ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು

Call us

Call us

Call us

ಪರಶುರಾಮನ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ (ಕರ್ನಾಟಕದಲ್ಲಿನ ‘ಸಪ್ತ ಮುಕ್ತಿಸ್ಥಳ’) ಒಂದಾದ ಕೊಲ್ಲೂರು ಕುಂದಾಪುರ ತಾಲ್ಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿ, ದಟ್ಟವಾದ ಕಾನನದ ನಡುವೆ ನೆಲೆಸಿಹ ಮೂಕಾಂಬಿಕೆ, ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಗಾಗಿ ಅವತಾರವೆತ್ತಿದ ಶಕ್ತಿ ದೇವತೆ. ಸಹಸ್ರ ಸಹಸ್ರ ಭಕ್ತರನ್ನು ಹೊಂದಿರುವ ಜಗನ್ಮಾತೆ, ಶ್ರೀ ಮೂಕಾಂಬಿಕೆ.

Call us

Click Here

ಇತಿಹಾಸ:
ಹಿಂದೆ ಮೂರನೇ ಮನ್ವಂತರದಲ್ಲಿ ಮಹಾತಪಸ್ವಿಯಾದ ಕೋಲಮಹರ್ಷಿಯು ಒಂದು ಪರ್ಣಶಾಲೆಯನ್ನು ಸೌಪರ್ಣಿಕಾ ನದಿಯ ದಂಡೆಯಲ್ಲಿ ಕಟ್ಟಿ ತಪಸ್ಸನ್ನಾಚರಿಸುತ್ತಿದ್ದಾನಂತೆ. ಆಶ್ರಮದ ಹಸುವೊಂದು ನಿತ್ಯವೂ ಅಲ್ಲಿಯೇ ಅರಣ್ಯದ ಮಧ್ಯದಲ್ಲಿ ಉದ್ಭವವಾಗಿದ್ದ ಲಿಂಗದ ಕಲ್ಲಿಗೆ ಹಾಲೆರದು ಬರುತ್ತಿದ್ದುದ್ದನ್ನು ಕಂಡ ಮಹರ್ಷಿಗಳು ಅದನ್ನು ನಿತ್ಯ ನೇಮಗಳಿಂದ ಪೂಜಿಸತೊಡಗಿದರು. ತನ್ನ ತಪೋಬಲದಿಂದ ಶಿವನನ್ನು ಪ್ರತ್ಯಕ್ಷ ಮಾಡಿಕೊಂಡು ಈ ಸ್ಥಳವು ತನ್ನ ಹೆಸರಿನಲ್ಲೇ ಉಳಿಯಬೇಕೆಂದು ಪ್ರಾರ್ಥಿಸಿದರಂತೆ. ಅದರಿಂದಾಗಿ ಕೋಲಾಪುರವೆಂದು ನಾಮಕರಣವಾಯಿತೆನ್ನುತ್ತಾರೆ. ಅದೇ ವೇಳೆಯಲ್ಲಿ ಕಂಹಾಸುರನೆಂಬ ಅಸುರನೊಬ್ಬನೂ ಕೂಡ ಮಹಾಬಲಾಢ್ಯನಾಗಿ ಮಹರ್ಷಿಗಳನ್ನು ಪೀಡಿಸಲಾರಂಭಿಸಿದನಂತೆ. ಆಗ ದಿಕ್ಕೆಟ್ಟ ಕೋಲ ಋಷಿಯು ಮತ್ತು ಇತರ ಋಷಿವರೇಣ್ಯರು ತ್ರಿಮೂರ್ತಿಗಳನ್ನು ಮೊರೆ ಹೊಕ್ಕರಂತೆ. ಅವರು ತ್ರಿಪುರ ಭೈರವಿಯನ್ನು ಸೃಷ್ಟಿಸಿ ಅವರನ ವಧೆಗಾಗಿ ಕಳುಹಿಸಿದರು. ಕಾಲಭೈರವಿಯನ್ನು ಕಂಡ ಕಂಹಾಸುರ ಭಯದಿಂದ ಓಡಿಹೋಗಿ ಋಷ್ಯ ಮೂಕಾಚಲಕ್ಕೆ ಹೋಗಿ ತಪಸನ್ನಾಚರಿಸಿದ. ನಾಲ್ಕು ಮನ್ವಂತರಗಳು ದಾಟಿ ಕೃತಯುಗದ ಅರವತ್ನಾಲ್ಕನೆಯ ಸಂವತ್ಸರದಲ್ಲಿ ಮಹಿಷಾಸುರನೆಂಬ ರಾಕ್ಷಸನು ಇಲ್ಲಿ ಬಂದು ನೆಲಸಿ ಉಪಟಳವನ್ನು ಕೊಡಲಾರಂಭಿಸಿದನಂತೆ. ಕೋಲ ಮಹರ್ಷಿಯು ಆದಿಶಕ್ತಿಯನ್ನು ಕುರಿತು ತಪ್ಪಸ್ಸನ್ನಾಚರಿಸಿ, ಅವನನ್ನು ಸಂಹಾರ ಮಾಡುವಂತೆ ಬೇಡಿಕೊಂಡ. ಭಕ್ತರ ಬೇಡಿಕೆಯಂತೆ ಮಹಿಷಾಸುರನನ್ನು ಸಂಹರಿಸಿದಳು. ಆ ತ್ರಿಮೂರ್ತಿಗಳು ಶ್ರೀ ಚಕ್ರವನ್ನು ಮತ್ತು ಭೂಲೋಕ ರಕ್ಷಣೆಗಾಗಿ ದೇವಿಯನ್ನು ಅವರಲ್ಲಿ ಪ್ರತಿಷ್ಠಾಪಿಸಿದರು.

Mookambika temple1

ಋಷ್ಯ ಮೂಕಾಚಲದಲ್ಲಿ ದೀರ್ಘ ತಪ್ಪಸ್ಸನ್ನಾಚರಿಸುತ್ತಿದ್ದ ಕಂಹಾಸುರನಿಗೆ ಪರಶಿವನು ಒಲಿಯುವ ಕಾಲ ಸನ್ನಿಹಿತವಾಗಿತ್ತು. ಇದನ್ನರಿತ ಋಷಿಗಳು ಕಂಗೆಟ್ಟು ಪರಾಶಕ್ತಿಯನ್ನು ಪ್ರಾರ್ಥಿಸಿ, ಶಿವನು ದರ್ಶನವೀಯುವ ಸಂದರ್ಭದಲ್ಲಿ ಅವನ ನಾಲಿಗೆಯಲ್ಲಿ ನೆಲೆಸಿ ಮೂಕನನ್ನಾಗಿ ಮಾಡಬೇಕೆಂದು ಪ್ರಾರ್ಥಿಸಿದರು. ಅದರಂತೆಯೇ ದೇವಿಯು ಆ ಅಸುರನನ್ನು ವರವನ್ನು ಕೇಳಲಾಗದಂತೆ ಮಾಡಿದಳಂತೆ. ಆದ್ದರಿಂದ ದೇವಿಗೆ ಮೂಕಾಂಬಿಕೆ ಎಂದೂ ಹೆಸರಾಯಿತು. ಋಷಿಗಳಿಂದಲೇ ತನಗೆ ಹೀಗಾಯಿತೆಂದು ತಿಳಿದ ಕಂಹಾಸುರ ಮತ್ತೆ ತೊಂದರೆ ಕೊಡಲಾಂಭಿಸಿದನಂತೆ. ಕೊನೆಗೆ ದೇವಿಯು ಬ್ರಾಹ್ಮೀ, ವೈಷ್ಣವೀ, ಶಾಂಭವೀ, ಕುಮಾರಿ, ಇಂದ್ರಾಣಿ, ವರಾಹಿ, ಎಲ್ಲರೊಡಗೂಡಿ ಒಂದೇ ದೇಹವನ್ನು ತಾಳಿ, ಮೂಕಾಸುರನನ್ನು ಸಂಹರಿಸಿದಳಂತೆ. ಋಷಿಗಳೆಲ್ಲರೂ ಕೂಡಿ ತಾವು ಇಲ್ಲಿಯೇ ನೆಲೆಸಬೇಕೆಂದರಂತೆ. ಅವರ ಬೇಡಿಕೆಯಂತೆ ದೇವಿ ಅಲ್ಲಿ ನೆಲೆಸಿದಳು. ದೇಶ ಪರ್ಯಟಣೆ ಮಾಡುತ್ತಾ. ಬಂದ ಶಂಕರಾಚಾರ್ಯರು ಕುಟಚಾದ್ರಿಯಲ್ಲಿ ಬಂದು ತಪಸ್ಸನ್ನಾಚರಿಸಿದ್ದರು. ದೇವಿಯನ್ನು ಕೇರಳಕ್ಕೆ ಕರೆದೊಯ್ಯಬೇಕೆಂದು. ಮನಸ್ಸು ಮಾಡಿ, ಪ್ರತ್ಯಕ್ಷಳಾದ ದೇವಿಗೆ ತನ್ನ ಮನದಿಚ್ಛೆ ತಿಳಿಸಿದರು, ಆಯಿತು ಬರುತ್ತೇನೆ. ಆದರೆ ನಿನ್ನ ಹಿಂದೆ ಬರುತ್ತಿರುವ ನನ್ನನ್ನು ಯಾವ ಕಾರಣಕ್ಕೂ ಹಿಂದಿರುಗಿ ನೋಡಬಾರದೆಂದು ಆಜ್ಞೆ ಮಾಡಿದಳು. ಅದರಂತೆ ಶಂಕರಾಚಾರ್ಯರು ಮುಂದೆ ಮುಂದೆ ಹೋಗುತ್ತಿರುವಾಗ ಗೆಜ್ಜೆ ಸಪ್ಪಳವೇ ಕೇಳಿಸುವುದಿಲ್ಲವಲ್ಲಾ ಎಂದು ಅನುಮಾನ ಬಂದು ತಿರುಗಿ ನೋಡಿದರಂತೆ. ಆಗ ದೇವಿ ತಾನು ಇಲ್ಲಿಯೇ ನೆಲೆಸುವೆನು, ನೀನು ನನ್ನ ಮಾತಿನಂತೆ ನಡೆದುಕೊಳ್ಳಲಿಲ್ಲವೆಂದು ಹೇಳಿದಳಂತೆ. ಹೀಗೆ ದೇವಿಯ ನೆಲೆಸಿಕೆಗೆ ನಾನಾ ಐತಿಹ್ಯಗಳನ್ನು ಹೇಳುತ್ತಾರೆ. ಮಲೆಯಾಳಿಗಳು ಈ ದೇವತೆಗೆ ಹೆಚ್ಚು – ಸಂಖ್ಯೆಯಲ್ಲಿ ನಡೆದುಕೊಳ್ಳುತ್ತಿರುವುದಕ್ಕೆ ಇದೇ ಕಾರಣವೆಂದೂ ನಂಬಿದ್ದಾರೆ.

ಇಲ್ಲಿಯ ಆಚಾರನುಷ್ಠಾನ ಸಂಪ್ರದಾಯಗಳು ಆದಿಶಂಕರಾಚಾರ್ಯರಿಂದ ನೇಮಕ ಮಾಡಲ್ಪಟ್ಟವುಗಳೆಂದೂ ಹೇಳುವರು. ನಿತ್ಯ ಪೂಜಾದಿ ಕಾರ್ಯಗಳೂ ಕೂಡ ಇಲ್ಲಿ ಕೇರಳೀಯಾಚಾರಾನುಸಾರ ನಡೆದು ಬರುತ್ತಿವೆ. ಸ್ವಾಮಿಗಳು ತಮ್ಮ ಮಹಿಮೆಯಿಂದ ವಿಗ್ರಹ ಪ್ರತಿಷ್ಠಾಪಿಸಿದರೆಂದೂ ಇದಕ್ಕೆ ಮೊದಲು ಸ್ವಯಂಭು ಲಿಂಗ ಮಾತ್ರವಿತ್ತೆಂದೂ ಹೇಳುವರು. ಶಂಕರಾಚಾರ್ಯರು ಧ್ಯಾನ ಮಾಡಿದ ಸ್ಥಳವನ್ನು “ಶಂಕರಪೀಠ” ಎಂದು ಈಗಲೂ ಕರೆಯುತ್ತಾರೆ. ಉದ್ಭವಲಿಂಗ ಪೂರ್ವದಿಕ್ಕಿಗೆ ಮುಖವಾಗಿದ್ದು, ಅದರ ಎಡಭಾಗ ದೊಡ್ಡದಾಗಿಯೂ ಬಲಭಾಗ ಚಿಕ್ಕದಾಗಿಯೂ ಇದೆ. ಆದರಿಂದ ಇದನ್ನೂ ಸ್ತ್ರೀ ಪ್ರಾಧಾನ್ಯವಾದದ್ದೆನ್ನುವರು. ಈ ದೇವಿಗೆ ಮಂಗಳವಾರ, ಶುಕ್ರವಾರ ಬಹಳ ಜನ ಭಕ್ತಾಧಿಗಳು ಬಂದು ಪೂಜೆ ಸಲ್ಲಿಸಿ, ಪ್ರಾರ್ಥಸಿಕೊಳ್ಳುತ್ತಾರೆ.

Click here

Click here

Click here

Click Here

Call us

Call us

Mookambika temple2

ಪೂಜಾ ಪದ್ಧತಿಯೂ ಬ್ರಾಹ್ಮಣ ಅರ್ಚಕರಿಂದ ಆಗಮಿಕ ರೀತಿಯಲ್ಲಿ ನಡೆಯುತ್ತದೆ. ದಿನಕ್ಕೆ ಮೂರು ಹೊತ್ತು ಪೂಜೆ, ಅಭಿಷೇಕ, ನೈವೇದ್ಯ ನಡೆಯುತ್ತದೆ. ಬೆಳಗಿನ ಪೂಜೆ ೭ ಗಂಟೆಗೆ ಆದ ತರುವಾಯ ಶ್ರೀ ಬಲಿಗೆ ಅಮ್ಮನವರ ವಿಗ್ರಹವನ್ನು ಎರಡೂ ಸುತ್ತು ಒಬ್ಬನು ಹೆಗಲಲ್ಲೇರಿಸಿಯೂ ಒಂದು ಸುತ್ತು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಿಂದ ಪ್ರದಕ್ಷಿಣಿ ಮಾಡುವರು. ಪುನಃ ಮಧ್ಯಾಹ್ನ ನೈವೇದ್ಯ, ಆರತಿ ನಡೆಯುವುದು. ಸಂಜೆ ಪೂಜೆಯಲ್ಲಿ ದೀಪಾರಾಧನೆಯ ನಂತರ ಪರಿವಾರಕ್ಕೆ ಎಂದರೆ ಸುತ್ತಲೂ ಇರುವ ದೈವಗಳಿಗೂ ದೀಪಾರಾಧನೆ ಮಾಡುವರು. ಅಲ್ಲದದೆ, ಪ್ರತಿ ಶುಕ್ರವಾರ ಸಂಜೆ ೫ ಗಂಟೆಗೆ ಅಮ್ಮನವರನ್ನು ದೇವಸ್ಥಾನದಿಂದ ಅರ್ಧ ಪರಲಾಂಗ್ ಬಡಗು ಇರುವ ಸರಸ್ವತೀ ಮಂಟಪಕ್ಕೆ ಮೆರವಣಿಗೆಯಿಂದ ಸಾಗಿಸಿ ನೈವೇದ್ಯ ಮಹಾಮಂಗಳಾರುತಿ ಆಗುತ್ತದೆ. ಪ್ರತಿದಿನ ಮೂರು ಹೊತ್ತು ಪೂಜೆ ನಡೆಯುವಾಗಲೆಲ್ಲಾ ಶ್ರುತಿ, ಮೌರಿ, ಸಮೇಳ, ತಾಳ, ಡೋಲುಗಳಲ್ಲದೆ ಒಂದು ದೊಡ್ಡ ಭೇರಿ (ನಗಾರಿ) ಯನ್ನು ಬಾರಿಸುತ್ತಾರೆ. ವಾದ್ಯದವರಿಗೆ ವಂಶಪಾರಂಪರ್ಯವಾಗಿ ಈ ವೃತ್ತಿ ಬಂದಿದೆ. ಎರಡು ದೊಡ್ಡ ಗಂಟೆಗಳನ್ನು ಮತ್ತು ಮಹಾದ್ವಾರದ ಗಂಟೆಗಳನ್ನು ಯಾರೂ ಹೊಡೆಯುವಂತಿಲ್ಲ. ಮಂಗಳಾರತಿ ಆಗುವಾಗ ಮತ್ತು ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಬಾರಿಸುತ್ತಾರೆ. ಪೂಜೆ ನಡೆಯುವಾಗ ಗಂಡಸರುಗಳು ದೇವಸ್ಥಾನದ ಒಳಗೆ ಹೋಗಲು ಮೈ ಮೇಲೆಯ ಬಟ್ಟೆಯನ್ನು ತೆಗೆಯಬೇಕು.

ಗರ್ಭಗುಡಿಯಲ್ಲಿ ಎರಡು ಪ್ರಕಾರಗಳಿವೆ. ದೀಪಸ್ತಂಭ ಮತ್ತು ಧ್ವಜ ಸ್ತಂಭಗಳು ದೇವರ ಎದುರುದ್ವಾರದಲ್ಲೇ ಇವೆ. ವೀರಭದ್ರನು ಖತ್ತಿ ಹಿಡಿದು ನಿಂತಿರುವ ಕಂಚಿನ ಮೂರ್ತಿಯೆಂದೂ ಒಳ ಪ್ರಕಾರದಲ್ಲಿದೆ. ಸುಬ್ರಹ್ಮಣ್ಯ, ಪ್ರಾಣಲಿಂಗ, ಪಾರ್ಥೇಶ್ವರ, ಪಂಚಮುಖ ಗಣಪತಿ, ಚಂದ್ರಮೌಳೇಶ್ವರ, ನಂಜುಂಡೇಶ್ವರ, ಆಂಜನೇಯ, ಗೋಪಾಲಕೃಷ್ಣ ಮುಂತಾದ ದೇವರುಗಳು ಒಳ ಪ್ರಾಕಾರದಲ್ಲಿವೆ.

ಹಬ್ಬ ಉತ್ಸವ:

ಪ್ರತಿವರ್ಷಧ್ವಜಾರೋಹಣವು ಮೀನ ಮಾಸದ ಉತ್ತರಾ ನಕ್ಷತ್ರದಲ್ಲಿ ಮತ್ತು ಮೂಲಾ ನಕ್ಷತ್ರದ ದಿನ ರಥೋತ್ಸವವು ಜರುಗುತ್ತದೆ. ಉತ್ತರಾ ನಕ್ಷತ್ರ ಇರುವ ದಿನದಿಂದ ಧ್ವಜಾರೋಹಣದೊಂದಿಗೆ ಆರಂಭವಾಗುವ 9ದಿನದ ಕಾರ್ಯಕ್ರಮಗಳು ಮೂಲಾನಕ್ಷತ್ರದವರೆಗೆ ನಡೆಯುತ್ತವೆ. ಜ್ಯೇಷ್ಠ ಮಾಸದ ಅಷ್ಟಮಿ ದಿನ ಹಾಗೂ ಹಬ್ಬ ಹರಿದಿನಗಳಂದು ದೇವಿಗೆ ವಿಶೇಷ ಪೂಜೆಗಳು ಜರುಗುತ್ತವೆ.

ನವರಾತ್ರಿಯ ಕಾಲದಲ್ಲಿ ನವಾಕ್ಷರಿ ಕಳಶ, ಚಂಡಿಕಾಹೋಮಾ, ರಥೋತ್ಸವ, ಪುರ್ಣಕುಂಭಾ ಅಭಿಷೇಕ ಮೊದಲಾದವು ಜರುಗುತ್ತವೆ. ನವೆಂಬರ್ – ಡಿಸೆಂಬರ್ ತಿಂಗಳಿನಲ್ಲಿ ವನಭೋಜನ ಎಂಬ ವಿಶಿಷ್ಟ ಆಚರಣೆಯೂ ನಡೆಯುತ್ತದೆ. ಇದಲ್ಲದೆ ಅಷ್ಟಬಂಧ ಬ್ರಹ್ಮ ಕಲಶೋತ್ಸವವೂ ನಡೆಯುತ್ತದೆ.

ಕಾರ್ತೀಕ ದೀಪವು ವೃಶ್ಚಿಕಾ ಮಾಸದ ಅಮವಾಸ್ಯೆಯ ದಿನ ನಡೆಸುತ್ತಾರೆ. ಅದರ ಮೊದಲ ದಿನ ಅಮ್ಮನವರನ್ನು ಸೌಪರ್ಣಿಕಾ ತೀರಕ್ಕೆ ಮೆರವಣಿಗೆಯಿಂದ ಒಯ್ದು ಪೂಜಾದಿಗಳನ್ನು ಮಾಡುತ್ತಾರೆ. ಅದನ್ನು ಓಡಬಲಿ ಎಂದು (ಭೂತಗಳನ್ನು ಓಡಿಸುವುದು) ಕರೆಯುವರು. ತೂತಾದ ಗಡಿಗೆ ಕೊಟ್ಟು ನೀರು ತರಲಿಕ್ಕೆ ಹೇಳುತ್ತಾರೆ; ತರುವುದಕ್ಕೆ ಆಗುವುದಿಲ್ಲ. ಅಷ್ಟರೊಳಗೆ ಪೂಜೆ ಮುಗಿಸುತ್ತಾರೆ. ಪ್ರಧಾನ ಅರ್ಚಕರು ಬಲಿ ಎಂದು ನುಗ್ಗೆ ಸೊಪ್ಪು ಬೂದುಗುಂಬಳ ಮತ್ತು ಅನ್ನವನ್ನು ಹಾಕುತ್ತಾ ಬರುತ್ತಾರೆ. ಇದೆಲ್ಲಾ ಮುಗಿದ ನಂತರ ಭಾಗವಹಿಸಿದ ಎಲ್ಲರಿಗೂ ಊಟ ಹಾಕುತ್ತಾರೆ.

ಪ್ರತಿ ತಿಂಗಳು ಹುಣ್ಣಿಮೆ ಮತ್ತು ಅಮವಾಸ್ಯೆಯೆಂದು ಬೀದಿ ಉತ್ಸವ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ವನಭೋಜನವೆಂದು ನೆಲ್ಲಿಯ ಮರವಿರುವೆಡೆಯಲ್ಲಿಗೆ ಹೋಗಿ ವಿಶೇಷ ಪೂಜೆ, ಧಾತ್ರಿ, ಹೋಮ ನಡೆಸುತ್ತಾರೆ, ಪಾಯಸ, ಹುಳಿ, ಅನ್ನ ಸಾರು ಆದಿನದ ವಿಶೇಷ ಅಡುಗೆಯಾಗಿದ್ದು, ನೈವೇದ್ಯ ಮಾಡುತ್ತಾರೆ.

ಪೂಜಾ ಕೈಂಕರ್ಯ:
ಮುಂಜಾನೆ 5.00 ಗಂಟೆ ದೇವಸ್ಥಾನದ ನಾದವು ಪ್ರಾರಂಭವಾಗುತ್ತದೆ. ನಿರ್ಮಾಲ್ಯ-ದರ್ಶನ
ಮುಂಜಾನೆ 6.00 ಗಂಟೆ ಉಷಾ ಪೂಜೆ
ಮುಂಜಾನೆ 7.30 ಗಂಟೆ ಮಂಗಳಾರತಿ
ಮುಂಜಾನೆ 8.30 ಗಂಟೆ ಬಲಿ
ಬೆಳಗ್ಗೆ 11.30 ಗಂಟೆ ಉಚ್ಚ ಪೂಜೆ
ಮಧ್ಯಾಹ್ನ 12.00 ಗಂಟೆ ಮಹಾನೈವೇದ್ಯ
ಮಧ್ಯಾಹ್ನ 12.30 ಗಂಟೆ ಮಹಾ ಮಂಗಳಾರತಿ
ಮಧ್ಯಾಹ್ನ 1.00 ಗಂಟೆ ಬಲಿ
ಮಧ್ಯಾಹ್ನ 1.30 ಗಂಟೆ ನಾದವು ಮುಕ್ತಾಯಗೊಳ್ಳುತ್ತದೆ
ಮಧ್ಯಾಹ್ನ 3.00 ಗಂಟೆ ನಾದವು ಪ್ರಾರಂಭವಾಗುತ್ತದೆ
ಸಂಜೆ 6.00 ಗಂಟೆಗೆ ಪ್ರದೋಷ ಪೂಜೆ
ರಾತ್ರಿ 7.00 ಗಂಟೆಗೆ ನಮನದ ಮಂಗಳಾರತಿ ಮತ್ತು ನೈವೇದ್ಯಂ
ರಾತ್ರಿ 7.30 ಗಂಟೆ ಮಂಗಳಾರತಿ
ರಾತ್ರಿ 8.00 ಗಂಟೆ ಬಲಿ ಮಂಗಳಾರತಿ
ರಾತ್ರಿ 8.30 ಗಂಟೆ ಬಲಿ ಉತ್ಸವ. ಸರಸ್ವತಿ ಮಂಟಪದಲ್ಲಿನ ಅಷ್ಟಾವಧಾನ ಪೂಜೆ.
ರಾತ್ರಿ 9.00 ಗಂಟೆ ಕಾಷಾಯ ಮಂಗಳಾರತಿ. ದೇವಸ್ಥಾನದ ನಾದವು ಮುಕ್ತಾಯಗೊಳ್ಳುತ್ತದೆ.
.
ವಸತಿ ಸೌಕರ್ಯ:
ದೇವಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತ ಅತಿಥಿಗೃಹ ನಿರ್ಮಿಸಿದೆ. ಸೌಪರ್ಣಿಕಾ ಅತಿಥಿಗೃಹ ಸಂಕೀರ್ಣ, ಗೊಯಂಕಾ ಅತಿಥಿಗೃಹ, ಶೃಂಗೇರಿಯ ಶಂಕರಕೃಪಾ ಅತಿಥಿಗೃಹ, ಶ್ರೀರಾಮಕೃಷ್ಣಾಶ್ರಮದ ಅತಿಥಿಗೃಹ, ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಬಂಗಲೆ ಹಾಗೂ ಹಲವಾರು ವಸತಿಗೃಹಗಳೂ ಇಲ್ಲಿವೆ.

ಮಾರ್ಗ:
ಕುಂದಾಪುರ, ಬೈಂದೂರು ಹಾಗೂ ಶಿವಮೊಗ್ಗದ ಮಾರ್ಗದ ಮೂಲಕ ಬಸ್ಸಿನಲ್ಲಿ ಕೊಲ್ಲೂರನ್ನು ತಲುಪಬಹುದಾಗಿದೆ.
ಬೈಂದೂರು ಶ್ರೀ ಮೂಕಾಂಬಿಕಾ ರೈಲ್ವೆ ನಿಲ್ದಾಣ ಕ್ಷೇತ್ರಕ್ಕೆ ಹತ್ತಿರವಿದೆ.

ವಿಳಾಸ:
ಕಾರ್ಯನಿರ್ವಾಹಕ ಅಧಿಕಾರಿಗಳು,
ಶ್ರೀಮೂಕಾಂಬಿಕಾ ದೇವಸ್ಥಾನ,
ಕೊಲ್ಲೂರು, ಉಡುಪಿ ಜಿಲ್ಲೆ.
ಕರ್ನಾಟಕ – 576220
ಪೋನ್: 08254- 258521, 258221, 258488,

58489, 258328, 258288, 258522

ಮಾಹಿತಿ:
ಕರ್ನಾಟಕದ ಸ್ತ್ರೀ-ಗ್ರಾಮದೇವತೆಗಳು(ಲೇ- ಬಸವರಾಜ ನೆಲ್ಲೀಸರ)
ಶ್ರೀ ಕ್ಷೇತ್ರ ಕೊಲ್ಲೂರು,
ಕರ್ನಾಟಕದ ಪ್ರೇಕ್ಷಣಿಯ ಸ್ಥಳಗಳು,
ದೇವಳದ ಸಂದರ್ಶನಗಳು.

Leave a Reply

Your email address will not be published. Required fields are marked *

2 × five =