ಕುಂದಾಪ್ರ ಡಾಟ್ ಕಾಂ | ಝೆನ್ ಕಥೆಗಳು
ನಿಜವಾದ ದಾರಿ
ನಿನಕ್ಯು ಕೊನೆಯುಸೆರೆಳೆಯುವುದಕ್ಕೆ ಮುಂಚೆ ಝೆನ್ ಗುರು ಇಕ್ಯು ಅವರನ್ನು ಭೇಟಿ ಮಾಡಿದರು.
‘ನಾನು ನಿನ್ನನ್ನು ಮುನ್ನಡೆಸಬೇಕೇ?’ ಎಂದು ಗುರುಕ ಕ್ಯು ಕೇಳಿದರು.
ಆಗ ನಿನಕ್ಯು, ‘ನಾನು ಏಕಾಂಗಿಯಾಗಿಬಂದಿದ್ದೇನೆ, ಏಕಾಂಗಿಯಾಗೇ ಹೋಗುತ್ತೇನೆ. ನೀವು ನನಗೆ ಹೇಗೆ ನೆರವು ನೀಡಲು ಸಾಧ್ಯ?’
ಇಕ್ಯು ಉತ್ತರಿಸಿದರು, ‘ನೀನು ನಿಜವಾಗಿಯೂ ಬರುತ್ತೇನೆ ಹಾಗೂ ಹೋಗುತ್ತೇನೆ ಎಂದು ಭಾವಿಸುವುದಾದರೆ ಅದು ನಿನ್ನ ಭ್ರಮೆ. ಆಗಮನ ಹಾಗೂ ನಿರ್ಗಮನ ಇಲ್ಲದ ದಾರಿಯನ್ನು ನಾನು ತೋರಿಸುತ್ತೇನೆ,’
ಈ ಮಾತಿನೊಂದಿಗೆ ಇಕ್ಯು ಎಷ್ಟು ಸ್ಪಷ್ಟವಾಗಿ ದಾರಿ ತೋರಿಸಿದರು ಎಂದರೆ, ನಿನಕ್ಯು ಮುಗುಳ್ನಕ್ಕ ಹಾಗೂ ಕೊನೆಯುಸಿರೆಳೆದ.
ಶಿಲಾ ಬುದ್ಧನ ಬಂಧನ
ಓರ್ವ ವರ್ತಕ ಹತ್ತಿ ಸುರುಳಿಗಳನ್ನು ಹೊತ್ತುಕೊಂಡು ಪ್ರಯಾಣ ಬೆಳೆಸುತ್ತಿದ್ದ. ಬಿಸಿಲೇರಿದ್ದರಿಂದ ಬಳಲಿದ ಆತ, ಬೃಹತ್ ಬುದ್ಧನ ವಿಗ್ರಹದ ಅಡಿಯಲ್ಲಿ ಆಶ್ರಯ ಪಡೆದ. ಸ್ವಲ್ಪ ಹೊತ್ತಿನ ನಂತರ ಎದ್ದು ನೋಡಿದಾಗ ಆತನ ಸರಕು ಕಳುವಾಗಿತ್ತು. ತಕ್ಷಣ ಆತ ಪೊಲೀಸರಿಗೆ ದೂರು ನೀಡಿದೆ.
ನ್ಯಾಯಾಧೀಶ ಊಕಾ ತನಿಖೆ ಕೈಗೆತ್ತಿಕೊಂಡಿದ್ದರು. ‘ಕಲ್ಲಿನ ವಿಗ್ರಹವೇ ಸರಕನ್ನು ಕದ್ದಿರಬೇಕು’ ಎಂಬ ನಿರ್ಧಾರಕ್ಕೆ ಆತ ಬಂದ.
‘ಜನರ ಹಿತ ಕಾಯಬೇಕಾದ ಬುದ್ಧ ತನ್ನ ಕರ್ತವ್ಯ ಪಾಲನೆಯಲ್ಲಿ ವಿಫಲನಾಗಿದ್ದಾನೆ. ಆತನನ್ನು ಬಂಧಿಸಿ’ ಎಂದು ಊಕಾ ಆದೇಶಿಸಿದ.
ಪೊಲೀಸರು ಬುದ್ಧನ ವಿಗ್ರಹ ಬಂಧಿಸಿ ನ್ಯಾಯಾಲಕ್ಕೆ ತಂದಿರಿಸಿದರು. ಶಿಲಾ ಬುದ್ಧನಿಗೆ ಯಾವ ರೀತಿಯ ಶಿಕ್ಷೆ ವಿಧಿಸಬಹುದು ಎಂಬ ಕುತೂಹಲದಿಂದ ಸಾಕಷ್ಟು ಜನರು ನ್ಯಾಯಾಲಯದಲ್ಲಿ ಸೇರಿದ್ದರು. /ಕುಂದಾಪ್ರ ಡಾಟ್ ಕಾಂ/
ಊಕಾ ನ್ಯಾಯಪೀಠಕ್ಕೆ ಬಂದಾಗ ಅಲ್ಲಿ ಕುತೂಹಲಿಗಳಾಗಿ ನೆರೆದಿದ್ದ ಜನರನ್ನು ನೋಡಿ ಅಸಮಾಧಾನಗೊಂಡ.
‘ನೀವೆಲ್ಲಾ ನ್ಯಾಯಾಲಯಕ್ಕೆ ಬಂದು ಈ ರೀತಿ ತಮಾಷೆ ಮಾಡುತ್ತಾ ನಗುವುದರಲ್ಲಿ ಅರ್ಥವಿಲ್ಲ. ಇದು ನ್ಯಾಯಾಲಯದ ನಿಂದನೆ, ನಮಗೆಲ್ಲಾ ಶಿಕ್ಷೆಯಾಗಲೇಬೇಕು’ ಎಂದ.
ಜನರು ತ್ವರಿತವಾಗಿ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದರು. ನಂತರ ಸಮಾಧಾನಗೊಂಡ ಊಕಾ, ‘ನಾನು ನಿಮಗೆ ಶಿಕ್ಷೆ ವಿಧಿಸಲೇಬೇಕು. ಆದರೆ, ಒಂದು ವಿನಾಯಿತಿ ಕೊಡುತ್ತೇನೆ. ನೀವೆಲ್ಲರೂ ಒಂದುಹತ್ತಿಯ ಸುರುಳಿಯನ್ನು ಮೂರು ದಿನಗಳಲ್ಲಿ ತಂದು ಕೊಡಬೇಕು.ಇಲ್ಲವಾದರೆ ಜೈಲು ಖಚಿತ’ ಎಂದು ಹೇಳಿದ.
ಜನರು ತಂದುಕೊಟ್ಟ ಹತ್ತಿ ಸುರುಳಿಗಳಲ್ಲಿ ವ್ಯಾಪಾರಿಯದ್ದು ಯಾವುದು ಎಂಬುದು ಶೀಘ್ರದಲ್ಲೇ ತಪ್ಪೆಯಾಯಿತು. ಕಳ್ಳ ಸಿಕ್ಕಿ ಬಿದ್ದ. ವರ್ತಕನಿಗೆ ಅವನ ಹತ್ತಿ ಸುರುಳಿ ದಾಸ್ತಾನು ದೊರೆಯಿತು, ಜನರ ಹತ್ತಿ ಸುರುಳಿಗಳನ್ನು ವಾಪಸ್ ಕೊಡಲಾಯಿತು.
ಚೀನಾ ಕವಿತೆಯನ್ನು ಬರೆಯುವುದು ಹೇಗೆ?
ಪ್ರಸಿದ್ಧ ಜಪಾನಿ ಕವಿಯೊಬ್ಬರಿಗೆ, ಚೀನಾ ಕವಿತೆ ಬರೆಯುವುದು ಹೇಗೆ ಎಂದು ಪ್ರಶ್ನಿಸಲಾಯಿತು.
‘ಸಾಮಾನ್ಯವಾಗಿ ಚೀನಾ ಕವಿತೆಯಲ್ಲಿ ನಾಲ್ಕು ಸಾಲುಗಳಿರುತ್ತವೆ. ಮೊದಲನೆ ಸಾಲಿನಲ್ಲಿ ಆರಂಭದ ಉಲ್ಲೇಖ ಇರುತ್ತದೆ. ಎರಡನೆಯದರಲ್ಲಿ ಮೊದಲ ವಾಕ್ಯದ ಮುಂದುವರಿಕೆ. ಮೂರನೆಯದು ಹೊಸ ವಿಷಯಕ್ಕೆ ತಿರುಗುತ್ತದೆ. ಹಾಗೂ ನಾಲ್ಕನೆಯದು ಮೇಲಿನ ಎಲ್ಲಾ ಮೂರು ಸಾಲುಗಳನ್ನು ಸೇರಿಸುತ್ತದೆ.’
ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ, /ಕುಂದಾಪ್ರ ಡಾಟ್ ಕಾಂ/
‘ಕ್ಯೋಟೋದ ರೇಷ್ಮೆ ವ್ಯಾಪಾರಿಗೆ ಇದ್ದರು ಇಬ್ಬರು ಪುತ್ರಿಯರು
ಹಿರಿಯವಳಿಗೆ ಇಪ್ಪತ್ತು, ಕಿರಿಯವರಿಗೆ ಹದಿನೆಂಟು
ಸೈನಿಕನೊಬ್ಬ ಅವರನ್ನು ಕತ್ತಿಯಿಂದ ಇರಿಯಬಹುದು
ಆದರೆ, ಈ ಹುಡುಗಿಯರು ಅವನನ್ನು ಕಣ್ಣಿನಿಂದಲೇ ಕೊಲ್ಲಬಲ್ಲರು’
ಕೊನೆಗಾಲ
ಝೆನ್ ಗುರು ಇಕ್ಯೂ ಬಾಲಕರಿದ್ದಾಗಿನಿಂದಲೇ ಬಹಳ ಬುದ್ಧಿವಂತರು. ಅವರು ಗುರುಗಳ ಬಳಿ ಅಮೂಲ್ಯವಾದ ಪಿಂಗಾಣಿ ಚಹಾ ಲೋಟವೊಂದಿತ್ತು. ಅದು ಬಹುಮೂಲ್ಯ ಸಂಗ್ರಹವಾಗಿತ್ತು, ಗುರುಗಳಿಗೆ ಅಚ್ಚುಮೆಚ್ಚಿನದ್ದಾಗಿತ್ತು.
ಒಂದು ದಿನ ಇಕ್ಯು ಕೈ ಜಾರಿ ಪಿಂಗಾಣಿ ಲೋಟ ಒಡೆದು ಹೋಯಿತು. ಅದೇ ವೇಳೆ ಗುರು ಅಲ್ಲಿಗೆ ಬರುತ್ತಿರುವ ಹೆಜ್ಜೆ ಸದ್ದು ಕೇಳಿಸಿತು. ಒಡೆದ ಲೋಟದ ಚೂರುಗಳನ್ನು ಕೈಯಲ್ಲಿ ಮುಚ್ಚಿಟ್ಟುಕೊಂಡ ಇಕ್ಯು, ಗುರುಗಳ ಎದುರು ಹೋಗಿ ನಿಂತ.
‘ಜನರು ಸಾಯುವುದು ಏಕೆ?’ ಎಂದು ಇಕ್ಯು ಪ್ರಶ್ನಿಸಿದ.
‘ಅದು ಸಹಜ. ಪ್ರತಿಯೊಬ್ಬರೂ ಸಾಯಲೇಬೇಕು. ಅವರು ಸಾಯುವ ಕಾಲ ಬಂದೇ ಬರುತ್ತದೆ’ ಎಂದು ಗುರು ಉತ್ತರಿಸಿದರು.
ಆಗ ಒಡೆದ ಪಿಂಗಾಣಿ ಲೋಟವನ್ನು ತೋರಿಸಿದ ಇಕ್ಯು, ‘ನಿಮ್ಮ ಚಹಾ ಲೋಟದ ಕೊನೆಗಾಲ ಬಂದಿತ್ತು’ ಎಂದ./ಕುಂದಾಪ್ರ ಡಾಟ್ ಕಾಂ/
ಸಂಗ್ರಹ: ಶ್ರೀನಿವಾಸ್