ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹಿಂದಿನ ಸಾಮಾನ್ಯ ಸಭೆಯನ್ನು ರದ್ದು ಮಾಡಲಾಗಿತ್ತೇ? ವಿಶೇಷ ಸಾಮಾನ್ಯ ಕರೆಯುವ ಬಗ್ಗೆ ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ ಏಕೆ? ಹೀಗೆ ವಿರೋಧ ಪಕ್ಷದ ಪ್ರಶ್ನೆಯಿಂದ ಆರಂಭಗೊಂಡ ಗದ್ದಲ ಸಭೆಯ ಅರ್ಧ ಅವಧಿಯನ್ನು ನುಂಗಿಹಾಕಿತ್ತು. ಕೆಲವು ಸದಸ್ಯರು ತಮ್ಮ ಘನತೆಯನ್ನೂ ಮರೆತು ತೀರಾ ವೈಯಕ್ತಿಕವಾಗಿ ನಿಂದಿಸಿಕೊಳ್ಳುವ ಪ್ರಸಂಗವೂ ನಡೆದು ಅಭಿವೃದ್ಧಿಯ ಚರ್ಚೆಯ ಹೊರತಾಗಿ ವೈಯಕ್ತಿಕ ಸಮರ ಏರ್ಪಟ್ಟಿತ್ತು.
ಇದು ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಪ್ರಮುಖ ಚಿತ್ರಣ.
ಹಿಂದಿನ ಸಭೆ ನಂತರ ವಿಶೇಷ ಸಭೆ ಕರೆಯುವಂತೆ ಪತ್ರಕೊಟ್ಟಿದ್ದರೂ ಅದಕ್ಕೆ ಉತ್ತರ ನೀಡಿಲ್ಲ. ವಿರೋಧ ಪಕ್ಷದ ಮಾತಿಗೆ ಕಿಮ್ಮತ್ತಿಲ್ಲವಾ. ನಮ್ಮ ಪ್ರಶ್ನೆಗೆ ಉತ್ತರ ಬೇಕು ಎಂದು ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ್ ರವಿಕಲಾ ಗಣೇಶ್ ಶೇರಿಗಾರ್, ಪ್ರಭಾಕರ ಕೋಡಿ ಒತ್ತಾಯಿಸಿದರು. ಮೂರು ದಿನದೊಳಗೆ ಸದಸ್ಯರ ಪ್ರಶ್ನೆಗ ಉತ್ತರ ಕೊಡುತ್ತೇನೆ ಎಂದು ಅಧ್ಯಕ್ಷರು ಭರವಸೆ ನೀಡಿದರಾದರೂ ಈಗಲೇ ಹಿಂಬರಹ ನೀಡಬೇಕೆಂದು ಪಟ್ಟು ಹಿಡಿದರು.
ಫೆರ್ರಿ ವಾರ್ಡ್ ಸದಸ್ಯೆ ಕೆ. ಪುಷ್ಪಾ ಶೇಟ್ ವಿಷಯ ಪ್ರಸ್ತಾಪಿಸಿ, ಫೆರ್ರಿ ವಾರ್ಡ್ ಉದ್ಯಾನವನ ಪಕ್ಕದಲ್ಲಿ ತ್ಯಾಜ್ಯ ಕಂನ್ಟೈನರ್ ಇರಿಸಿದ್ದರಿಂದ ಉದ್ಯಾನವನಕ್ಕೆ ಬರುವವರಿಗೆ ಸಮಸ್ಯೆ ಜೊತೆ ಪರಿಸರ ಮಾಲಿನ್ಯ ಆಗುತ್ತಿದೆ. ತ್ಯಾಜ್ಯ ಕಂನ್ಟೈನರ್ ತೆರವು ಮಾಡುವ ಮೂಲಕ ಸಮಸ್ಯೆ ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರು.
ಫೆರ್ರಿ ವಾರ್ಡ್‌ನಲ್ಲಿ ತ್ಯಾಜ್ಯ ಡಂಪ್ ಮಾಡದೆ ಕಸ ಡಂಪ್ ಮಾಡಿ ನಂತರ, ಸಾಗಿಸಲಾಗುತ್ತದೆ. ಇದರಿಂದ ಸಮಯ, ಇಂಧನ ಶ್ರಮ ಉಳಿತಾಯ ಆಗುತ್ತಿದೆ. ಹಿಂದೆ ಡಂಪ್ ಮಾಡುತ್ತಿದ್ದ ಸಂಗಮ ಪರಿಸರದಲ್ಲಿ ತ್ಯಾಜ್ಯ ಡಂಪಿಂಗ್ ವಿಷಯ ನ್ಯಾಯಾಲದಲ್ಲಿದ್ದು, ಅಲ್ಲಿ ಡಂಪ್ ಮಾಡಲು ಸಾಧ್ಯವಿಲ್ಲ. ಪುರಸಭೆ ಎಲ್ಲಾ ಸದಸ್ಯರು ಸ್ಥಳ ಸೂಚಿಸಿದರೆ ಅಲ್ಲಿ ಡಂಪಿಂಗ್ ಮಾಡಲು ಅಡ್ಡಿಯಿಲ್ಲ ಎಂಬ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರ ಸಮಾಧಾನ ತರಲಿಲ್ಲ.
ಸಂಗಮ್ ಪರಿಸರದಿಂದ ತ್ಯಾಜ್ಯ ಡಂಪ್ ಮಾಡುವ ಕಾನ್ಟೈರ್ ಫೆರ್ರಿ ವಾರ್ಡ್ ಉದ್ಯಾನವನ ಪಕ್ಕ ಇಡಬೇಕಿದ್ದರೆ ಪುರಸಭೆ ಎಲ್ಲಾ ವಾರ್ಡ್ ಸದಸ್ಯರ ಸಲಹೆ ಕೇಳಲಾಗಿತ್ತಾ? ಫೆರ್ರಿ ವಾರ್ಡ್ ಉದ್ಯಾಮನವ ವನ ಅಭಿವೃದ್ಧಿಗೆ ಕಾದಿರಿಸಿದ ಜಾಗದಲ್ಲಿ ತ್ಯಾಜ್ಯ ಡಂಪ್ ಮಾಡುವುದು ತರವಲ್ಲ. ತ್ಯಾಜ್ಯ ಡಂಪ್ ಮಾಡುವುದರಿಂದ ಪರಿಸರದ ನಿವಾಸಿಗಳಿಗೂ ಸಮಸ್ಯೆ ಆಗುತ್ತದೆ. ಕಳೆದ ಆರು ತಿಂಗಳಿಂದ ತ್ಯಾಜ್ಯ ಡಂಪ್ ಬಗ್ಗೆ ಮಾತನಾಡುತ್ತಿದ್ದರೂ ಸಮಸ್ಯೆ ಪರಿಹಾರ ಆಗಿಲ್ಲ ತ್ಯಾಜ್ಯ ಡಂಪ್ ತೊಟ್ಟ ಸ್ಥಳಾಂತರಕ್ಕೆ ನಿರ್ಣಯ ಮಾಡುವಂತೆ ಒತ್ತಾಯಿಸಿದರು.
ಇವರ ಮಾತಿಗೆ ಪೂರಕವಾಗಿ ಪ್ರತಿಕ್ರಿಸಿದ ಸದಸ್ಯ ಶ್ರೀಧರ್ ಮೀನು ಮಾರುಕಟ್ಟೆಯಲ್ಲೂ ತ್ಯಾಜ್ಯ ಡಂಪ್ ತೊಟ್ಟಿಯಿದ್ದು, ತ್ಯಾಜ್ಯ ನೀರು ಕೂಡಾ ಬಿಡಲಾಗುತ್ತದೆ. ಮೀನು ಮಾರುಕಟ್ಟೆ ತೊಟ್ಟಿ ಕೂಡಾ ತೆರವು ಮಾಡುವಂತೆ ಒತ್ತಾಯಿಸಿದರು. ಪುರಸಭೆ ಸದಸ್ಯರಾದ ಮೋಹನದಾಸ್ ಶೆಣೈ ಹಾಗೂ ಸತೀಶ್ ಕೂಡಾ ಪುಪ್ಪಾ ಶೇಟ್ ವಾದ ಸಮರ್ಥಿಸಿಕೊಂ ಡದರು.
ಸಂಗಮ ಪರಿಸರದಲ್ಲಿ ಮತ್ತೆ ಕಸ ಡಂಪಿಂಗ್ ಮಾಡಲು ಸಾಧ್ಯವಿಲ್ಲ. ಸದಸ್ಯರು ಬೇರೆ ಸ್ಥಳ ಸೂಚಿಸದರೆ ಸ್ಥಳಾಂತರ ಅಡ್ಡಿಯಿಲ್ಲ. ತ್ಯಾಜ್ಯ ಡಂಪ್ ಬಗ್ಗೆ ಸ್ಥಳೀಯರ ವಿರೋಧ ಇಲ್ಲ ಎಂಬ ಮುಖ್ಯಾಧಿಕಾರಿ ಉತ್ತರ ಸದಸ್ಯರಿಗೆ ಸರಿ ಬರಲಿಲ್ಲ.
ಸ್ಥಳೀಯರು ತ್ಯಾಜ್ಯ ಡಂಪ್ ಬಗ್ಗೆ ವಿರೋಧವಿದೆ. ಯಾರಿಗೂ ಸಮಸ್ಯೆ ಇಲ್ಲಾ ಎನ್ನೋದು ಸರಿಯಲ್ಲ. ತ್ಯಾಜ್ಯ ಕಂನ್ಟೈನರ್ ಸ್ಥಳಾಂತರಕ್ಕೆ ನಿರ್ಣಯ ಮಾಡುವಂತೆ ಒತ್ತಾಯಿಸಿದ್ದು, ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್ ತ್ಯಾಜ್ಯ ತೊಟ್ಟಿ ಹಿಂದೆ ಎಲ್ಲಿತ್ತೋ ಅಲ್ಲಿಗೆ ಸ್ಥಳಾಂತರಿಸುವಂತೆ ಸೂಚಿಸಿದರು.
ನಿವೇಶನ ರಹಿತರು ಮನೆಗಾಗಿ ಅರ್ಜಿ ಹಾಕಿದ್ದಾರೆ. ಹಾಗೆ ನಿವೇಶನ ಇದ್ದವರೂ ಮನೆ ಕಟ್ಟಿಕೊಂಡಿಲ್ಲ. ಮನೆ ಕಟ್ಟಿಕೊಳ್ಳಲು ಸರಕಾರ ನೀಡುವ ಅನುದಾನ ಅಲ್ಲದೆ ಬ್ಯಾಂಕ್ ಸಾಲ ಸೌಲಭ್ಯ ಸಿಗುತ್ತದಾ ಎಂದು ಸದಸ್ಯೆ ಗುಣರತ್ನ ಪ್ರಶ್ನೆಯಿಂದ ಹಿಂದಿನ ಸಭೆಯ ಬಗ್ಗೆ ಸಭೆಯಲ್ಲಿ ಸುಧೀಘ ಚರ್ಚೆ ನಡೆದು, ಮಾತಿನ ಸಮರವೇ ನಡೆದು ಸಭೆ ನಡೆಯುತ್ತದಾ ಇಲ್ಲವಾ ಎನ್ನುವ ಮಟ್ಟಕ್ಕೆ ಹೋಯಿತು.
ಮನೆ, ಅಂಗಡಿ ಮುಂಗಟ್ಟು ತೆರಿಗೆ ಬಗ್ಗೆ ವಿಷಯ ಪ್ರಸ್ತಾಪಿಸದ ಹಿರಿಯ ಸದಸ್ಯ ಮೋಹನದಾಸ್ ಶೆಣೈ ತೆರಿಗೆ ವಸೂಲಿ ಸಮಸ್ಯೆ ಆಗುತ್ತಿದೆ. ಸಿಆರ್‌ಝಡ್ ಸಮಸ್ಯೆ ಪರಿಹಾರಕ್ಕೆ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ಇಕ್ಕಟ್ಟಿನಲ್ಲಿ ಪುರಸಭೆ ನಿರ್ಣಯ ತೆಗೆದುಕೊಂಡು ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ವಸಂತಿ ಮೋಹನ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.