ಕನಸು ಕಾಣುವ ಹುಡುಗಿ ಮಸಣಕ್ಕೆ ನಡೆದ ಕತೆ

Call us

Call us

Call us

Call us

ಎ.ಎಸ್.ಎನ್. ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ.
ಆಕೆಯ ಗಲ್ಲಗಳಲ್ಲಿ ಗುಲಾಬಿಯ ಬಣ್ಣವಿತ್ತು, ಮಾತಿನಲ್ಲಿ ಮಾರ್ದವತೆ ಇತ್ತು. ಆಕೆಯ ಕವಿತೆಗಳಲ್ಲಿ ಹೃದಯದ ಕರೆ ಇತ್ತು, ಕಲ್ಪನೆ ಇತ್ತು, ಕನಸಿತ್ತು. ಆಕೆಯ ಹೆಸರು ಮಧುಮಿತಾ ಶುಕ್ಲ. ಹುಟ್ಟೂರು ಉತ್ತರ ಪ್ರದೇಶದ ಲಖೀಂಪುರ. ಇದ್ದದ್ದು ರಾಜಧಾನಿ ಲಕ್ನೋದಲ್ಲಿ. ಕವಯಿತ್ರಿ ಹುಡುಗಿ ತುಂಬಾ ಮಾತುಗಾರ್ತಿ, ಸ್ಫುರದ್ರೂಪಿ. ರಾಜಕೀಯ ಪಕ್ಷಗಳ ಸಭೆಗಳಲ್ಲೂ ಈಕೆಯ ಭಾಷಣಗಳೆಂದರೆ ಆಹ್ಲಾದಕರ, ಪ್ರಚೋದಕ, ಕ್ರಾಂತಿಕಾರಕ. ತಂದೆ ಕಾಲವಾದ ನಂತರ ಕುಟುಂಬದ ಹೊಣೆ ಈ ಹದಿಹರೆಯದ ಹುಡುಗಿಯ ಎಳೆ ಹೆಗಲುಗಳ ಮೇಲೆ.

Call us

Click Here

Click here

ಆಗ, 1999ರ ಸಮಯ. ಉತ್ತರಪ್ರದೇಶದಲ್ಲಿ ಮಾಯಾವತಿ ಆಡಳಿತ. ಆಕೆಗೆ ವಿಧಾನ ಸಭೆಯಲ್ಲಿ ತನ್ನ ಶಕ್ತಿ ಪರೀಕ್ಷೆಯ ಸಂದರ್ಭ ನೆರವಾದ ಒಬ್ಬ ಶಾಸಕ ಗೋರಖ್‌ಪುರದ ಲೋಕತಾಂತ್ರಿಕ ಕಾಂಗ್ರೆಸ್ಸಿನ ರೌಡಿ ಹರಿಶಂಕರ ತಿವಾರಿ ಗ್ಯಾಂಗಿನ ಕ್ರಿಮಿನಲ್ ರಾಜಕಾರಣಿಗಳ ಗುಂಪಿಗೆ ಸೇರಿದ ಭುಜಬಲ ಪರಾಕ್ರಮಿ ಅಮರಮಣಿ ತ್ರಿಪಾಠಿ. ಈ ಅಮರಮಣಿ ಅಂತಿಂಥವನಲ್ಲ. ಪೋಲೀಸ್ ಠಾಣೆಯಲ್ಲಿ ‘ಎ’ ವರ್ಗದ ರೌಡಿ ಶೀಟ್ ಹೊಂದಿದವ. ಅವನ ಮೇಲೆ 5 ಕೊಲೆ ಅಪರಾಧಗಳ ಸಹಿತ 30ಕ್ಕೂ ಹೆಚ್ಚು ಕೇಸುಗಳಿದ್ದುವು. ಬಹುಶಃ ಅದೇ ಆತನ ಅರ್ಹತೆ ಇರಬೇಕು. ಗೂಂಡಾ ಅಂದರೆ ಗೂಂಡಾ. ಅವನಿಗೆ ಹೆದರದೇ ಇದ್ದವರಿಲ್ಲ. ಮುಂಚಿನ ಮುಖ್ಯಮಂತ್ರಿ ರಾಜನಾಥಸಿಂಗ್ ಸರಕಾರದಲ್ಲಿ ಮಂತ್ರಿಯಾಗಿದ್ದ ಈ ಅಮರಮಣಿ ತ್ರಿಪಾಠಿಯನ್ನು ಒಂದು ಅಪಹರಣ ಕೇಸಿನಲ್ಲಿ ಸಿಕ್ಕಿಬಿದ್ದ ಕಾರಣ ಕೈಬಿಡಲಾಗಿತ್ತು. ಮಂತ್ರಿಮಂಡಲಕ್ಕೆ ಈತನೇ ಲಾಯಕ್ಕು ಎಂದು ಮಾಯಾವತಿಗೆ ಕಂಡಿತು. ಅವನನ್ನು ಮಂತ್ರಿ ಮಾಡಿಯೇ ಬಿಟ್ಟಳು. ಅದೇ ಈ ಅಮರಮಣಿ ತ್ರಿಪಾಠಿಗೆ ಮುಳುವಾಗುತ್ತದೆಂದು ಆಕೆಯೂ ಭಾವಿಸಿರಲಿಲ್ಲ, ಆತನೂ ಎಣಿಸಿರಲಿಲ್ಲ.

ಕಣ್ಣಿಗೆ ಬಿದ್ದ ಹೆಣ್ಣು
ಮಂತ್ರಪಟ್ಟ ಏರಿದೊಡನೇ ಅಧಿಕಾರದ ಮದ, ಧನ ಮದ ತಲೆಗೇರಿಸಿಕೊಂಡ ಈ ಸೊಕ್ಕಿನ ಸಚಿವ ಅಮರಮಣಿ ತ್ರಿಪಾಠಿಯ ಕಣ್ಣು ಬಿದ್ದದ್ದು ಈ ಚಂದದ ಹುಡುಗಿ ಮಧುಮಿತಾ ಶುಕ್ಲಳ ಮೇಲೆ. ಸುಂದರವಾಗಿ ಕವಿತೆ ಬರೆದು ತುಂಬಿದ ಸಭೆಯಲ್ಲಿ ಹಾಡಿ ಚಪ್ಪಾಳೆ ಗಿಟ್ಟಿಸುತ್ತಿದ್ದ ಈ ಹುಡುಗಿಗೆ ಮಾರುಹೋಗಿಬಿಟ್ಟ ರಸಿಕ ಶಿಖಾಮಣಿ ಅಮರಮಣಿ. ಸ್ವತಹ ಸುಂದರ ಪುರುಷನಾದ ಈ ಅಮರಮಣಿ ತ್ರಿಪಾಠಿಗೆ ಹಗಲೂ ರಾತ್ರಿ ಈ ಹುಡುಗಿಯದೇ ಕನಸು. ಅವಳನ್ನು ಪಡೆಯಲು ಹಾತೊರೆದ. ಆಕೆ ಹೋದಲ್ಲಿ ಹೋದ. ಆಕೆಯ ಕವಿತೆಗಳನ್ನು ಕೇಳಿದ. ಚಪ್ಪಾಳೆ ತಟ್ಟಿದ. ಹರ್ಷೋದ್ಗಾರ ಮಾಡಿದ. ಅಂತೂ ಆಕೆಯ ಅಭಿಮಾನ ಗಳಿಸಿದ. ಆಕೆಗಾಗಿ ಅವಕಾಶಗಳನ್ನು ಕಲ್ಪಸಿದ. ಮದುವೆಯಾಗಿದ್ದು ಮನೆಯಲ್ಲಿ ಮುತ್ತಿನಂತಹ ಮಧುಮಣಿ ಎಂಬ ಹೆಂಡತಿ ಇದ್ದರೂ ಪರಸ್ತ್ರೀ ವ್ಯಾಮೋಹ ಸಹಜವಾಗಿತ್ತು ಈ ರಸಿಕ ಅಮರಮಣಿಗೆ. ಆತ ಒಬ್ಬ ಪ್ರಭಾವಿ ವ್ಯಕ್ತಿ, ಸಚಿವ, ರಸಿಕ, ಸುಂದರ. ಇಂತಹವನು ಒಲಿದು ಬಂದಾಗ ಮಧುಮಿತಾ ಶುಕ್ಲಾಗೂ ಆಕರ್ಷಣೆ ತಾನೇ ತಾನಾಗಿ ಉಂಟಾಯಿತು. ಅವನ ಸ್ನೇಹ ಆಕೆಗೆ ಹೊಸ ವೇದಿಕೆಗಳನ್ನು ಸೃಷ್ಠಿಸಿತು. ಅವನ ಪ್ರಭಾವ ಹೊಸ ಜನಪ್ರಿಯತೆ ತಂದಿತು. ಅವನ ಸಂಪರ್ಕ ಆಗಿದ್ದೇ ಆಗಿದ್ದು ಭಾರಿ ಬೇಡಿಕೆಯ ಕವಯಿತ್ರಿಯಾಗಿಬಿಟ್ಟಳು ಮಧುಮಿತಾ ಶುಕ್ಲ. ಎಲ್ಲಿ ನೋಡಿದರೂ ಅವಳ ಕಾವ್ಯವಾಚನ – ಪ್ರಚಂಡ ಕರತಾಡನ, ಜತೆಗೆ ಕೈ ತುಂಬಾ ಹಣ. ಬುಟ್ಟಿಗೆ ಬಿದ್ದೇ ಬಿಟ್ಟಿತು ಹೆಣ್ಣು. ಅಮರಮಣಿ ತ್ರಿಪಾಠಿ ಈ ರಸಬಾಳೆಯ ಹಣ್ಣನ್ನು ಮನಸಾರೆ ಸವಿದುಬಿಟ್ಟ. ಆಕೆಯ ಕವಿಗೋಷ್ಠಿ ಇದ್ದಲೆಲ್ಲ ಈತ ಜತೆಗಾರ. ಕೊನೆಗೆ ಆಕೆಯ ಕೋಣೆಯಲ್ಲೂ ಹಾಸಿಗೆಯಲ್ಲಿ ಈತ ಪಾಲುದಾರ.

ಪ್ರಣಯದ ಫಲ
ಇದೆಲ್ಲದರ ಫಲವಾಗಿ ಮಧುಮಿತಾ ಶುಕ್ಲ ಗರ್ಭ ಧರಿಸುತ್ತಾ ಹೋದಳು. ಅಮರಮಣಿ ತ್ರಿಪಾಠಿ ಗರ್ಭ ತೆಗೆಸುತ್ತಾ ಹೋದ. ಆದರೆ ಮೂರನೇ ಸಲ ಆಕೆ ಗರ್ಭ ಧರಿಸಿದಾಗ ಆಕೆಗೆ ಒಂದು ಮಗು ಬೇಕೇ ಬೇಕು ಅನ್ನಿಸಿತು. ಆತ ಬೇಡ ಎಂದ. ನಿನಗೆ ಬೇಡವಾದರೇನು, ನನಗಂತೂ ಬೇಕು ಎಂದಳು. ಈ ಹೊಯ್ದಾಟ, ಕಾದಾಟದಲ್ಲೇ ಮಗುವಿಗೆ ಆರು ತಿಂಗಳಾಗಿ ಬಿಟ್ಟಿತು. ಆರನೇ ತಿಂಗಳು ಆರಂಭವಾದಾಗ ಅಮರಮಣಿ ತ್ರಿಪಾಠಿಗೆ ಗಾಬರಿ ಶುರು. ಪರಿಣಾಮವಾಗಿ ಹೆಂಡತಿ ಮಧುಮಣಿಗೆ ವಿಷಯ ತಿಳಿಯಿತು. ಕ್ರೋಧೋನ್ಮತ್ತ ಹೆಂಡತಿ ಧಾವಿಸಿ ಬಂದದ್ದು ಮಧುಮಿತಾ ಶುಕ್ಲ ನಿವಾಸಕ್ಕೆ. ಆಕೆ ಚೀರಿದಳು, ಬೊಬ್ಬಿಟ್ಟಳು, ನನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಂಡೆಯಲ್ಲ, ನಿನ್ನನ್ನು ಹಾಗೇ ಬಿಡುವುದಿಲ್ಲ ಎಂದಳು. ಮಾರಾಮಾರಿ ಆಗುವುದೊಂದು ಬಾಕಿ. ಕುಂದಾಪ್ರ ಡಾಟ್ ಕಾಂ ಅಂಕಣ.

ಕನಸಿನಿಂದ ಮಸಣಕ್ಕೆ
2003 ಮೇ 9ನೇ ತಾರೀಕು. ಮಧುಮಿತಾ ಬದುಕಿನ ದುರ್ದಿನವದು. ಆಕೆಯ ರಿವರ್ ಬ್ಯಾಂಕ್ ನಿವಾಸಕ್ಕೆ ಇಬ್ಬರು ದುಷ್ಕರ್ಮಿಗಳು ನುಗ್ಗಿ ಬಂದರು. ಸೇವಕ ದೇಶರಾಜ್ ಅವರನ್ನು ಕಂಡಿದ್ದ. ಬಂದವರು ಹಿಂದೆ ಮುಂದೆ ನೋಡಲಿಲ್ಲ. ಅವರಿಗೆ ಸ್ಪಷ್ಟ ಆದೇಶ ಇತ್ತು. ಅವರು ಸುಪಾರಿ ಕಿಲ್ಲರ‍್ಸ್. ನಿರ್ದಯವಾಗಿ ಮಧುಮಿತಾಳ ದೇಹಕ್ಕೆ ಗುಂಡಿಕ್ಕಿದರು. ಆಕೆಯನ್ನು ಕೊಂದು ಹಾಕಿ ಪರಾರಿಯಾದರು. ಆಕೆಯ ಮೃತ ದೇಹ ಕಂಡ ದೇಶರಾಜ್ ಪೋಲೀಸರಿಗೆ ತಿಳಿಸಿದ. ಕೊಲೆ ಕೇಸು ರಿಜಿಸ್ಟರ್ ಮಾಡಿಕೊಂಡ ಪೋಲೀಸರು ಹಂತಕರಿಗಾಗಿ ಜಾಲಾಡತೊಡಗಿದರು. ಆಗ ಬಂದದ್ದು ಮಾಧ್ಯಮ. ಈ ಕೊಲೆಯ ಹಿಂದೆ ಪ್ರತಿಷ್ಠಿತರ ಕೈವಾಡ ಇದೆ, ಪೋಲೀಸರು ತನಿಖೆಯ ನಾಟಕವಾಡುತ್ತಿದ್ದಾರೆ ಎಂದು ಮಾಧ್ಯಮಗಳು ಹೇಳಿದುವು. ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡವು. ಅಮರಮಣಿ ತ್ರಿಪಾಠಿಯ ಮತ್ತು ಮಧುಮಿತಾಳ ಸ್ನೇಹ ಬಲ್ಲ ಮಾಧ್ಯಮದವರು, ನಾಯಕರುಗಳು ಆತನೇ ಕೊಲೆ ಮಾಡಿಸಿದ್ದು ಎಂದರು. ‘ನನಗೂ ಕೊಲೆಗೂ ಸಂಬಂಧವೇ ಇಲ್ಲ. ಬೇಕಾದರೆ ಸಿಬಿಐ ತನಿಖೆಯಾಗಲಿ’ ಎಂದುಬಿಟ್ಟ ಅಮರಮಣಿ. ಈ ಮಧ್ಯೆ ಮಧುಮಿತಾ ಆರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಗೊತ್ತಾಗುತ್ತಲೇ ತ್ರಿಪಾಠಿಯೇ ಕೊಲೆಯ ಸೂತ್ರಧಾರ ಎಂದು ಹುಯಿಲೆದ್ದಿತು. ಪತ್ರಿಕಾಗೋಷ್ಠಿಯಲ್ಲಿ ತ್ರಿಪಾಠಿಯನ್ನು ‘ನೀವು ಡಿಎನ್‌ಎ ಪರೀಕ್ಷೆಗೆ ಸಿದ್ಧರಿದ್ದೀರಾ?’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅಮರಮಣಿ ಉತ್ತರ ಕೊಡದೇ ಜಾರಿಕೊಂಡ.

Click here

Call us

Call us

Click Here

Visit Now

ಮಂತ್ರಿಮಂಡಲದಿಂದ ವಜಾ
ತ್ರಿಪಾಠಿಯನ್ನು ಸಂಪುಟದಿಂದ ವಜಾ ಮಾಡಲು ವಿಪಕ್ಷಗಳ, ಮಾಧ್ಯಮಗಳ ಒತ್ತಡ ಹೆಚ್ಚಿತು. ಗಂಡಾಂತರದ ಸೂಚನೆ ಸಿಕ್ಕಿದ ಮಾಯಾವತಿ ಅಮರಮಣಿ ತ್ರಿಪಾಠಿಯನ್ನು ಕೊನೆಗೂ ಸಂಪುಟದಿಂದ ಕೈ ಬಿಟ್ಟು ಪ್ರಕರಣವನ್ನು ರಾಜ್ಯ ಸಿಐಡಿಗೆ ಒಪ್ಪಿಸಿದಳು. ಒಂದು ತಿಂಗಳೊಳಗೆ ತನಿಖೆ ಮುಗಿಸಿ ವರದಿ ನೀಡಲು ತಾಕೀತು ಮಾಡಿದಳು. ಜತೆಗೆ ತ್ರಿಪಾಠಿ ತಪ್ಪಿತಸ್ಥನಲ್ಲವೆಂದು ವರದಿ ಬಂದರೆ ಆತನನ್ನು ಮರಳಿ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಸೂಚನೆಯನ್ನೂ ನೀಡಿದಳು. ಇವೆಲ್ಲದರಿಂದಾಗಿ ಸಿಐಡಿ ತನಿಖೆ ಮೇಲಿನ ಜನರ ವಿಶ್ವಾಸ ಹಾರಿ ಹೋಯಿತು. ಆದರೆ ಆಗಲೂ ನಿಷ್ಠ, ದಕ್ಷ ಪೋಲೀಸ್ ಅಧಿಕಾರಿಗಳಿದ್ದರು. ಮಧುಮಿತಾ ಶುಕ್ಲ ಶವ ಮೆರವಣಿಗೆಯನ್ನು ತಡೆದು ಹಿಂದಕ್ಕೆ ಒಯ್ದ ಪೋಲೀಸರು ಭ್ರೂಣದ ಡಿಎನ್‌ಎ ಪರೀಕ್ಷೆಗಾಗಿ ತಯಾರಿ ನಡೆಸಿದರು. ಅಷ್ಟರಲ್ಲಿ ಈ ನಿಷ್ಠ, ದಕ್ಷ ಪೋಲೀಸ್ ಅಧಿಕಾರಿಗಳನ್ನೆಲ್ಲ ಮಾಯಾವತಿ ವರ್ಗ ಮಾಡಿ ಬಿಟ್ಟಳು. ಅವರ ಸ್ಥಾನದಲ್ಲಿ ಅಮರಮಣಿಗೆ ನಿಷ್ಠರಾದವರನ್ನು ತಂದು ತುಂಬಿದಳು. ಮಧುಮಿತಾ ಶುಕ್ಲ ಮನೆಯಲ್ಲಿ ಪೋಲೀಸರಿಗೆ ಸಿಕ್ಕ ಎರಡು ಮೊಬೈಲ್ ಪೋನುಗಳು ಅದು ಹೇಗೋ ಅಮರಮಣಿ ತ್ರಿಪಾಠಿ ಕೈ ಸೇರಿ ಬಿಟ್ಟಿತು. ಕೊಲೆ ಪತ್ತೆಗೆ ಸಹಾಯವಾಗಬಲ್ಲ ಪೋನುಗಳು ’ಕೊಲೆಗಾರ’ನ ಕೈಗೆ ಹೇಗೆ ಹೋಯಿತೆಂಬ ಪ್ರಶ್ನೆಗೆ ಪೋಲೀಸರಲ್ಲಿ ಉತ್ತರವೇ ಇರಲಿಲ್ಲ.

ಆಗಿರದಿದ್ದ ಮದುವೆ
ಈ ಮಧ್ಯೆ ತನಗೂ ಕೊಲೆಗೂ, ಮಧುಮಿತಾಗೂ ಯಾವುದೇ ಸಂಬಂಧ ಇಲ್ಲ ಎಂದ ಅಮರಮಣಿ ತ್ರಿಪಾಠಿ ಇನ್ನೊಂದು ನಾಟಕ ಸೃಷ್ಠಿಸಿದ. ಈ ಮಧುಮಿತಾ ಆಗಲೇ ಅನುಜ್ ಎಂಬ ಯುವಕನನ್ನು ಮದುವೆಯಾಗಿ ಬಿಟ್ಟಿದ್ದಾಳೆ ಎಂಬ ಗಾಳಿ ಸುದ್ದಿ ಬಿಟ್ಟ. ‘ನಾನೇ ಆ ಮದುವೆ ಮಾಡಿಸಿದ್ದು’ ಎಂದು ಊದಿದ ಒಬ್ಬ ಪುರೋಹಿತ ಗಂಗಾ ನಾರಾಯಣ ದೀಕ್ಷಿತ. ನಿಶಿತ್‌ಗಂಜ್ ದೇವಾಲಯದಲ್ಲಿ ಈ ಮದುವೆ ನಡೆದಿತ್ತು ಎಂದ. ಪರಿಣಾಮವಾಗಿ ಪಾಪದ ಹುಡುಗ ಅನುಜ್ ಮಿಶ್ರಾನ ಹಾಸ್ಟೇಲ್ ಕೋಣೆಗೆ, ಹಳ್ಳಿಯ ಮನೆಗೆ ಪೋಲೀಸರು ದಾಳಿ ಮಾಡಿದರು. ‘ನನ್ನ ಹುಡುಗ ಮುಗ್ದ, ಆತ ವಿದ್ಯಾರ್ಥಿ. ಇಂತಹ ಘಟನೆ ನಡೆಯಲೇ ಇಲ್ಲ. ಇದೆಲ್ಲ ಒಂದು ಪಿತೂರಿ’ ಎಂದು ದೂರಿಕೊಂಡಳು ಅವನಮ್ಮ. ಪೋಲೀಸರಿಗೆ ಏನೂ ಸಿಕ್ಕಲಿಲ್ಲ. ಆದರೆ ತೀವ್ರ ತನಿಖೆಯಲ್ಲಿ ಆ ಪುರೋಹಿತನೇ ನಾನು ಹೇಳಿದ್ದೆಲ್ಲ ಸುಳ್ಳು ಎಂದು ಬೊಗಳಿದ. ಅಲ್ಲಿಗೆ ಮಧುಮಿತಾ ಶುಕ್ಲ ಕೊಲೆ ಪ್ರಕರಣದ ಹಾದಿ ತಪ್ಪಿಸುವ ಹುನ್ನಾರ ಬಯಲಿಗೆ ಬಂತು – ನಿಂತೂ ಹೋಯಿತು.

ಸಿಐಡಿಗಳಿಗೆ ಎತ್ತಂಗಡಿ
ಮಧುಮಿತಾ ಮನೆಯಲ್ಲಿನ ಡೈರಿ ಪೋಲೀಸರು ವಶಪಡಿಸಿಕೊಳ್ಳಲಿಲ್ಲ. ತ್ರಿಪಾಠಿಯನ್ನು ಪ್ರಶ್ನಿಸಲಿಲ್ಲ ಎಂದು ಪೋಲೀಸರ ಮೇಲೆ ಮಾಧ್ಯಮಗಳು ವಿಷ ಕಾರಿದುವು. ಈ ಮಧ್ಯೆ ಅಮರಮಣಿ ತ್ರಿಪಾಠಿಯ ರಕ್ತದೊಂದಿಗೆ ಭ್ರೂಣದ ರಕ್ತ ತಾಳೆ ನೋಡಲು ಹೈದರಾಬಾದಿಗೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದರು ಪೋಲೀಸರು. ಇದೇ ಸಂದರ್ಭ ಎಂದುಕೊಂಡ ಮಾಯಾವತಿ ಒಂದು ತಿಂಗಳೊಳಗೆ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳನ್ನೇ ಎತ್ತಂಗಡಿ ಮಾಡಿಬಿಟ್ಟಳು. ಮಧುಮಿತಾಳ ಸಹೋದರಿ ನಿಧಿ ಶುಕ್ಲ ನಿಷ್ಪಕ್ಷಪಾತ ತನಿಖೆಗಾಗಿ ಹೋರಾಟ ನಡೆಸಿದಳು, ಆಂದೋಲನ ಮಾಡಿದಳು. ಅಮರಮಣಿ ಕುಟುಂಬವೇ ಕೊಲೆಗೆ ಕಾರಣ ಎಂದು ದೂರಿದಳು. ಇದರಿಂದಾಗಿ ಶುಕ್ಲ ಕುಟುಂಬಕ್ಕೆ ಬೆದರಿಕೆ ಬಂದಿತು. ಸಾಕ್ಷಿಗಾರ ದೇಶರಾಜ್ ಜೀವಕ್ಕೂ ಅಪಾಯ ಬಂದಿತು. ಒಮ್ಮಿಂದೊಮ್ಮೆಲೇ ಆತ ಊರಿನಿಂದ ಮಾಯವಾದ. ಎಲ್ಲಿ ಈ ಸಾಕ್ಷಿಗಾರ ಎಂದು ಮಾಧ್ಯಮಗಳು ಬೊಬ್ಬಿಟ್ಟಾಗ ಹಳ್ಳಿಯ ಮನೆಯಲ್ಲಿ ಆತನನ್ನು ಪತ್ತೆ ಹಚ್ಚಿದರು ಪೋಲೀಸರು. ಇಂತಹ ಪ್ರಮುಖ ಸಾಕ್ಷಿಯನ್ನು ಊರಿಗೆ ಹೋಗಲು ಬಿಟ್ಟದ್ದಾದರೂ ಏಕೆ ಎಂದು ಪ್ರಶ್ನೆ ಬಂದಾಗ ಆತನನ್ನು ವಶಕ್ಕೆ ತೆಗೆದುಕೊಂಡ ಪೋಲಿಸರು ಅಜ್ಞಾತ ಸ್ಥಳವೊಂದರಲ್ಲಿಟ್ಟರು.

ಸಿಕ್ಕಿಬಿದ್ದ ಅಮರಮಣಿ
ಇವೆಲ್ಲ ತನ್ನ ರಾಜಕೀಯ ಪ್ರತಿಸ್ಪರ್ಧಿಗಳ ತಂತ್ರ ಎಂದು ಹೇಳಿಕೆ ನೀಡಿದ ಅಮರಮಣಿ ತ್ರಿಪಾಠಿ. ಆದರೆ ಮೇಲಿಂದ ಮೇಲೆ ಮಾಧ್ಯಮಗಳ ಮತ್ತು ವಿಪಕ್ಷಗಳ ಒತ್ತಡಕ್ಕೆ ಗುರಿಯಾದ ಮಾಯಾವತಿ ಕೊನೆಗೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಜಾರಿಕೊಂಡಳು. ಸಿಬಿಐ ತನಿಖೆಗೆ ಕೈಗೆತ್ತಿಕೊಳ್ಳುವಾಗಲೇ ಸಮಯ ಮೀರಿತ್ತು. ಮಧುಮಿತಾಳ ಮನೆಯಲ್ಲಿದ್ದ ಬೆರಳಚ್ಚುಗಳೆಲ್ಲ ಮಾಯವಾಗಿದ್ದುವು. ಈ ಕುರಿತು ಕೇಳಿದರೆ ಲಕ್ನೋ ಪೋಲೀಸರಿಂದ ಉತ್ತರವೇ ಇರಲಿಲ್ಲ. ಮಧುಮಿತಾ ಡೈರಿಯಲ್ಲಿ ಮತ್ತವಳ ಪತ್ರಗಳಲ್ಲಿ ಅಮರಮಣಿಯ ಅಕ್ರಮ ಸಂಬಂಧ ಬಯಲಾಗಿಬಿಟ್ಟತು. ಮೂರನೇ ಗರ್ಭ ಇರಿಸಿಕೊಳ್ಳುವ ಬಗ್ಗೆ ಆಕೆ ಬರೆದಿಟ್ಟ ಪತ್ರ ಸಿಬಿಐ ವಶಕ್ಕೆ ಬಂತು. ಮಧುಮಿತಾ ಮನೆಯಲ್ಲಿ ಅಮರಮಣಿಯ ಬಟ್ಟೆಬರೆ ಸಿಕ್ಕುವು. ಮಾತ್ರವಲ್ಲ ರೂ.೫೦,೦೦೦/- ಮೌಲ್ಯದ ರೈಲ್ವೆ ಕೂಪನ್ನುಗಳೂ ದೊರೆತವು. ಮಧುಮಿತಾಳಾ ಡಾಕ್ಟರ್ ಚೀಟಿಯಲ್ಲಿ ಅವಳನ್ನು ಶ್ರೀಮತಿ ಅಮರಮಣಿ ತ್ರಿಪಾಠಿ ಎಂದು ಬರೆಯಲಾಗಿತ್ತು. ಹಂತಕರನ್ನು ಕಂಡಿದ್ದ ದೇಶರಾಜ್ ನೀಡಿದ ವರ್ಣನೆಗಳ ಪ್ರಕಾರ ಸಿಬಿಐ ಕಲಾವಿದರು ರೇಖಾಚಿತ್ರ ಸಿದ್ದಪಡಿಸಿಕೊಟ್ಟಾಗ ಮಾಧ್ಯಮಗಳು ಅವನ್ನು ಪ್ರಕಟಿಸಿ ವ್ಯಾಪಕ ಪ್ರಚಾರ ನೀಡಿದುವು. ಪರಿಣಾಮವಾಗಿ ೨೦೦೩ ನವೆಂಬರ್‌ದಲ್ಲಿ ಪ್ರಮುಖ ಹಂತಕ ಸಂತೋಷ್ ರಾಯ್‌ನ ಬಂಧನವಾಯಿತು. ಆತ ನೀಡಿದ ಮಾಹಿತಿ ಮೇಲೆ ಅವನ ಸಂಗಡಿಗ ಪ್ರಕಾಶ್ಚಂದ್ರ ಪಾಂಡೆ ಕೂಡ ಸಿಕ್ಕಿಬಿದ್ದ. ಆತ ತೋರಿಸಿಕೊಟ್ಟ ಮಾರಾಕಾಸ್ತ್ರ ಗೋರಖಪುರದಲ್ಲಿ ಪತ್ತೆಯಾಯಿತು.

ಇದು ನಮ್ಮ ರಾಜಕಾರಣ
ಈ ಮಧ್ಯೆ ಬಹುಜನ ಸಮಾಜವಾದಿ ಪಕ್ಷ ತ್ರಿಪಾಠಿ ಮೇಲೆ ಏನೂ ಕ್ರಮ ಕೈಗೊಳ್ಳಲೇ ಇಲ್ಲ. ವಿಪಕ್ಷಗಳ ಒತ್ತಡದಿಂದಷ್ಟೇ ಆತನನ್ನು ಮಂತ್ರಿಮಂಡಲದಿಂದ ಮಾಯಾವತಿ ಕೈಬಿಡಬೇಕಾಗಿ ಬಂತು ಎಂದು ಹೇಳಿಬಿಟ್ಟರು. ಆದರೆ ಅಮರಮಣಿ ಅಳುಕಿಲ್ಲದೆ ಬಿಎಸ್‌ಪಿ ಬಿಟ್ಟು ಮುಲಾಯಂ ಸಿಂಗ್ ಯಾದವ್‌ನ ಸಮಾಜವಾದಿ ಪಕ್ಷ ಸೇರಿಬಿಟ್ಟ. ಮುಲಾಯಂ ಯಾವುದೇ ಮುಲಾಜಿಲ್ಲದೆ ಈ ಕ್ರಿಮಿನಲ್‌ನನ್ನು ಸೇರಿಸಿಕೊಂಡುಬಿಟ್ಟ. ಮಾಯಾವತಿ ಸರಕಾರ ಹೋಗಿ ಮುಲಾಯಂರ ಸಮ್ಮಿಶ್ರ ಸರಕಾರ ಬಂದಿತು. ಹಾಗಾಗಿ ಅಮರಮಣಿಗೆ ಕೊಬ್ಬು. ತನ್ನನ್ನೇನೂ ಮಾಡುವುದಿಲ್ಲ ಎಂತ. ಮಾಧ್ಯಮಗಳ ಟೀಕೆ ಬಂದಾಗ ಸಮಾಜವಾದಿ ಪಕ್ಷ ಹೇಳಿತು. ‘ಆತ ನಮ್ಮ ಪಕ್ಷ ಸೇರಿದ ಮೇಲೆ ಏನೂ ಅಪರಾಧ ಮಾಡಿಲ್ಲವಲ್ಲ – ಹಾಗಾಗಿ ಅವನ ಮೇಲೆ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಬರುವುದಿಲ್ಲ’.

ಸಿಬಿಐ ಬಲೆಗೆ ಗಂಡ – ಹೆಂಡತಿ
ಸಿಬಿಐ ಮಧುಮಿತಾಳ ಮತ್ತು ಅಮರಮಣಿಯ ಟೆಲಿಪೋನ್ ಕರೆಗಳ ಪ್ರಿಂಟ್‌ಔಟ್ ತರಿಸಿಕೊಂಡಿತು. ಕೊಲೆಯ ಮೂರು ದಿನಗಳ ಅವಧಿಯಲ್ಲಿ ಅವರಿಬ್ಬರೂ ಪರಸ್ಪರ ಮೂವತ್ತೈದು ಕರೆಗಳನ್ನು ಮಾಡಿರುವುದು ಅದರಿಂದ ಪತ್ತೆಯಾಯಿತು. ಆದರೂ ತ್ರಿಪಾಠಿ ಬಲಿಷ್ಠ. ಅವನನ್ನು ಬಂಧಿಸಬೇಕಾದರೆ ಬಲವಾದ ಸಾಕ್ಷಿಯೇ ಬೇಕು. ಅದಕ್ಕಾಗಿ ಸಿಬಿಐ ಕಾತರದಿಂದ ಕಾಯುತ್ತಿತ್ತು. ಕೊನೆಗೂ ಹೈದರಾಬಾದಿನ ವಿಧಿವಿಜ್ಞಾನ ಕೇಂದ್ರದಿಂದ ವರದಿ ಬಂತು. ಭ್ರೂಣದ ರಕ್ತಕ್ಕೂ ಅಮರಮಣಿ ತ್ರಿಪಾಠಿ ರಕ್ತಕ್ಕೂ ತಾಳೆಯಿದೆ ಎಂದಿತು. ಅದು ಬಂದದ್ದೇ ತಡ ಬಲಿಷ್ಠ ತ್ರಿಪಾಠಿಯನ್ನು ಸಿಬಿಐ ಕಬಂಧ ಬಾಹುಗಳು ಬಂಧಿಸಿಬಿಟ್ಟುವು. ಆದರೂ ಜಾಮಿನಿನ ಮೇಲೆ ಹೊರಬಂದುಬಿಟ್ಟ ಅಮರಮಣಿ. ಇನ್ನುಳಿದದ್ದು ಮಧುಮಣಿ. ಆತನ ಮುದ್ದಿನ ಮಡದಿ. ಕೊಲೆಗೆ ಪ್ರಚೋದನೆಯೇ ಆಕೆಯದು. ಸುಪಾರಿ ಕೊಟ್ಟವಳೇ ಆಕೆ. ರೂ. 2 ಲಕ್ಷ ಆಮಿಷ ತೋರಿ ಕೊಲೆ ಮಾಡಿಸಿದವಳು. ಕಾನೂನಿನ ಕರಾಳ ಹಸ್ತ ತನ್ನತ್ತ ಚಾಚುತ್ತಿರುವುದನ್ನು ಕಂಡು ಭಯಗೊಂಡ ಮಧುಮಣಿ ಪ್ರತಿಕ್ಷಾ ಜಾಮೀನಿಗಾಗಿ ಕೋರ್ಟಿನಿಂದ ಕೋರ್ಟಿಗೆ ಅಲೆದಳು. ಕೊನೆಗೂ ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠದಿಂದ ಶರ್ತಬದ್ಧ ಜಾಮೀನು ಪಡೆದಳು. ಅಲ್ಲಿಯ ತನಕ ತಲೆ ತಪ್ಪಿಸಿಕೊಂಡೇ ಇದ್ದ ಈ ಮಧುಮಣಿ ಕೊನೆಗೂ ನ್ಯಾಯಾಲಯದೆದುರು ಹಾಜರಾಗಿ ಬಂಧನಕ್ಕೊಳಗಾದರೂ ಜಾಮೀನು ಬಿಡುಗಡೆ ಪಡೆದಳು. ಕುಂದಾಪ್ರ ಡಾಟ್ ಕಾಂ ಅಂಕಣ.

ಮಾಡಿದ್ದುಣ್ಣೋ ಮಾರಾಯ
ಮಧುಮಿತಾ ಕೊಲೆಗಾಗಿ 2003 ದಶಂಬರ್ 19ರಂದು ಇವರೆಲ್ಲರ ಮೇಲೆ ಚಾರ್ಜ್ ಶೀಟ್ ಬಿತ್ತು. ಪ್ರಕರಣದ ತನಿಖೆ ಉತ್ತರಪ್ರದೇಶದಲ್ಲಿ ನಡೆದರೆ ಅಮರಮಣಿ ಪ್ರಭಾವದಿಂದ ಸಾಕ್ಷಿಗಳಿಗೆ ಗಂಡಾಂತರವಿದೆ ಎಂದು ನಿಧಿಶುಕ್ಲ ಮಾಡಿದ ಮನವಿಗೆ ಓಗೊಟ್ಟ ಸುಪ್ರೀಂ ಕೋರ್ಟು ತನಿಖೆಯನ್ನು ಡೆಹ್ರಾಡೂನಿನ ಸಿಬಿಐ ಕೋರ್ಟಿಗೆ ವರ್ಗಾಯಿಸಿತು. ಭರದಿಂದ ತನಿಖೆ ನಡೆಯಿತು. 79 ಸಾಕ್ಷಿಗಾರರನ್ನು ವಿಚಾರಣೆ ಮಾಡಲಾಯಿತು. ಅವರಲ್ಲಿ ಇಬ್ಬರು ಸಚಿವರು, ಒಬ್ಬ ಮಾಜಿ ಶಾಸಕ, ಒಬ್ಬ ಎಮ್.ಎಲ್.ಸಿ., ಮೂವರು ಐಪಿಎಸ್ ಅಧಿಕಾರಿಗಳು, ಓರ್ವ ಐಎಎಸ್ ಅಧಿಕಾರಿ, ಹಲಮಂದಿ ಪತ್ರಕರ್ತರೂ ಇದ್ದರು. ಪ್ರಮುಖ ಸಾಕ್ಷಿಗಾರರಾಗಿ ದೇಶರಾಜ್ ಮತ್ತು ನಿಧಿಶುಕ್ಲ ಕಟಕಟೆ ಏರಿ ಹೇಳಿಕೆ ನೀಡಿದರು. ಮಾಧ್ಯಮ ಕೈಗೆತ್ತಿಗೊಂಡ ಪ್ರಕರಣವಾದ ಕಾರಣ ತನಿಖೆಗೂ, ಫಲಿತಾಂಶಕ್ಕೂ ಭಾರೀ ನಿರೀಕ್ಷೆ ಇತ್ತು. ಅಮರಮಣಿ – ಮಧುಮಿತಾ ಪ್ರಣಯ ಪ್ರಸಂಗ, ಅನೈತಿಕ ಸಂಬಂಧ, ಗರ್ಭಸ್ರಾವ, ಮತ್ತೆ ಗರ್ಭ, ಮಧುಮಣಿ ರೇಗಾಟ, ಗರ್ಭ ತೆಗೆಸಲು ಅಮರಮಣಿ ಯತ್ನ, ಅಂತಿಮವಾಗಿ ಇವರೆಲ್ಲರ ಪಿತೂರಿಯಿಂದ ಬಾಡಿಗೆ ಕೊಲೆಗಾರರಿಂದ ಮಧುಮಿತಾ ಹತ್ಯೆ ಎಲ್ಲವೂ ನ್ಯಾಯಾಲಯದಲ್ಲಿ ರುಜುವಾತಾಗಿ ಹೋದುವು. ಇಷ್ಟೆಲ್ಲಾ ಆಗುವಾಗ ನಾಲ್ಕು ವರ್ಷ ಕಳೆದಿತ್ತು. 2007 ಅಕ್ಟೋಬರ್ 24ರಂದು ನ್ಯಾಯಾಧೀಶರು ಪಾಂಡೆಯೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ತಪ್ಪಿತಸ್ಥರೆಂದು ತೀರ್ಮಾನಿಸಿದರು. ಅಮರಮಣಿಗೆ, ಮಧುಮಣಿಗೆ, ಅವರ ಸಂಬಂಧಿ ರೋಹಿತ್ ಚತುರ್ವೇದಿಗೆ ಮತ್ತು ಬಾಡಿಗೆ ಹಂತಕ ಸಂತೋಷ್ ರಾಯ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ’ಇವರನ್ನೆಲ್ಲ ನೇಣು ಹಾಕಿಸಿ ಸಾಯಿಸಬೇಕಿತ್ತು’ ಎಂದರು ಮಧುಮಿತಾ ಮನೆಯವರು. ಗಲ್ಲುಶಿಕ್ಷೆಯನ್ನೇ ಕೇಳಿದ್ದರು ಸಿಬಿಐ ವಕೀಲರು. ಆದರೆ ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಲ್ಲವಾದ ಕಾರಣ ಗಲ್ಲುಶಿಕ್ಷೆ ಬೇಡ ಎಂದಿತು ನ್ಯಾಯಾಲಯ.

ಇದೀಗ ಅಪೀಲಿನ ಸರತಿ
ಆರೋಪಿಗಳನ್ನು ತಕ್ಷಣ ಬಂಧಿಸಿ ಜೈಲಿನಲ್ಲಿಡಲಾಯಿತು. ಅಮರಮಣಿ – ಮಧುಮಣಿ ದಂಪತಿ ಬಂದೀಖಾನೆಯಲ್ಲಿ ಕೊಳೆಯಬೇಕಾಗಿ ಬಂತು. ಹೈಕೋರ್ಟಿನಲ್ಲಿ ಅಪೀಲು ಸಲ್ಲಿಸಿದ ಈ ಗಂಡ ಹೆಂಡತಿ ದಾಖಲಿಸಿದ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟು ತಿರಸ್ಕರಿಸಿತು. ಅದರ ಮೇಲೆ ಸುಪ್ರೀಂ ಕೋರ್ಟಿಗೆ ಅಪೀಲು ಹೋದ ಈ ದಂಪತಿಯ ಅರ್ಜಿಗಳು ನಿರರ್ಥಕವಾದುವು. ಅರ್ಜಿಗಳನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ ಆದಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸಲು ಹೈಕೋರ್ಟಿಗೆ ಸೂಚಿಸಿತು. ಆದರೆ ಜೈಲಿನಲ್ಲಿದ್ದರೂ ಈ ಮಾಜಿ ಮಂತ್ರಿ ಐಷಾರಾಮ ಜೀವನ ನಡೆಸುತ್ತಿದ್ದಾನೆಂದು ಗುಲ್ಲೆದ್ದಿತು. ಕುಂದಾಪ್ರ ಡಾಟ್ ಕಾಂ ಅಂಕಣ.

ಈ ಮಧ್ಯೆ ಏಕೈಕ ಪ್ರತ್ಯಕ್ಷದರ್ಶಿ ಸಾಕ್ಷಿ ದೇಶರಾಜ್‌ನನ್ನು ಮುಗಿಸಲು 2008ರಲ್ಲಿ ಆತನ ಹಳ್ಳಿಯಲ್ಲೇ ಕೊಲೆ ಯತ್ನ ನಡೆಯಿತು. ಆತನ ಮೇಲೆ ಗುಂಡು ಹಾರಿಸಲಾಯಿತು. ಆದರೆ ಆತ ತಪ್ಪಿಕೊಂಡು ಬಚಾವಾದ. ಅವನ ಮೇಲೆ ಹಲ್ಲೆ ನಡೆಸಿ ಬಿಟ್ಟರು. ಸರಕಾರ ಈ ಸಾಕ್ಷಿಗೆ ಭದ್ರತೆ ಒದಗಿಸಿದ್ದರೂ ಮನೆಯಿಂದ ಭದ್ರತೆ ಸಹಿತ ಹೊರಟಿರುವಾಗಲೇ ಈ ಘಟನೆ ನಡೆದಿತ್ತು. 2009 ಜೂನ್‌ನಲ್ಲಿ ಹಂತಕ ಸಂತೋಷ್ ರಾಯ್‌ನನ್ನು ಗೋರಖಪುರ ನ್ಯಾಯಾಲಯಕ್ಕೆ ಬೇರೊಂದು ಕ್ರಿಮಿನಲ್ ಪ್ರಕರಣದಲ್ಲಿ ಹಾಜರುಪಡಿಸಿ ರೋಶನಾಬಾದ್ ಜೈಲಿಗೆ ವಾಪಾಸು ಕೊಂಡೊಯ್ಯುವಾಗ ಆತ ರೈಲಿನಿಂದ ಹಾರಿ ತಪ್ಪಿಸಿಕೊಳ್ಳಲೆತ್ನಿಸಿದ. ರೈಲು ಲಕ್ಸರ್ ನಿಲ್ದಾಣ ತಲುಪಿದಾಗ ಮಾಮೂಲಿ ಸಬೂಬು ‘ಶೌಚಾಲಯಕ್ಕೆ ಹೋಗಬೇಕು’ ಎಂದು ಹೇಳಿದವನು ಅಲ್ಲಿಗೆ ಹೋಗುವ ಬದಲು ಪೋಲೀಸರ ಕಣ್ಣೆದುರಲ್ಲೇ ಕೆಳಕ್ಕೆ ಹಾರಿ ಓಡಿಬಿಟ್ಟ. ಆದರೆ ಕಾನ್‌ಸ್ಟೇಬಲ್ ಹೀರಾಸಿಂಗ್ ಎಂಬಾತ ತಕ್ಷಣ ಆತನ ಹಿಂದೆ ನೆಗೆದು ಮತ್ತೆ ಅವನನ್ನು ಹಿಡಿದುಕೊಂಡು ಬಂದ.

ಮಧುಮಿತಾ ಶುಕ್ಲ ಎಂಬ ಕನಸಿನ ಹುಡುಗಿ ಮಸಣದ ಹಾದಿ ಹಿಡಿದ ಈ ಕತೆ ಸೆನ್ಸೇಶನಲ್ ಪ್ರಕರಣವಾಗಿ ಒಂದು ಘಟ್ಟದಲ್ಲಿ ಮುಕ್ತಾಯಗೊಂಡರೂ ಇನ್ನೊಂದು ಘಟ್ಟದಲ್ಲಿ ಇನ್ನೂ ತನಿಖೆಗೆ ಬಾಕಿ ಇದೆ.

Leave a Reply

Your email address will not be published. Required fields are marked *

18 + eighteen =