ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಪದವಿ ಶಿಕ್ಷಣದ ಅನಂತರ ಉದ್ಯೋಗವನ್ನು ಅರಸಿ, ಅದನ್ನು ಪಡೆದುಕೊಳ್ಳುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ತೀವ್ರವಾದ ಪೈಪೋಟಿ ಇರುವುದರಿಂದ ಉದ್ಯೋಗಾಕಾಂಕ್ಷಿ ವಿಶಿಷ್ಟವಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ತನ್ನಲ್ಲಿರುವ ಪ್ರತಿಭೆ, ಅರ್ಹತೆಯನ್ನು ತೋರಿಸಿಕೊಳ್ಳಲು ಉತ್ತಮ ರೆಸ್ಯೂಂ (ಸ್ವವಿವರ) ರಚಿಸಿಕೊಳ್ಳುವುದು ಅತೀ ಅಗತ್ಯ ಎಂದು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರತಾಪಚಂದ್ರ ನುಡಿದರು.
ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ಉದ್ಯೋಗ ಮಾಹಿತಿ ಹಾಗೂ ರೆಸ್ಯೂಂ ರಚನಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಕಡಿಮೆ ಆಗುತ್ತಿದೆ. ರೆಸ್ಯೂಂ ರಚಿಸುವುದು ಸೇರಿದಂತೆ ತೀರಾ ವೈಯಕ್ತಿಕ ವಿಷಯಕ್ಕೂ ಅಂತರ್ಜಾಲದ ಮೊರೆ ಹೋಗುತ್ತಿರುವುದು ಬೇಸರದ ಸಂಗತಿ. ಅಭ್ಯರ್ಥಿಯ ಸಂಪೂರ್ಣ ವಿವರವನ್ನು ಸ್ಪಷ್ಟ ಹಾಗೂ ಆಕರ್ಷಕವಾದ ರೀತಿಯಲ್ಲಿ ಪ್ರಸ್ತುತಪಡಿಸಿದಾಗ ಅದು ಸಂದರ್ಶಕರ ಮನಗೆಲ್ಲುತ್ತದೆ. ತನ್ನ ಸಾಮರ್ಥ್ಯವೇನು ಎಂಬುದನ್ನು ಪ್ರಸ್ತುತಪಡಿಸುವ ಕೌಶಲ್ಯತೆ ಯಾರಿಗಿರುತ್ತದೋ ಅವರು ಸುಲಭವಾಗಿ ಸಂದರ್ಶನವನ್ನು ಎದುರಿಸುತ್ತಾರೆ ಹಾಗಾಗಿ ಉದ್ಯೋಗದ ಬೇಟೆಗೆ ಹೋಗುವಾಗ ರೆಸ್ಯೂಂನಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ
ಶಿಸ್ತು ಮತ್ತು ಪೂರ್ವಸಿದ್ಧತೆ ಹೇಗಿರಬೇಕೆಂದವರು ವಿವರಿಸಿದರು.
ನೂರಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಾಗಾರವನ್ನು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉಮೇಶ ಮಯ್ಯರವರು ಸಂಯೋಜಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿಯಾದ ಪೂರ್ಣಿಮಾ ಎನ್ ಆರ್ ಧನ್ಯವಾದಗೈದರು.