ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವಸ್ಥಾನಗಳಿಗೆ ಚಿನ್ನವನ್ನು ಅರ್ಪಿಸುವುದಕ್ಕಿಂತ ವಿದ್ಯಾಲಯಗಳಿಗೆ ಕೊಡುಗೆ ನೀಡಿದರೇ ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವು ನೀಡಿದಂತಾಗುತ್ತದೆ ತನ್ಮೂಲಕ ದೇಶದ ಅಭ್ಯುದಯಕ್ಕೆ ವರವಾಗಬಲ್ಲಂತಹ ವ್ಯಕ್ತಿಗಳು ನಿರ್ಮಾಣಗೊಂಡು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುವರು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು.
ಅವರು ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಡಾ. ಎಚ್. ಶಾಂತಾರಾಮ್ ಬಯಲು ರಂಗ ಮಂದಿರದಲ್ಲಿ ಕಾಲೇಜಿನ ಎನ್.ಸಿ.ಸಿ ಆರ್ಮಿ ಮತ್ತು ನೇವಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ ಗುರುರಾಜ್ ಮತ್ತು ಸನಾ ಅವರಿಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡಿ ಮಡಿದ ಯೋಧರ ಸೇವೆ ಅನನ್ಯವಾದುದು. ಅವರ ಕಾರ್ಯಕ್ಷಮತೆಗೆ ಪ್ರತಿಯೊಬ್ಬರು ಗೌರವ ಸೂಚಿಸಬೇಕಾದುದು ನಮ್ಮ ಆದ್ಯ ಕರ್ತವ್ಯವು ಆಗಿದೆ. ಭಂಡಾರ್‌ಕಾರ್ಸ್ಕಾಲೇಜಿನ ಹಳೆ ವಿದ್ಯಾರ್ಥಿಗಳು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ನೀಡುವ ಮೂಲಕ ಯೋಧರಿಗೆ ಗೌರವ ಸಲ್ಲಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅಣ್ಣಾಮಲೈ ಅಭಿನಂದಿಸಿದರು.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಪ್ರಶಾಂತ ಹೆಗ್ಡೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಕಾರ್ಯದರ್ಶಿ ರಂಜಿತ್‌ಕುಮಾರ್ ಶೆಟ್ಟಿ ವರದಿ ವಾಚಿಸಿ, ವಂದಿಸಿದರು. ರಾಘವೇಂದ್ರಚರಣ ನಾವಡ ಕಾರ್ಯಕ್ರಮ ನಿರೂಪಿಸಿದರು.