ಕುಂದಾಪುರ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ ಕೊಡಮಾಡುವ ಪ್ರತಿಷ್ಠಿತ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಗೆ ಯುವ ಪತ್ರಕರ್ತ, ಕುಂದಾಪ್ರ ಡಾಟ್ ಕಾಂ ವೆಬ್ ಪೋರ್ಟೆಲ್ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಭಾಜನರಾಗಿದ್ದಾರೆ.
ಗ್ರಾಮೀಣ ಪ್ರದೇಶವನ್ನೇ ಕೇಂದ್ರವಾಗಿಟ್ಟುಕೊಂಡು ಪತ್ರಿಕೋದ್ಯಮದ ಹೊಸ ಆಯಾಮಕ್ಕೆ ಮುನ್ನುಡಿ ಬರೆದು ಕುಂದಾಪ್ರ ಡಾಟ್ ಕಾಂ ವೆಬ್ ಪೋರ್ಟೆಲ್ ಮೂಲಕ ಕುಂದಾಪುರ ತಾಲೂಕಿನ ಸಮಗ್ರ ಚಿತ್ರಣವನ್ನು ಒದಗಿಸಿ ಕುಂದನಾಡು ಹಾಗೂ ಭಾಷೆಗೆ ತನ್ನದೇ ಆದ ಕೊಡುಗೆ ನೀಡುತ್ತಾ ವೆಬ್ ಪತ್ರಿಕೋದ್ಯಮಿಯಾಗಿರುವುದಲ್ಲದೇ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಲಾಗುತ್ತಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯನ್ನು ಆರಂಭಿಸಿದ್ದ ಸುನಿಲ್ ಅವರ ಬರಹಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಪಿಯುಸಿ ದಿನಗಳಲ್ಲಿ ’ಕರಾವಳಿ ಧ್ವನಿ’ ಪತ್ರಿಕೆಯ ಬೈಂದೂರು ಭಾಗದ ವರದಿಗಾರರಾಗಿ ಪತ್ರಿಕೋದ್ಯಮ ಪ್ರವೇಶ ಮಾಡಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಬೈಂದೂರನ್ನು ಸಮಗ್ರವಾಗಿ ಪರಿಚಯಿಸುವ ’ಬೈಂದೂರು ಡೈರೆಕ್ಟರಿ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ’ಸ್ನೇಹತರಂಗ ಬೈಂದೂರು’ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2009ರಲ್ಲಿ ನಡೆದ ೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ, 2014ರಲ್ಲಿ ’ಆದಿ ಗ್ರಾಮೋತ್ಸವ ಯುವ ಗೌರವ’ ಪುರಸ್ಕಾರ ಸೇರಿದಂತೆ ಇತರೆ ಗೌರವ, ಸನ್ಮಾನಗಳು ಸಂದಿವೆ. ಎಂ.ಕಾಂ ಸ್ನಾತಕೋತ್ತರ ಪದವೀಧರರಾಗಿರುವ ಸುನಿಲ್, ಗಣೇಶ್ ಹೊಸನಗರ ಹಾಗೂ ಸುಲೋಚನಾ ದಂಪತಿಗಳ ಪುತ್ರರಾಗಿರುತ್ತಾರೆ.
ಮನಪೂರ್ವಕ ಅಭಿನಂದನೆಗಳು. ನಿಮ್ಮ ಯಶಸ್ವಿ ಹಾದಿ ಹೀಗೆಯೇ ಮುಂದುವರಿಯಲಿ – ಕುಂದಾಪ್ರ ಡಾಟ್ ಕಾಂ ಬಳಗ