್ದಾರೆ. ಎಷ್ಟು ಹೊತ್ತಾದರೂ ಹಿಂತಿರುಗದ್ದನ್ನು ನೋಡಿ ಸಂಶಯಗೊಂಡು ಮನೆಯ ಬೀಗ ಒಡೆದು ಒಳಗೆ ತೆರಳಿದಾಗ ಸ್ನಾನಗೃಹ ಬಳಿ ಮಾಧವ ಪೂಜಾರಿ ಅವರ ಮೃತದೇಹ ರಕ್ತದ ಮುಡುವಿನಲ್ಲಿ ಬೋರಲಾಗಿ ಬಿದ್ದಿತ್ತು. ಮಗಳು ಬೊಬ್ಬೆ ಕೇಳಿ ಅಕ್ಕಪಕ್ಕದ ಮನೆಯವರೂ ಸೇರಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬಾವಿಯಲ್ಲಿ ಬೀಗದ ಕೈ, ಪರ್ಸ್ ಪತ್ತೆ: ಮಾಧವ ಪೂಜಾರಿ ಒಳಗಡೆ ಇರುವಾಗಲೇ ಮನೆಯ ಎದುರಿನ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಸಂಶಯ ಮೂಡಿದೆ. ಮನೆಯ ಹಿಂದಿನ ಬಾಗಿಲು ಬಳಿಯೇ ಮೃತದೇಹ ಪತ್ತೆಯಾಗಿರುವುದಲ್ಲದೇ, ಎದುರಿನ ಬಾವಿಯಲ್ಲಿ ಬೀಗದ ಕೈ ಹಾಗೂ ಪರ್ಸ್ ಪತ್ತೆಯಾಗಿದೆ.
ಕುಟುಂಬ ಮುಂಬೈನಲ್ಲಿ ನೆಲೆಸಿದೆ: ಮೃತ ಮಾಧವ ಪೂಜಾರಿ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದ್ದು ಮಾಧವ ಪೂಜಾರಿ ಅವರು ಕಳೆದ ಮೂರು ವರ್ಷಗಳಿಂದ ತನ್ನ ನಾವುಂದದ ಹೆಂಡತಿ ಮನೆಯಲ್ಲಿಯೇ ನೆಲೆಸಿದ್ದರು. ಮುಂಬೈಯ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅವರು ನಿವೃತ್ತಿಯ ಬಳಿಕ ಊರಿಗೆ ಹಿಂತಿರುಗಿದ್ದರು. ಹಿರಿಯ ಮಗಳು ಪ್ರತಿಭಾ ಮದುವೆಯಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರ ಪತ್ನಿ ಹಾಗೂ ಓರ್ವ ಮಗಳು ಪ್ರಮೀಳಾ ಹಾಗೂ ಮಗ ಪ್ರವೀಣ ಮುಂಬೈಯಲ್ಲಿ ನಡೆಸಿದ್ದಾರೆ.
ಮುಂಬೈಗೆ ತೆರಳುವವರಿದ್ದರು: ಒಂದು ದಿನ ಕಳೆದಿದ್ದರೇ ಮಾಧವ ಪೂಜಾರಿ ಅವರು ಮಗಳೊಂದಿಗೆ ಮುಂಬೈಗೆ ತೆರಳುವವರಿದ್ದರು. ಮೊಮ್ಮಗನಿಗೆ ಬೇಸಿಗೆ ರಜೆ ಇದ್ದ ಕಾರಣ ಮಗಳನ್ನು ಮಂಬೈಯಲ್ಲಿ ಬಿಟ್ಟು ಹಿಂತಿರುಗುವವರಿದ್ದರು.
ಪೊಲೀಸರು ಮೊಕ್ಕಾಂ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಎಸ್ಪಿ ಅಣ್ಣಾಮಲೈ ಖುದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆದ್ದಾರೆ. ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ಸುದರ್ಶನ್, ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಹಾಗೂ ಇತರ ಸಿಬ್ಬಂಧಿಗಳು ತನಿಕೆಯಲ್ಲಿ ಪಾಲ್ಗೊಂಡಿದ್ದರು.
ಘಟನಾ ಸ್ಥಳಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ತಾಪಂ ಸದಸ್ಯರಾದ ಜಗದೀಶ್ ಪೂಜಾರಿ, ಮಹೇಂದ್ರ ಪೂಜಾರಿ, ಶಾಮಲಾ ಕುಂದರ್, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.