ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಸಾಹಸಕ್ಕೆ ಹೆಸರಾದ ಕೊಂಕಣಿ ಖಾರ್ವಿ ಜನಾಂಗವು ಹೋಳಿ ಹಬ್ಬವನ್ನು ಅತ್ಯಂತ ಶ್ರದ್ಧೆ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸುತ್ತಾ ಬಂದಿದ್ದಾರೆ. ಈ ಸಮುದಾಯದ ಬಂಧುಗಳು ಬಣ್ಣದ ಓಕುಳಿಯಲ್ಲಿ ವಿಂದೇಳುವ ಮೊದಲು ವಾರಗಳ ಕಾಲ ಹಿಂದಿನ ಕಟ್ಟುಪಾಡುಗಳನ್ನು ಕ್ರಮಬದ್ಧವಾಗಿ ಆಚರಿಸುತ್ತಾ, ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
ಕುಂದಾಪುರ ಹಾಗೂ ಗಂಗೊಳ್ಳಿ ಭಾಗದಲ್ಲಿ ನೆಲೆಸಿರುವ ಕೊಂಕಣಿ ಭಾಷಿಕ ಖಾರ್ವಿ ಸಮುದಾಯದ ಬಹುದೊಡ್ಡ ಹಬ್ಬ ಹೋಳಿ. ಸಮಾಜದ ಏಳಿಗೆಗೆ ಈ ಸಂಪ್ರದಾಯವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಬೇಕೆಂಬುದನ್ನು ಈ ಜನಾಂಗದ ಪ್ರತಿಯೊಬ್ಬರೂ ಬಲವಾಗಿ ನಂಬಿದ್ದಾರೆ. ಅದರಂತೆಯೇ ಶಿವರಾತ್ರಿಯ ಬಳಿಕ ಹೊಳಿ ಹಬ್ಬದ ತಯಾರಿಗಳು ನಡೆಯುತ್ತದೆ. ಕುಂದಾಪುರದ ಕೊಂಕಣಿ ಖಾರ್ವಿ ಜನಾಂಗದವರು ಊರಿನ ಅಧಿದೇವರಾದ ಶ್ರೀ ಕುಂದೇಶ್ವರನಿಗೆ ಪೂಜೆ ಸಲ್ಲಿಸಿ ದೇವರಿಂದ ಆಜ್ಞಾಪನೆ ದೊರೆತ ಬಳಿಕ ಸಮುದಾಯದ ಪ್ರತಿ ಮನೆಯಲ್ಲಿಯೂ ಹೋಳಿ ಹಬ್ಬದ ವಿಧಿ-ವಿಧಾನಗಳಿಗೆ ಚಾಲನೆ ದೊರೆಯುತ್ತದೆ. ಈ ಸಂದರ್ಭದಲ್ಲಿ ಮನೆ ಮನೆಗೆ ತೆರಳುವ ಸಮುದಾಯದ ಪುರುಷರು ಗುಮಟೆ ಬಾರಿಸುತ್ತಾ ಹಾಡು, ನೃತ್ಯ ಮಾಡುತ್ತಾರೆ. ಮೂರನೆಯ ದಿನ ಸಮುದಾಯದವರು ಒಟ್ಟಾಗಿ ವೆಂಕಟರಮಣ ದೇವರ ದರ್ಶನ ಪಡೆಯುವುದು ವಾಡಿಕೆ. ಕುಂದಾಪ್ರ ಡಾಟ್ ಕಾಂ ಲೇಖನ
ಹೋಳಿ ದಹನ ವಿಶೇಷ: ಹೊಳಿ ಹಬ್ಬದಲ್ಲಿ ನಾಲ್ಕನೇ ದಿನ ಹೋಳಿ ದಹನ ಪ್ರಕ್ರಿಯ ವಿಶಿಷ್ಟವಾಗಿ ನಡೆಯುತ್ತದೆ. ರಾತ್ರಿಯಲ್ಲಿ ಕುಂದಾಪುರದ ಖಾರ್ವಿಕೇರಿಯಿಂದ ಆಕರ್ಷಣೆಗೊಳಪಟ್ಟ ವ್ಯಕ್ತಿಗಳಿಬ್ಬರು ಹಳೆಕೋಟೆ ಸ್ಮಶಾನದತ್ತ ಧಾಮಿಸುತ್ತಾರೆ. ಸ್ಮಶಾನದಲ್ಲಿ ಕಾಲು ಮತ್ತು ಕೈ ಮೂಳೆಗಳನ್ನು ಶೋಧಿಸಿ ಮತ್ತೆ ಖಾರ್ವಿಕೇರಿಯ ಹೋಳಿ ಮನೆಯತ್ತ ಹಿಂದಿರುಗುತ್ತಾರೆ. ಆಕರ್ಷಣೆಗೆ ಒಳಗಾದ ವ್ಯಕ್ತಿಯನ್ನು ಸಾವಿರಾರು ಮಂದಿ ಮಾತನಾಡದೇ ಹಿಂಬಾಲಿಸುತ್ತಾರೆ. ಅವರ ಮೇಲೆ ಬೆಳಕು ಹರಿಸುವಂತಿಲ್ಲ, ಹೋಳಿ ಮನೆಗೆ ಹಿಂದಿರುಗುವ ವರೆಗೂ ಗುಮಟೆ ಸದ್ದು ಕೂಡ ನಿಲ್ಲುವಂತಿಲ್ಲ. (ಕುಂದಾಪ್ರ ಡಾಟ್ ಕಾಂ) ಬಳಿಕ ಆ ವ್ಯಕ್ತಿಗಳು ತಂದ ಮೂಳೆಯನ್ನು ಹೋಳಿ ಮನೆಯ ಸಮೀಪದ ಗದ್ದೆಯಲ್ಲಿ ಹೂತು ಬಳಿಕ ಹೋಳಿ ಹವನ ನಡೆಸಿ ನರ್ತಿಸಲಾಗುತ್ತದೆ. ಖಾರ್ವಿ ಸಮುದಾಯದವರು ಹೊಳಿಯ ಧಗದಗಿಸುವ ಬೆಂಕಿಯ ಎದುರಿನ ನೃತ್ಯವನ್ನು ನೋಡುವುದೇ ಚಂದ. ಮರುದಿನ ಹೋಳಿ ಮನೆಯಲ್ಲಿ ಅಡಿಕೆ ಮರವನ್ನು ನೆಟ್ಟು ಮುತ್ತೈದೆಯರು ಪೂಜೆ ಸಲ್ಲಿಸುತ್ತಾರೆ. ಬಳಿಕ ಅಡಿಕೆ ಮರದ ಒಂದು ಭಾಗವನ್ನು ಕುಂದೇಶ್ವರ ದೇವಸ್ಥಾನಕ್ಕೆ ನೀಡುವ ಮೂಲಕ ಹೋಳಿ ದಹನ ಪ್ರಕ್ರಿಯೆ ಕೊನೆಗೊಳ್ಳುವುದು. ಕುಂದಾಪ್ರ ಡಾಟ್ ಕಾಂ ಲೇಖನ
ಹೋಳಿ ಓಕುಳಿ: ಹೊಳಿ ಆಚರಣೆಯ ಕೊನೆಯ ದಿನ ಕೊಂಕಣಿ ಖಾರ್ವಿ ಸಮಾಜದ ಸಾವಿರಾರು ಬಂಧುಗಳು ಹೋಳಿ ಓಕುಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಸಮಾಜದ ಹಿರಿಯರು ಕಿರಿಯರು, ಪುರುಷ ಮಹಿಳೆಯರೆನ್ನದೇ ಪ್ರತಿಯೊಬ್ಬರೂ ಹೋಳಿ ಆಚರಣೆಯಲ್ಲಿ ಭಾಗವಹಿಸಿ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ. ಕುಂದಾಪುರದ ಖಾರ್ವಿಕೇರಿಯಿಂದ ಹೊರಟು ಶಾಸ್ತ್ರೀ ವೃತ್ತದಲ್ಲಿ ತಿರುಗಿ ಮತ್ತೆ ಖಾರ್ವಿಕೇರಿಯನ್ನು ಸೇರುತ್ತಾರೆ. ಕುಂದಾಪುರದಲ್ಲಿಂತೆ ಗಂಗೊಳ್ಳಿಯ ಕೊಂಕಣಿ ಖಾರ್ವಿ ಜನಾಂಗವೂ ಹೋಳಿಯನ್ನು ಸಂಪ್ರದಾಯಬದ್ಧವಾಗಿ ಆಚರಿಸುವುದಲ್ಲದೇ, ದೊಡ್ಡ ಮೆರವಣಿಗೆಯಲ್ಲಿ ಹೋಳಿ ಓಕುಳಿ ನಡೆಸುತ್ತಾರೆ. (ಈ ಭಾರಿ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿರುವುದರಿಂದ ಹೋಳಿ ಹಬ್ಬ ಓಕುಳಿ, ಮೆರವಣಿಗೆ ಮಾಡುತ್ತಿಲ್ಲ) (ಕುಂದಾಪ್ರ ಡಾಟ್ ಕಾಂ ಲೇಖನ)
ಹಳೆಯ ಕಟ್ಟುಪಾಡುಗಳನ್ನು ಸಂಪ್ರದಾಯವನ್ನು ಮೀರದೇ, ಆಧುನಿಕತೆಗೆ ಒಗ್ಗಿಕೊಂಡು ಕೊಂಕಣಿ ಖಾರ್ವಿ ಸಮುದಾಯದ ಪ್ರತಿಯೊಬ್ಬರೂ ಶ್ರದ್ಧೆಯಿಂದ ಆಚರಿಸುತ್ತಿರುವುದು ಗಮನಾರ್ಹ.