ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಮಣಿಪಾಲದಲ್ಲಿ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಏಟು ತಗಲಿ ಬ್ರೈನ್ ಡೆಡ್ ಆಗಿದ್ದ ಬೈಂದೂರಿನ ಖ್ಯಾತ ವೈದ್ಯ ಡಾ. ರವಿರಾಜ್ ಅವರ ಪುತ್ರ ಹಿಮಾಂಶುವಿನ ದೇಹದೊಳಗಿನ ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಅಗತ್ಯವಿರುವವರಿಗೆ ಜೋಡಿಲಾಗಿದ್ದು, ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಮುಂದಾಗಿದ್ದ ಕುಟುಂಬದ ನಿರ್ಣಯದಿಂದಾಗಿ ಯುವಕನ ಅಂಗಾಗಗಳು ಐವರ ಬಾಳಿಗೆ ಬೆಳಕಾಗಿದೆ.
ಅ.8ರ ಶನಿವಾರ ನಡೆದ ಅಪಘಾತದಲ್ಲಿ ಹಿಮಾಂಶುವಿನ ಬ್ರೈನ್ ಡೆಡ್ ಆಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ಬೆಂಗಳೂರಿನ ನುರಿತ ವೈದ್ಯರ ತಂಡ ಸೋಮವಾರ ಬೆಳಿಗ್ಗೆ 2:30ರ ವೇಳೆಗೆ ಅಂಗಾಂಗಗಳನ್ನು ಶಸ್ತ್ರಕ್ರಿಯೆ ಮೂಲಕ ಹೊರತೆಗೆದು ಅದನ್ನು ಬೆಂಗಳೂರಿಗೆ ರವಾನೆ ಮಾಡಿ ಬೇರೆ ದೇಹಕ್ಕೆ ಯಶಸ್ವಿಯಾಗಿ ಜೋಡಣೆ ಮಾಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಅಂಗಾಂಗ ದಾನ ಮಾಡುವ ಕುರಿತು ಸ್ವತಃ ವೈದ್ಯರಾಗಿರುವ ಡಾ. ರವಿರಾಜ್ ಹಾಗೂ ಸುಜಾತ ದಂಪತಿಗಳಿಂದ ಭಾನುವಾರ ಸಮ್ಮತಿ ದೊರೆತ ಕೂಡಲೇ ಕಾನೂನಿನ ವಿವಿಧ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು. ಅಂಗಾಂಗಗಳು ಕಾರ್ಯನಿರ್ವಹಿಸುತ್ತಲೇ ಇರಬೇಕು ಎನ್ನುವ ನೆಲೆಯಲ್ಲಿ ಕೃತಕ ಉಸಿರಾಟಕ್ಕಾಗಿ ದೇಹವನ್ನು ವೆಂಟಿಲೇಟರ್‌ನಲ್ಲಿ ಇಡುವ ವ್ಯವಸ್ಥೆ ಮಾಡಲಾಗಿತ್ತು.
ಲಿವರ್, ಕಿಡ್ನಿ, ಹೃದಯ ಮತ್ತು ಕಣ್ಣಿನ ಕಾರ್ನಿಯಾವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಜೋಡಣೆಗೆ ಶಸ್ತ್ರಕ್ರಿಯೆ ಮೂಲಕ ತೆಗೆದು ರವಾನಿಸಲು ನಿರ್ಧರಿಸಲಾಯಿತು. ಆಸ್ಪತ್ರೆಯ ಮೆಡಿಕಲ್ ಡೆಪ್ಯೂಟಿ ಸೂಪರಿಂಟೆಂಡೆಂಟ್ ಡಾ| ಪದ್ಮರಾಜ ಹೆಗ್ಡೆ ಅವರ ನೇತೃತ್ವದಲ್ಲಿ ಶಸ್ತ್ರಕ್ರಿಯೆ ಸಹಿತ ಎಲ್ಲ ಕಾರ್ಯಯೋಜನೆ ರೂಪಿಸಲಾಗಿತ್ತು. ಗ್ರೀನ್ ಕಾರಿಡಾರ್ ಮೂಲಕ ಅಂಗಾಂಗಗಳನ್ನು ಕೊಂಡೊಯ್ಯಲು ಅನುಕೂಲವಾಗುವಂತೆ ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಆಂಬುಲೆನ್ಸ್‌ನಲ್ಲಿ ಶಿತಿಲೀಕೃತ ಬಾಕ್ಸ್‌ನಲ್ಲಿ ಲಿವರ್, ಹೃದಯವನ್ನಿಟ್ಟು ಕೊಂಡೊಯ್ಯಲಾಗಿತ್ತು. ಕುಂದಾಪ್ರ ಡಾಟ್ ಕಾಂ ವರದಿ.
ವೈದ್ಯ ತಂದೆಯ ಹೃದಯ ಮಿಡಿಯಿತು:
ಬೈಂದೂರಿನ ಪ್ರಸಿದ್ಧ ಮಕ್ಕಳ ತಜ್ಞರಾಗಿರುವ ಡಾ. ರವಿರಾಜ್ ಅವರು ತಮ್ಮ ಪುತ್ರರಾಗಿರುವ ಹಿಮಾಂಶು ಬ್ರೈನ್ ಡೆಡ್ ಆಗಿರುವ ವಿಷಯ ಮಣಿಪಾಲದ ವೈದ್ಯರಿಂದ ದೃಢಪಟ್ಟ ಬಳಿಕ ಆತನ ಅಂಗಾಂಗ ದಾನ ಮಾಡುವ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದರು. ತಮ್ಮ ಸೇವಾವಧಿಯಲ್ಲಿ ಅದೆಷ್ಟೋ ಮಕ್ಕಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ತಮ್ಮ ಪುತ್ರನನ್ನು ಕಳೆದುಕೊಂಡಾಗಲೂ ಒಂದಿಷ್ಟೂ ತಮ್ಮ ವೃತ್ತಿಧರ್ಮವನ್ನು ಮಾತ್ರ ಮರೆಯಲಿಲ್ಲ.
ಐವರ ಬಾಳಿಗೆ ಬೆಳಕಾಯಿತು:
ಬಾಲಕನ ಎರಡು ಕಿಡ್ನಿಗಳನ್ನು ಮಣಿಪಾಲ ಆಸ್ಪತ್ರೆಯಲ್ಲಿದ್ದ ಶಿವಮೊಗ್ಗ ಮತ್ತು ಕುಂದಾಪುರದ ವ್ಯಕ್ತಿಗಳಿಗೆ ಕಿಡ್ನಿ ಜೋಡಿಸಲಾಯಿತು. ಬೆಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರಿಗೆ ಲಿವರ್ ಮತ್ತೂಬ್ಬರಿಗೆ ಹೃದಯದ ಆವಶ್ಯಕತೆ ಇದ್ದಿತ್ತು. ಬೆಂಗಳೂರು ಮಣಿಪಾಲ ಆಸ್ಪತ್ರೆಯ ಡಾ| ರವಿಚಂದರ್ ರವಿವಾರ ಮಣಿಪಾಲ ಆಸ್ಪತ್ರೆಗೆ ಆಗಮಿಸಿ ಡಾ| ಪದ್ಮರಾಜ ಹೆಗ್ಡೆ ಅವರ ತಂಡದೊಂದಿಗೆ ಚರ್ಚಿಸಿ ಶಸ್ತ್ರಕ್ರಿಯೆ ನಡೆಸಿ ಲಿವರ್ ಮತ್ತು ಹೃದಯವನ್ನು ತೆಗೆದು ಶೀತಲೀಕೃತ ಪೆಟ್ಟಿಗೆಯಲ್ಲಿ ಇರಿಸಿಕೊಂಡು ಬೆಳಗ್ಗೆ 8ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರು ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಲಿವರ್ ಅನ್ನು ಅಲ್ಲಿಗೆ ಹೋದ ತತ್‌ಕ್ಷಣ ವ್ಯಕ್ತಿಗೆ ಜೋಡಿಸಲಾಯಿತು. ಹೃದಯವನ್ನು ಆಮೇಲೆ ಇನ್ನೋರ್ವ ವ್ಯಕ್ತಿಗೆ ಅಳವಡಿಸಲಾಯಿತು. ಕಣ್ಣಿನ ಕಾರ್ನಿಯಾವನ್ನು ಆಸ್ಪತ್ರೆಯ ಕಾರ್ನಿಯಾ ಬ್ಯಾಂಕ್‌ನಲ್ಲಿ ಇರಿಸಿಕೊಳ್ಳಲಾಗಿದೆ. ಅದನ್ನು ಅಗತ್ಯವಿರುವವರಿಗೆ ಅಳವಡಿಸಲಾಗುವುದು. ಈ ಮೂಲಕ ೫ ಮಂದಿಗೆ ಬಾಲಕನ ದೇಹದ ಅಂಗಾಂಗಗಳು ಸಹಕಾರಿಯಾದಂತಾಗುತ್ತದೆ ಎಂದು ಆಸ್ಪತ್ರೆ ಮುಖ್ಯಸ್ಥರು ಹೇಳಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಯೂರಾಲಜಿ ವಿಭಾಗದ ಮುಖ್ಯಸ್ಥ ಡಾ| ಪದ್ಮರಾಜ್ ಹೆಗ್ಡೆ ಅವರೊಂದಿಗೆ ಡಾ| ಅರುಣ್ ಚಾವ್ಲಾ ಸಹಕರಿಸಿದ್ದರು. ಕಿಡ್ನಿ ಜೋಡಿದ ವ್ಯಕ್ತಿಗಳು ಆರೋಗ್ಯ ವಂತರಾಗಿದ್ದು, ಕಿಡ್ನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ.
Read this
► ಬೈಂದೂರು: ಅಘಫಾತದಲ್ಲಿ ಹಿಮಾಂಶುವಿನ ಬ್ರೈನ್ ಡೆಡ್, ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ – http://kundapraa.com/?p=18111