ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬೇಳೂರು ಮೊಗೆಬೆಟ್ಟು ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವರದಿಗೆಂದು ತೆರಳಿದ್ದ ಪತ್ರಕರ್ತರ ಮೇಲೆ ಕಲ್ಲುಕೋರೆಯ ಮಾಲಕರು ಹಲ್ಲೆ ನಡೆಸಿ, ಕ್ಯಾಮರಾ, ಮೊಬೈಲ್‌ಗಳನ್ನು ಪುಡಿಗೈದ ಘಟನೆ ಬುಧವಾರ ನಡೆದಿದೆ.
ಘಟನೆಯ ವಿವರ:
ಕಳೆದ ಕೆಲವು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೆನ್ನಲಾದ ಬೇಳೂರು ಸಮೀಪದ ಮೊಗೆಬೆಟ್ಟು ಎಂಬಲ್ಲಿನ ಕಲ್ಲುಕೋರೆ ಬಗ್ಗೆ ವರದಿ ಮಾಡಲು ಸ್ವಂದನ ವಾಹಿನಿಯ ಪ್ರತಿನಿಧಿ ರಾಜೇಶ್ ಕುಂದಾಪುರ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಗಣೇಶ್ ಸೈಬರ್‌ಕಟ್ಟೆ ತೆರಳಿದ್ದಾಗ ಕಲ್ಲುಕೋರೆಯ ಮಾಲಿಕರು, ಸ್ಥಳಿಯ ಕೆಲವರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಾಜೇಶ್ ಬಳಿಯಿದ್ದ ಕ್ಯಾಮರಾ, ಮೊಬೈಲ್‌ಗಳನ್ನು ಕಸಿದುಕೊಂಡು ಪುಡಿಗೈದಿರುವುದಲ್ಲದೇ, ಸಿಮ್ ತೆಗೆದಿರಿಸಿಕೊಂಡಿದ್ದಲ್ಲದೇ ಜೀವಬೆದರಿಕೆ ಹಾಕಿದ್ದರೆನ್ನಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ರತ್ನಾಕರ ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಮಧುಕರ ಶೆಟ್ಟಿ ಎಂಬುವವರ ವಿರುದ್ಧ ಹಲ್ಲೆ, ಸ್ವತ್ತು ನಾಶ ಹಾಗೂ ಕರ್ತವ್ಯಕ್ಕೆ ಅಡ್ಡಿಯ ದೂರು ದಾಖಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ ವಲಯ ಪತ್ರಕರ್ತರ ಸಂಘ ಹಾಗೂ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಘಟನೆಯನ್ನು ಖಂಡಿಸಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/